ಕೊತ್ವಾಲ್ ಕಾಂಗ್ರೆಸ್ ಎಂದು ಮರುನಾಮಕರಣ ಮಾಡುವುದೇ ಸೂಕ್ತ : ಬಿಜೆಪಿ

Social Share

ಬೆಂಗಳೂರು,ಜ.24- ಮನೆಗೆ ನುಗ್ಗಿಸಿ ಹೊಡಿತೇವೆ, ವೇಶ್ಯೆ, ಹೊಡಿ ಬಡಿ ಕಡಿ, ಈ ರೀತಿಯ ಸಭ್ಯ ಸಮಾಜವನ್ನಷ್ಟೇ ಅಲ್ಲದೇ ನೈಜ ರೌಡಿಗಳನ್ನೂ ನಾಚಿಸುವಂತಹ ಮಟ್ಟಿಗೆ ಇಳಿದಿದೆ ಕಾಂಗ್ರೆಸ್ ಗೂಂಡಾ ಪಡೆ. ಇವರು ಕಾಂಗ್ರೆಸ್ ಪಕ್ಷದ ಹೆಸರನ್ನು ಕೊತ್ವಾಲ್ ಕಾಂಗ್ರೆಸ್ ಎಂದು ಮರುನಾಮಕರಣ ಮಾಡಿಕೊಳ್ಳುವುದು ಸೂಕ್ತ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪ್ರತಿಭಟಿಸುವುದು ಎಂದರೆ ಇಲಿಗಳ ಸಂರಕ್ಷಣೆಗೆ ಬೆಕ್ಕು ಕಟಿಬದ್ಧವಾದಂತೆ. ಆದರೆ ಸುಳ್ಳು ಸಾರುವ ಅಂಥ ಪ್ರತಿಭಟನೆಗೆ ಜನ ನೀರಸವಾಗಿ ಪ್ರತಿಕ್ರಿಯಿಸಿರುವುದೇ ರಾಜ್ಯದಲ್ಲಿ ಬಿಜೆಪಿ ಪರ ಒಲವಿರುವುದಕ್ಕೆ ಸಾಕ್ಷಿ ಎಂದಿದೆ.

ಭ್ರಷ್ಟಾಚಾರದ ಸುಳ್ಳು ಆರೋಪದ ಬಗ್ಗೆ ಸರ್ಕಾರ ಕೇಳಿದಾಗ ಕೊಡಲು ಸಾಕ್ಷ್ಯಾಧಾರವೇ ಇರಲಿಲ್ಲ. ಸಾಕ್ಷಿ ಕೊಟ್ಟರೆ ಕ್ರಮ ಖಂಡಿತ ಎಂದ ಪ್ರಧಾನಿ ಕಾರ್ಯಾಲಯಕ್ಕೂ ಇವರಲ್ಲಿ ಉತ್ತರವಿಲ್ಲ. ನ್ಯಾಯಾಲಯಕ್ಕೆ ಕೊಡಲೂ ಸಾಕ್ಷಿಯಿಲ್ಲದ ಆರೋಪವೇ ಹುಸಿ ಎಂಬುದನ್ನು ಜನ ಅರಿತಿದ್ದಾರೆ ಎಂದಿ ಟೀಕಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ನಡೆಸಿದ ಭ್ರಷ್ಟಾಚಾರ ಪ್ರಕರಣಗಳನ್ನು ಜನರು ಇನ್ನು ಮರೆತಿಲ್ಲ. ಇವರ ಪ್ರತಿಭಟನೆಗೆ ಸೊಪ್ಪು ಹಾಕಿಲ್ಲ. ಒಂದು ಪುಟ್ಟ ಬಸ್ ಸ್ಟ್ಯಾಂಡ್‍ನಲ್ಲಿ ಇರುವಷ್ಟೂ ಜನರಿಲ್ಲದೆ ಕಾಂಗ್ರೆಸ್ ಪ್ರತಿಭಟನೆ ಬಿಕೋ ಎನ್ನುತ್ತಿತ್ತು.

ಗಣರಾಜ್ಯೋತ್ಸವಕ್ಕೆ ಸಕಲ ಸಿದ್ದತೆ

ಕಾರ್ಯಕರ್ತರನ್ನು ನಂಬುವುದಕ್ಕಿಂತ ಹೆಚ್ಚು ಹಣ ಪಡೆದು ಸಭೆಗೆ ಬರುವವರ ಮೇಲೆ ಆಶ್ರೀತರಾದಾಗ ಹೀಗೆಯೇ ಆಗುವುದು. ಆದರೆ ಕಾರ್ಯಕರ್ತರನ್ನೇ ಸುಲಿಗೆ ಮಾಡುವ ಪಕ್ಷಕ್ಕೆ ಜನಪರ ಕಾಳಜಿ ಇರುವ ಕಾರ್ಯಕರ್ತರೂ ಸಿಗುವುದಿಲ್ಲ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಇಂದಿನ ಪ್ರತಿಭಟನೆ ತಾಜಾ ಉದಾಹರಣೆ ಎಂದು ವ್ಯಂಗ್ಯವಾಡಿದೆ.

ಪ್ರತಿಭಟನೆಗೆ ಬಂದು ಫಲಕ ಹಿಡಿದರೂ, ಬಂದ ಕಾರಣ ತಿಳಿಯದವರನ್ನು ಕಾಂಗ್ರೆಸ್ ರಸ್ತೆಯಲ್ಲಿ ನಿಲ್ಲಿಸಿದೆ. 2019 ರ ಲೋಕಸಭಾ ಚುನಾವಣೆ ವೇಳೆ ಬರೆದುಕೊಟ್ಟ ಚೀಟಿಯನ್ನೇ ಉರುಹೊಡೆದ ಪ್ರತಿಭಟನಾಕಾರರು ಅದನ್ನೇ ಇವತ್ತೂ ಗಿಣಿಪಾಠದಂತೆ ಒಪ್ಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಯಾವ ಮಟ್ಟಿಗೆ ಭ್ರಷ್ಟಚಾರ ನಡೆಸಿತ್ತು ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕರ್ನಾಟಕ ಹೇಗೆ ದೆಹಲಿ ಪಾಲಿನ ಎಟಿಎಂ ಆಗಿತ್ತು ಎಂಬುದನ್ನು ಜನ ಇನ್ನೂ ಮರೆತಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಕೈ ಹಿಡಿಯುವುದಿಲ್ಲ ಎಂಬುದಕ್ಕೆ ಈ ಪ್ರತಿಭಟನೆಯೇ ಕೈಗನ್ನಡಿ ಎಂದು ಕುಟುಕಿದೆ.

ರಾಜ್ಯದಲ್ಲಿ 2013ರಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದೇ ಕಾಂಗ್ರೆಸ್ ಪಾಲಿಗೆ ಎಟಿಎಂ ಆಗಲು. ಇಳಿಜಾರಿನಲ್ಲಿ ಕಾಲಿಟ್ಟ ಪಕ್ಷಕ್ಕೆ ಅಹರ್ನಿಶಿ ಸಂಪನ್ಮೂಲ ಒದಗಿಸುತ್ತಿದ್ದ ಸಿದ್ದರಾಮಯ್ಯ ಹೈ ಕಮಾಂಡ್‍ಗೆ 1000 ಕೋಟಿ ರೂ. ಕಳುಹಿಸಿದ ಬಗ್ಗೆ ಗೋವಿಂದರಾಜು ಆಪ್ತರ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸಾಕ್ಷಿಯಿದೆ. ಸಿದ್ದರಾಮಯ್ಯ ಮೇಲಿನ ಜವಾಬ್ದಾರಿ ಎಷ್ಟಿತ್ತು ಎಂಬುದನ್ನು ಅವರ ಕಾಲದಲ್ಲಿ ನಡೆದ ವಿವಿಧ ಬಹುಕೋಟಿ ರೂ. ಹಗರಣಗಳು ಸ್ಪಷ್ಟಪಡಿಸುತ್ತವೆ ಎಂದು ಕಿಡಿಕಾರಿದೆ.

ಪುನರ್‍ಪರಿಶೀಲನೆ ಮಾಡಿ ಎಂದು ನ್ಯಾಯಾಲಯದ ಹೇಳಿದ ರೀಡೂವನ್ನೇ ಹಿಡಿದು ಅರ್ಕಾವತಿ ಅಕ್ರಮ ಡೀನೋಟಿಫಿಕೇಶನ್‍ನಲ್ಲಿ ಸಾವಿರಕ್ಕೂ ಹೆಚ್ಚು ಕೋಟಿ ರೂ. ಹಗರಣ ನಡೆಸಿದಿರಿ. ಕಸದಿಂದಲೂ ಕೋಟಿ ಕೋಟಿ ಲೂಟಿ ಮಾಡಿದ ಕೀರ್ತಿ ಸಮಾಜವಾದಿ ಕಾಂಗ್ರೆಸ್ಸಿಗ ಸಿದ್ದರಾಮಯ್ಯನವರದ್ದು. 2015-16ರಲ್ಲಿ ಕಸ ವಿಲೇವಾರಿಗೆ ಮಾಡಿದ್ದ 385 ಕೋಟಿ ರೂ. 2016-17ಕ್ಕೆ 1066 ಕೋಟಿ ರೂ. ಆದದ್ದು ತಮ್ಮ ಹಾಗೂ ಕೆ.ಜೆ.ಜಾರ್ಜ್ ಕೈ ಚಳಕದ ಪರಿಣಾಮವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದೆ.

ಕಾಲ ಕಳೆದಂತೆ ಜನ ಹಳೆಯ ವಿಚಾರಗಳನ್ನು ಮರೆಯುತ್ತಾರೆ ಎಂದು ಮಾನ್ಯ ಡಿ. ಕೆ. ಶಿವಕುಮಾರ್ ಭಾವಿಸಿದ್ದಾರೆ. ತಾನು ವ್ಯವಹಾರವೇ ನಡೆಸಬಾರದಾ? ಎಂದು ಮುಗ್ದ ವ್ಯಾಪಾರಿಯಂತೆ ಪ್ರಶ್ನಿಸುವ ಅವರು 2017ರಲ್ಲಿ ದೆಹಲಿಯ ಅವರ ನಿವಾಸದಲ್ಲಿ 8.86 ಕೋಟಿ ರೂ.ನಷ್ಟು ನಗದು ನಳನಳಿಸುತ್ತಿದ್ದುದು ಹೇಗೆ? ಎಂದು ಇನ್ನೂ ತಿಳಿಸಿಲ್ಲ.

ಸೌರ ವಿದ್ಯುತ್ ಹೆಸರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಂತ್ರಜ್ಞಾನವನ್ನೇ ಮೀರಿಸುವಂತೆ ಭ್ರಷ್ಟಾಚಾರ ನಡೆಸಿದ್ದರು. ಸದಾ ಸರ್ವರ್ ಬಿಜಿಪಿ ಇರಿಸಿ ತಮಗೆ ಬೇಕಾದ ಆಯ್ದ ವ್ಯಕ್ತಿಗಳ ಜತೆ ವ್ಯವಹಾರ ಕುದುರಿಸಿದ ಮೇಲೆ ಏಳೇ ನಿಮಿಷಗಳಲ್ಲಿ ಕೋಟ್ಯಂತರ ರೂ. ಟೆಂಡರ್ ಪ್ರಕ್ರಿಯೆ ಮುಗಿಸಿದ ಕೀರ್ತಿ ಅವರದ್ದು.

ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಇನ್ನೂ ನಿರ್ಧಾರವಾಗಿಲ್ಲ : ಜಿಲ್ಲಾಧಿಕಾರಿ

ಆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತಾಯಿ ಹಾಗೂ ಸಹೋದರನ ಹೆಸರಲ್ಲೂ ಟೆಂಡರ್ ಮಾಡಿಸಿದ ಡಿ ಕೆ ಶಿವಕುಮಾರ್ ಬೇನಾಮಿ ವ್ಯವಹಾರದ ಎಕ್ಸ್‍ಪರ್ಟ್. ಈಗಲೂ ತಾವು ಇಡಿ ಕರೆದಾಗ ಪಿಕ್ನಿಕ್ ರೀತಿ ಹೋಗಿ ಮಾಧ್ಯಮಗಳ ಮುಂದೆ ಅವಲತ್ತುಕೊಳ್ಳುತ್ತಾರೆಯೇ ವಿನಃ ಆರೋಪ ಅಲ್ಲಗಳೆಯುವ ಯಾವುದೇ ಸಾಕ್ಷ್ಯ ಒದಗಿಸಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧವೂ ಆರೋಪಗಳ ಮಳೆಗೈದಿದೆ.

ಕಾಂಗ್ರೆಸ್ ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಡೆಸುವ ಹಾಸ್ಟೆಲ್‍ಗಳಿಗೆ ಹಾಸಿಗೆ-ದಿಂಬು ಖರೀದಿಯಲ್ಲೂ ಸಿದ್ದರಾಮಯ್ಯ ಸರ್ಕಾರ ನೋಡಿದ್ದು ಹಣ ಕಬಳಿಸುವ ದಾರಿಯನ್ನೇ. 14 ಕೋಟಿ ರೂ. ಆ ರೀತಿ ನುಂಗಿದರೆ, ಆಹಾರ ಪೂರೈಕೆ ಗುತ್ತಿಗೆಗೆ ಹೆಚ್. ಆಂಜನೇಯ ಪತ್ನಿ 7 ಲಕ್ಷ ರೂ. ಲಂಚಕ್ಕೆ ಕೈ ಒಡ್ಡಿ ವೀಡಿಯೋ ಸಹಿತ ಸಿಕ್ಕುಬಿದ್ದರು. ಇವು ಕೇವಲ ಸ್ಯಾಂಪಲ್‍ಗಳಷ್ಟೇ ಎಂದು ವ್ಯಂಗ್ಯವಾಡಿದೆ.

ಇಂಥ ಘನಂದಾರಿ ಕೆಲಸ ಮಾಡಿದ ಕಾಂಗ್ರೆಸ್ ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಯಾವ ನೈತಿಕತೆಯೂ ಉಳಿದಿಲ್ಲದ ಕೈ ನಾಯಕರು ಆಡುವ ಮಾತಿಗೆ ಆಧಾರಗಳೂ ಕೊಡುತ್ತಿಲ್ಲ. ಸುಳ್ಳನ್ನೇ ನೂರು ಬಾರಿ ಗಟ್ಟಿಯಾಗಿ ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುವ ಹಳೇ ಸೂತ್ರದಲ್ಲೇ ಇದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

Congress, protest, BJP, assembly, election,

Articles You Might Like

Share This Article