ಪ್ರತಿಭಟನೆಗೆ ಸಜ್ಜಾಗಲು ವರ್ಚುವಲ್ ಸಭೆ ; ವಿಧಾನಸೌಧದ ಆವರಣದಿಂದಲೇ ನಾಯಕರ ಸಂವಾದ

Social Share

ಬೆಂಗಳೂರು, ಫೆ.20- ಸಚಿವ ಈಶ್ವರಪ್ಪ ಅವರ ವಿವಾದಿತ ಹೇಳಿಕೆ ವಿರುದ್ಧ ನಾಳೆ ಕಾಂಗ್ರೆಸ್ ರಾಜ್ಯಾದ್ಯಂತ ನಡೆಸಲಿರುವ ಪ್ರತಿಭಟನೆ ಹಾಗೂ ಫೆ.27ರಿಂದ ಮರು ಚಾಲನೆಯಾಗುವ ಪಾದಯಾತ್ರೆ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ವಿಧಾನಸೌಧದಿಂದಲೇ ತಮ್ಮ ಪಕ್ಷದ ನಾಯಕರ ಜೊತೆ ವರ್ಚುವಲ್ ಸಭೆ ನಡೆಸಿದರು.
ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಅವರು ನೀಡಿರುವ ಹೇಳಿಕೆಯನ್ನು ವಿರೋಸಿ ಕಾಂಗ್ರೆಸ್ ನಾಲ್ಕು ದಿನಗಳಿಂದ ವಿಧಾನಮಂಡಲದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಇಂದು ಧರಣಿಯ ಸ್ಥಳದಿಂದಲೇ ಕೆಪಿಸಿಸಿ ಅಧ್ಯಕ್ಷರು ಆನ್‍ಲೈನ್ ಮೂಲಕ ಸಭೆ ನಡೆಸಿದರು.
2018-19ನೇ ಸಾಲಿನ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳು, ಕೆಪಿಸಿಸಿಯ ಮುಂಚೂಣಿ ಘಟಕಗಳ ಹಾಗೂ ಜಿಲ್ಲಾಧ್ಯಕ್ಷರು, ಕೆಪಿಸಿಸಿ ಸಂಚಾಲಕರು, ಬ್ಲಾಕ್ ಅಧ್ಯಕ್ಷರು, ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ರಚಿಸಲಾಗಿರುವ ವಿವಿಧ ಸಮಿತಿಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಸಚಿವ ಈಶ್ವರಪ್ಪ ಅವರ ವಿರುದ್ಧ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ರವಾನೆ ಮಾಡಬೇಕು. ಪ್ರತಿಭಟನೆಯಲ್ಲಿ ಎಲ್ಲಾ ಸ್ಥಳೀಯ ನಾಯಕರು, ಚುನಾವಣೆ ಅಭ್ಯರ್ಥಿಗಳು ಭಾಗವಹಿಸಬೇಕು. ಸಚಿವ ಈಶ್ವರಪ್ಪ ಅವರ ವಿರುದ್ಧ ನಿಗದಿತ ನಮೂನೆಯಲ್ಲಿ ದೂರನ್ನು ಬರೆದು ತಹಸೀಲ್ದಾರ್ ಅವರಿಗೆ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಪ್ರತಿಭಟನೆಯ ವೇಳೆ ಶಾಂತಿ ಕಾಪಾಡಿಕೊಳ್ಳಬೇಕು, ಯಾವುದೇ ಪ್ರಚೋದನೆಗೆ ಒಳಗಾಗದೆ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಮ್ಮ ವಿರೋಧವನ್ನು ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ಬಳಿಕ ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ, ಈ ಮೊದಲು ಶುರು ಮಾಡಿದ್ದ ಪಾದಯಾತ್ರೆಯನ್ನು ಮತ್ತೆ ಫೆ.27ರಿಂದ ಆರಂಭಿಸಲಾಗುತ್ತದೆ. ಅದರಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದಲೂ ಆಸಕ್ತರು ಭಾಗವಹಿಸ ಬಹುದು. ಈ ಮೊದಲು ಜಿಲ್ಲಾವಾರು ಸಮಯ ನೀಡಲಾಗಿತ್ತು. ಆದರೆ ಮುಂದಿನ ಪಾದಯಾತ್ರೆಯಲ್ಲಿ ಆ ರೀತಿ ಮಾಡುವುದಿಲ್ಲ. ಯಾವ ಭಾಗದಿಂದಲಾದರೂ ಭಾಗವಹಿಸಬಹುದು. ಆದರೆ ಎಲ್ಲಿಂದ ಎಷ್ಟು ಜನ ಆಗಮಿಸುತ್ತಿರಾ ಎಂಬ ಮಾಹಿತಿಯನ್ನು ಮೊದಲೆ ನೀಡಬೇಕು. ಇದರಿಂದ ಊಟ, ವಸತಿ ವ್ಯವಸ್ಥೆ ಮಾಡಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷ ವಾಕ್ಯದಡಿ ಹೋರಾಟ ನಡೆಯಲಿದೆ. ಪ್ರತಿದಿನ 15 ಕಿಲೋ ಮೀಟರ್ ದೂರದಷ್ಟು ನಡೆಯಬೇಕಿದೆ. ಅದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕಾವೇರಿ ಜಲಾನಯನ ಭಾಗದ ಜನರ ಹಕ್ಕಿಗಾಗಿ ನಮ್ಮ ಈ ಹೋರಾಟ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮೇಕೆದಾಟು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಮತ್ತು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಅವರು ದೆಹಲಿಗೆ ಭೇಟಿ ನೀಡಿದಾಗ ಮೇಕೆದಾಟು ಯೋಜನೆಗೆ ಅನುಮತಿ ಪಡೆದು ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಈಡೇರಿಲ್ಲ. ಹಾಗಾಗಿ ಹೋರಾಟ ಮುಂದುವರೆಯಲಿದೆ ಎಂದು ಸುದ್ದಿಗಾರರಿಗೆ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Articles You Might Like

Share This Article