ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

Social Share

ಬೆಂಗಳೂರು,ಮಾ.4- ಕೆಎಸ್‍ಡಿಎಲ್ ಟೆಂಡರ್ ಲಂಚ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು, ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದೆ.

ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್‍ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲಿಂ ಅಹ್ಮದ್, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ ಸೇರಿದಂತೆ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಿದ್ದರಾಮಯ್ಯ ಸೂಟ್‍ಕೇಸ್ ಹಿಡಿದುಕೊಂಡು ಮುಖ್ಯಮಂತ್ರಿ ಮನೆಯತ್ತ ಮೆರವಣಿಗೆ ನಡೆಸಿದರು. ಮಾಡಾಳ್ ವಿರುಪಾಕ್ಷಪ್ಪ ಅವರ ಮನೆಯಲ್ಲಿ ಸಿಕ್ಕ ಕಂತೆ ಕಂತೆ ಹಣವನ್ನು ತುಂಬಿದ್ದ ಬ್ಯಾಗ್‍ಗಳ ಹಾಗೂ ನೋಟುಗಳ ಅಣುಕು ಪ್ರದರ್ಶನ ನಡೆಸಲಾಯಿತು.

ಭಾರತದ ಸಾಧನೆಯ ಗುಣಗಾನ ಮಾಡಿದ ಬಿಲ್‍ಗೇಟ್ಸ್

ಬಿಜೆಪಿಯದು ರೂಲ್‍ಕಾಲ್ ಮಾಡೇಲ್, ಜನ ವಿರೋಧಿ ಬಿಜೆಪಿ, ಶೇ.40ರಷ್ಟು ಕಮಿಷನ್ ಸರ್ಕಾರ ಎಂಬ ಹಲವು ರೀತಿಯ ಬರಹಗಳಿದ್ದ ಸೂಟ್‍ಕೇಸ್ ಮಾದರಿಯ ಪೋಸ್ಟರ್‍ಗಳನ್ನು ಕಾರ್ಯಕರ್ತರು ಪ್ರದರ್ಶನ ಮಾಡಿದರು.

ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಪೋಸ್ಟ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯುದ್ಧಕ್ಕೂ ಬಿಜೆಪಿ ವಿರುದ್ದ ಘೋಷಣೆ ಕೂಗಲಾಯಿತು. ಚುನಾವಣೆ ಕಾಲದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಮರವನ್ನೇ ಸಾರಿರುವ ಕಾಂಗ್ರೆಸ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತು.

ಪ್ರತಿಭಟನೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ,ತಮ್ಮ ರಾಜಕೀಯ ಜೀವನನದಲ್ಲಿ ಇಂತಹ ಭ್ರಷ್ಟಸರ್ಕಾರವನ್ನು ನೋಡಿಯೇ ಇರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರನ್ನೂ ಮೀರಿಸುವಷ್ಟು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿಯನ್ನೇ ಸ್ಥಾಪನೆ ಮಾಡಿಕೊಂಡಿದ್ದಾರೆ. ಪ್ರತಿಬಾರಿಯೂ ಬೊಮ್ಮಾಯಿ, ಹಿಂದೆಯೂ ಭ್ರಷ್ಟಚಾರ ನಡೆದಿದೆ ಎಂದು ಹೇಳುವ ಮೂಲಕ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದ ಅವರು, ಇಷ್ಟು ದಿನ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಏನು ಮಾಡುತ್ತಿದ್ದರು, ಭ್ರಷ್ಟಚಾರ ನಡೆದಿದ್ದರೆ ಅದನ್ನು ತನಿಖೆ ನಡೆಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಭ್ರಷ್ಟಚಾರಕ್ಕೆ ದಾಖಲೆ ಕೊಡಿ ಎಂದು ಮುಖ್ಯಮಂತ್ರಿ ಈವರೆಗೂ ಕೇಳುತ್ತಿದ್ದರು. ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಮಗ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ, ನಡೆಸಿರುವುದು ಎಂಟು ಕೋಟಿ ರೂಪಾಯಿಗೂ ಅಧಿಕ ಮೊತ್ತ ವಶ ಪಡಿಸಿಕೊಂಡಿರುವುದು, ಪ್ರಶಾಂತ್‍ನನ್ನು ಬಂಧಿಸಿರುವುದು ಕಣ್ಣೇದುರೆ ಇದೆ.

ಭ್ರಷ್ಟಚಾರಕ್ಕೆ ಇದಕ್ಕಿಂತಾ ಸಾಕ್ಷ್ಯ ಬೇಕಾ ಎಂದು ಪ್ರಶ್ನಿಸಿದರು. ಪಿಎಎಸ್‍ಐ ಹಗರಣದಲ್ಲಿ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರೇ ಜೈಲು ಸೇರಿದ್ದಾರೆ. ಮತ್ತೊಂದು ಹಗರಣದಲ್ಲಿ ಜಿಲ್ಲಾಧಿಕಾರಿ ಜೈಲು ಸೇರಿದ್ದಾರೆ. ಆದರೂ ಮುಖ್ಯಮಂತ್ರಿ ಭ್ರಷ್ಟಚಾರಕ್ಕೆ ಸಾಕ್ಷಿ ಕೇಳುತ್ತಾರೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಿಜೆಪಿಯ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ರಣದೀಪ್‍ಸಿಂಗ್ ಸುರ್ಜೇವಾಲ, ಬಿಜೆಪಿಯನ್ನು ಭ್ರಷ್ಟ ಬೋಮ್ಮಾಯಿ ಸರ್ಕಾರ ಎಂದು ಹೆಸರು ಬದಲಾವಣೆ ಮಾಡುವುದು ಸೂಕ್ತವಾಗಿದೆ. ಜನರಿಗೆ ಶೇ.40ರಷ್ಟು ಕಮಿಷನ್ ದಂಧೆ ಅರ್ಥವಾಗಿದೆ. 20 ರೂಪಾಯಿ ಸೋಪಿನಲ್ಲೂ ಬಿಜೆಪಿ ಸರ್ಕಾರ ಹಗರಣ ಮಾಡಿದೆ. ಸಾನೂನಿನ ಸುಗಂಧದಲ್ಲೂ ಭ್ರಷ್ಟಚಾರ ದುರ್ಗಂಧ ಬೀರುವಂತೆ ಬಿಜೆಪಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮಲಿಂಗಾರೆಡ್ಡಿ, ಪಿಎಸ್‍ಐ ಸೇರಿದಂತೆ ಬೇರೆ ಬೇರೆ ಹಗರಣಗಳು ಕೇಳಿ ಬಂದಾಗ ಸಾಕ್ಷ್ಯ ಕೊಡಿ ಎಂದು ಬಿಜೆಪಿಯವರು ಕೇಳುತ್ತಿದ್ದರು. ಈಗ ಲೋಕಾಯುಕ್ತರೆ ಬಿಜೆಪಿ ಶಾಸಕರ ಮನೆಯ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಣವನ್ನು ಪತ್ತೆ ಹಚ್ಚಿದ್ದಾರೆ. ಇನ್ನೇನು ಸಾಕ್ಷ್ಯಬೇಕು. ಬಿಜೆಪಿ ಭ್ರಷ್ಟ ಜನರ ಪಕ್ಷ ಎಂದು ಸಾಬೀತಾಗಿದೆಯಲ್ಲ ಎಂದರು.

ಅಧಿಕಾರದ ಕೊನೆಯ ದಿನಗಳಲ್ಲಿ ಇರುವ ಈ ಸರ್ಕಾರದಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತಾ ಶಾ ರಾಜ್ಯ ಸರ್ಕಾರದ ಭ್ರಷ್ಟಚಾರವನ್ನು ನಿಯಂತ್ರಣ ಮಾಡುತ್ತಿಲ್ಲ. ಮತ್ತಷ್ಟು ಕುಮ್ಮಕ್ಕು ನೀಡುತ್ತಿದ್ದಾರೆ. ಏನಾದರೂ ಮಾಡಿಕೊಳ್ಳಿ ಮತ್ತೆ ಅಧಿಕಾರಕ್ಕೆ ಬನ್ನಿ ಎಂದು ಹೇಳಿದಂತಿದೆ. ಅದಕ್ಕಾಗಿ ಬಿಜೆಪಿಯವರು ಲೂಟಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಭ್ರಷ್ಟಚಾರ ನಡೆಯುತ್ತಲೇ ಇದೆ. ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಲೇ ಇದೆ ಎಂದರು.

ಪಾಕ್‍ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ; ಭಾರತ ತಿರುಗೇಟು

ಕೃಷ್ಣಬೈರೇಗೌಡ ಮಾತನಾಡಿ, ಬಿಜೆಪಿ ಶಾಸಕರ ಮನೆಯಲ್ಲೇ ಎಂಟು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ದೊರೆತಿದೆ. ಕಮಿಷನ್ ದಂಧೆ ಶೇ.40ರಷ್ಟಕ್ಕೆ ಸೀಮಿತವಾಗಿಲ್ಲ, ಅದು ಶೇ.60ರಷ್ಟಕ್ಕೆ ಏರಿದೆ. ಬಿಜೆಪಿಯ ಎಲ್ಲಾ ಶಾಸಕರ ಮನೆಯನ್ನೂ ಶೋಧಿಸಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಬಿಜೆಪಿಯವರಿಗೆ ಹಣ ಲೂಟಿ ಮಾಡಿ, ಅದನ್ನು ಚೆಲ್ಲಿ (ಖರ್ಚು ಮಾಡಿ) ಮತ್ತೆ ಗೆದ್ದು ಬನ್ನಿ ಎಂದು ಹೇಳಿದ್ದಾರೆ. ಅದಕ್ಕಾಗಿ ಬಿಜೆಪಿಯವರು ಸಿಕ್ಕ ಸಿಕ್ಕ ಕಡೆಯಲೆಲ್ಲಾ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆ ಬಳಿಕ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಮೆರವಣಿಗೆಯ ಮೂಲಕ ನಡೆದರು. ಈ ವೇಳೆ ಪೊಲೀಸರು ಆರಾಧ್ಯ ವೃತ್ತದಲ್ಲಿ ಕಾಂಗ್ರೆಸಿಗರನ್ನು ತಡೆದರು.

ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು. ಮೆರವಣಿಗೆ ಮುಂದುವರೆಸಲು ಯತ್ನಿಸಿದಾಗ ಪಕ್ಷದ ನಾಯಕರು ಮತ್ತು ಪೊಲೀಸರು ನಡುವೆ ತಳ್ಳಾಟನೂಕಾಟ ನಡೆಯಿತು.

ಕೆಲ ಕಾರ್ಯಕರ್ತರ ಬಟ್ಟೆಗಳು ಹರಿದವು, ಹರಿದ ಬಟ್ಟೆಗಳೊಂದಿಗೆ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಪೊಲೀಸರು ಪಕ್ಷದ ಪ್ರಮುಖ ನಾಯಕರನ್ನು ವಶಕ್ಕೆ ಪಡೆದುಕೊಂಡ ಬಳಿಕ ಪ್ರತಿಭಟನೆ ಅಂತ್ಯಗೊಂಡಿತ್ತು.

Congress, protests, demanding, arrest, Madal Virupakshappa,

Articles You Might Like

Share This Article