“ಒಳಜಗಳ ಮುಚ್ಚಿಕೊಳ್ಳಲು ಕಾಂಗ್ರೆಸ್ ಪ್ರತಿಭಟನೆ”

Social Share

ಬೆಂಗಳೂರು,ಫೆ,17- ಕಾಂಗ್ರೆಸ್ ನಾಯಕರಲ್ಲಿರುವ ಆಂತರಿಕ ಒಳಜಗಳವನ್ನು ಮುಚ್ಚಿಕೊಳ್ಳಲು ಒಗ್ಗಟ್ಟು ಪ್ರದರ್ಶನಕ್ಕಾಗಿ ಸದನ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸದನದ ಕಾರ್ಯ- ಕಲಾಪಕ್ಕೆ ಅಡ್ಡಿಪಡಿಸಿ ಸದನದ ಸಮಯವನ್ನು ವ್ಯರ್ಥ ಮಾಡುವ ಮೂಲಕ ಮತ್ತಷ್ಟು ದುರ್ಬಲವಾಗಲಿದೆ. ಅದರಿಂದ ಕಾಂಗ್ರೆಸ್ ಬಲ ವೃದ್ಧಿಯಾಗುವುದಿಲ್ಲ.
ಹಿಜಾಬ್ ವಿಚಾರ ಕಾಂಗ್ರೆಸ್‍ಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಅದನ್ನು ಡೈವರ್ಟ್ ಮಾಡಲು ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಈಶ್ವರಪ್ಪ ಅವರು ರಾಷ್ಟ್ರದ ಬಗ್ಗೆ ಅಪಾರ ಅಭಿಮಾನ ಉಳ್ಳವರಾಗಿದ್ದಾರೆ. ಅವರು ಅಗೌರವ ತೋರುವಂಥವರಲ್ಲ. ಅವರಿಗಿಂತ ದೇಶಭಕ್ತರು ಇದ್ದಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯಪಾಲರ ಹುದ್ದೆ ಸಾಂವಿಧಾನಿಕವಾದದ್ದು. ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ್ದಾರೆ. ಅವರು ಮಾಡಿರುವ ಭಾಷಣದ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ವಂದನಾ ನಿರ್ಣಯ ಸಲ್ಲಿಸುವ ಮೂಲಕ ಗೌರವ ಸಲ್ಲಿಸಬೇಕು. ಆ ಮೂಲಕ ಸಂವಿಧಾನಕ್ಕೂ ಗೌರವ ಸಲ್ಲಿಸಿದಂತಾಗುತ್ತದೆ. ಅದನ್ನು ಬಿಟ್ಟು ಕ್ಷುಲ್ಲಕ ವಿಚಾರ ಮುಂದಿಟ್ಟು ಕಲಾಪಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಟೀಕಿಸಿದರು.
ಹಿಜಾಬ್ ವಿವಾದದ ಹಿಂದೆ ಮತೀಯ ಶಕ್ತಿ ಕೈವಾಡವಿದೆ ಎಂಬುದು ಸಂದೇಹವಾಗಿತ್ತು. ಸಿಎಫ್‍ಐ ಅದನ್ನು ಒಪ್ಪಿಕೊಂಡಿದೆ. ಹೀಗಾಗಿ ಪೊಲೀಸರು ಹಿಜಾಬ್ ವಿವಾದದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಗಂಭೀರ ತನಿಖೆ ಮುಂದುವರೆಸಿದ್ದಾರೆ. ದೇಶವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಅದಕ್ಕೆ ಅವಕಾಶವಿಲ್ಲದಂತೆ ಸಮರ್ಥವಾಗಿ ಎದುರಿಸುತ್ತೇವೆ ಎಂದು ಸಚಿವರು ತಿಳಿಸಿದರು.

Articles You Might Like

Share This Article