ಬೆಂಗಳೂರು, ಫೆ.20- ವಿವಾದಿತ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ತಲೆ ದಂಡಕ್ಕೆ ಪಟ್ಟು ಹಿಡಿದು ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಇಂದು ಕೂಡ ತನ್ನ ಹೋರಾಟವನ್ನು ಮುಂದುವರೆಸಿದ್ದು, ನಾಳೆ ನಡೆಯುವ ಅಧಿವೇಶನ ನಿರ್ಣಾಯಕವಾಗಲಿದೆ.
ದೆಹಲಿಯ ಕೆಂಪುಕೋಟೆ ಮೇಲೆ ಕೆಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ವಿರುದ್ಧ ದೇಶದ್ರೋಹದ ಆರೋಪದ ಅಡಿ ಪ್ರಕರಣ ದಾಖಲಿಸಬೇಕು ಮತ್ತು ಬಂಧಿಸಬೇಕು ಎಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ನಾಲ್ಕು ದಿನಗಳಿಂದಲೂ ವಿಧಾನ ಮಂಡಲದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇಂದು ಕೂಡ ಮುಂದುವರೆಸಿದೆ.
ಕಳೆದ ಬುಧವಾರ ವಿಧಾನಮಂಡಲದ ಉಭಯ ಸದಸನಗಳಲ್ಲಿ ಕಾಂಗ್ರೆಸ್ ಈಶ್ವರಪ್ಪ ಅವರ ವಿವಾದವನ್ನು ಪ್ರಸ್ತಾಪ ಮಾಡಿತ್ತು. ಸರ್ಕಾರ ಅದಕ್ಕೆ ಮನ್ನಣೆ ನೀಡಿದ್ದಾಗ ಗುರುವಾರದಿಂದ ವಿಧಾನಸಭೆ ಮತ್ತು ವಿಧಾನಪರಿಷತ್ ಸಭಾಂಗಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದೆ. ನಿನ್ನೆ ಶನಿವಾರ ಕೆಲಸದ ದಿನಾವಾಗಿದ್ದು, ವಿಧಾನ ಮಂಡಲದ ಸರ್ಕಾರಿ ಕಲಾಪಗಳಿಗೆ ರಜೆ ಇತ್ತು. ಇಂದು ಭಾನುವಾರ ಸರ್ಕಾರಿ ರಜಾ ದಿನವಾಗಿತ್ತು. ಆದರೂ ಎರಡು ದಿನವೂ ಕಾಂಗ್ರೆಸ್ ಅಹೋರಾತ್ರಿ ಧರಣಿ ಮುಂದುವರೆಸಿದೆ.
ಮೊದಲ ಹಾಗೂ ಎರಡನೇ ದಿನ ಸಂಧಾನಕ್ಕೆ ಬಂದ ಸರ್ಕಾರದ ಪ್ರತಿನಿಗಳು ನಂತರ ಅತ್ತ ತಲೆ ಹಾಕಿಲ್ಲ. ಇಂದು ಬೆಳಗ್ಗೆ ಸಭಾಧ್ಯಕ್ಷ ವಿಶ್ವೇಶರ ಹೆಗಡೆ ಕಾಗೇರಿ ಅವರು ವಿಧಾನಸಭೆಗೆ ಭೇಟಿ ನೀಡಿ ಧರಣಿ ನಿರತ ಶಾಸಕರ ಜೊತೆ ಸಮಾಲೋಚನೆ ನಡೆಸಿದರು. ವಿಧಾನ ಮಂಡಲ ಸಚಿವಾಲಯದಿಂದ ಶಾಸಕರಿಗೆ ಊಟ, ತಿಂಡಿ ಮತ್ತು ಮಲಗಲು ವ್ಯವಸ್ಥೆ ಮಾಡಲಾಗಿದೆ. ಮಾರ್ಷಲ್‍ಗಳು ಹಗಲು ರಾತ್ರಿ ಕಾವಲಿಗಿದ್ದಾರೆ. ಮಾಧ್ಯಮದವರನ್ನು ಸಭಾಂಗಣದ ಒಳಗೆ ಬಿಡದೆ ನಿರ್ಬಂಧಿಸಲಾಗಿದೆ. ಶಾಸಕರು ತಮ್ಮ ಪಾಡಿಗೆ ತಾವು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಾತಿನ ಮಂಟಪವಾಗಬೇಕಿತ್ತು ಸದನದ ಸಭಾಂಗಣ, ಮಲಗುವ ಕೋಣೆಯಾಗಿದೆ.
ನಾಳೆ ಎಂದಿನಂತೆ ಉಭಯ ಸದಸನಗಳ ಕಲಾಪ ಆರಂಭವಾಲಿವೆ. ನಾಲ್ಕು ದಿನಗಳಿಂದಲೂ ಅಹೋರಾತ್ರಿ ನಡೆಸಿರುವ ಕಾಂಗ್ರೆಸ್ ತನ್ನ ಬಿಗಿ ಪಟ್ಟನ್ನು ಮತ್ತಷ್ಟು ಹೆಚ್ಚಿಸಿದೆ. ಸಚಿವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಯಾವುದೇ ಕಲಾಪ ನಡೆಯಲು ಬಿಡುವುದಿಲ್ಲ ಎಂದು ನಿರ್ಧರಿಸಿದೆ.
ಈ ನಡೆವೆ ವಿವಿಧ ಸರ್ಕಾರಿ ಕಲಾಪಗಳ ಪಟ್ಟಿ ಸಿದ್ಧವಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ಚರ್ಚೆ ಅರ್ಧಕ್ಕೆ ನಿಂತಿದೆ. ಅದು ಮುಂದುವರೆಯಬೇಕಿದ್ದರೆ ಧರಣಿ ಅಂತ್ಯಗೊಳ್ಳಬೇಕು. ಸದ್ಯಕ್ಕೆ ಅಂತಹ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ.
ಪರಿಸ್ಥಿತಿ ಹೀಗೆ ಮುಂದುವರೆದರೆ ಚರ್ಚೆಯೇ ಇಲ್ಲದೆ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಹಾಗೂ ಹೀಗೂ ಹಗ್ಗಜಗ್ಗಾಟ ನಡೆದರೂ ಒಂದೆರಡು ದಿನಗಳ ಮೇಲೆ ಅವೇಶನ ಮುಂದುವರೆಯುವ ಲಕ್ಷಣಗಳು ಕಾಣುತ್ತಿಲ್ಲ. ದೇಶಭಕ್ತಿಯನ್ನು ಪೆಟೆಂಟ್ ತೆಗೆದುಕೊಂಡಂತೆ ವರ್ತಿಸುವ ಬಿಜೆಪಿ ರಾಷ್ಟ್ರಧ್ವಜಕ್ಕೆ ಅಗೌರವ ಸೂಚಿಸಿದ ಸಚಿವ ಈಶ್ವರಪ್ಪ ಅವರು ವಿರುದ್ಧ ಕ್ರಮ ಕೈಗೊಳ್ಳಲಿ ಎಂಬುದು ಕಾಂಗ್ರೆಸ್ ಸವಾಲಾಗಿದೆ.
ಬಿಜೆಪಿಗೆ ಸಚಿವ ಈಶ್ವರಪ್ಪ ಅವರು ನೀಡಿರುವ ಹೇಳಿಕೆಯಲ್ಲಿ ಯಾವ ಲೋಪಗಳು ಕಂಡು ಬಂದಿಲ್ಲ. ಮುಂದೊಂದು ದಿನ ಕೇಸರಿ ಧ್ವಜ ಹಾರಿದರೂ ಹಾರಬಹುದು ಎಂದಿದ್ದಾರೆ. ಹಾರಿಸಿಯೇ ಬಿಡುತ್ತೇವೆ ಎಂದು ಹೇಳಿಲ್ಲ ಎಂಬ ವಾದಕ್ಕಂಟಿಕೊಂಡಿದೆ. ಕನಿಷ್ಠ ಈಶ್ವರಪ್ಪ ಅವರಿಂದ ಕ್ಷಮೆ ಕೇಳಿಸುವ ಚಿಂತನೆಯೂ ಬಿಜೆಪಿಯಲ್ಲಿ ನಡೆದಿಲ್ಲ.
ಎರಡು ಪಕ್ಷಗಳ ರಾಜಕೀಯ ಹಗ್ಗಜಗ್ಗಾಟದಲ್ಲಿ ಅಮೂಲ್ಯವಾದ ಕಲಾಪದ ಸಮಯ ವ್ಯರ್ಥವಾಗುತ್ತಿದೆ. ನೆರೆ ಪರಿಹಾರದಲ್ಲಿನ ಲೋಪಗಳು, ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿರುವುದು, ಕೊರೊನಾ ಸಂದರ್ಭದಲ್ಲಿನ ನಷ್ಟ, ಜನರ ಸಂಕಷ್ಟ, ಶೈಕ್ಷಣಿಕ ಸಮಸ್ಯೆಗಳು, ಕಲ್ಯಾಣ ಕರ್ನಾಟಕದಲ್ಲಿನ ಅಭಿವೃದ್ಧಿ ಕೊರತೆ, ಹಿಜಾಬ್ ವಿವಾದ, ಕೆಲ ಶಾಸಕರ ಲೈಂಗಿಕ ಹಗರಣಗಳುï ಹೀಗೆ ಸಾಲು ಸಾಲು ವಿಷಯಗಳು ಚರ್ಚೆಯೇ ಇಲ್ಲದೆ ಉಳಿಯುತ್ತಿವೆ.
ಹತ್ತು ದಿನದ ಕಲಾದಲ್ಲಿ ಮೊದಲ ದಿನ ರಾಜ್ಯಪಾಲರ ಭಾಷಣ ನಡೆಯಿತು, ಎರಡನೇ ದಿನ ಸಂತಾಪ ಸೂಚನೆಯ ಜೊತೆಗೆ ಒಂದಿಷ್ಟು ಪ್ರಶ್ನೋತ್ತರಗಳು ನಡೆದವು. ಎರಡು ದಿನಗಳ ಕಲಾಪದಲ್ಲಿ ಸ್ವಲ್ಪ ಮಟ್ಟಿನ ಚರ್ಚೆಗಳು ನಡೆದವಾದರೂ ಮೂರನೇ ದಿನದಿಂದಲೇ ಗಲಾಟೆ-ಗದ್ದಲ ಶುರುವಾಗಿದೆ. ಬಾಕಿ ಇರುವ ಐದು ದಿನಗಳಲ್ಲೂ ಇದೇ ಪರಿಸ್ಥಿತಿ ಮುಂದುವರೆದರೆ ಜನರ ಸಮಸ್ಯೆಗಳ ಚರ್ಚೆಗೆ ಸಮಯವೇ ಇಲ್ಲವಾಗುತ್ತದೆ.
ಮುಂದೆ ನಡೆಯುವ ಬಜೆಟ್ ಅಧಿವೇಶನದಲ್ಲೂ ಕೋಲಾಹಲ ಸೃಷ್ಟಿಸುವ ಹಲವು ವಿಷಯಗಳ ಬಾಕಿ ಉಳಿದಿವೆ. ಹೀಗಾಗಿ ಮಾತಿನ ಮನೆಯಲ್ಲಿ ಗಂಭೀರ ಚರ್ಚೆಗಳು ನಡೆದು ಪರಿಹಾರ ಸಿಗುತ್ತದೆ ಎಂಬ ಜನರ ಸಮಸ್ಯೆಗಳು ವಿಶ್ವಾಸ ಕಳೆದುಕೊಳ್ಳುತ್ತಿವೆ. ನಾಳೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ನಡವಳಿಕೆಗಳ ಮೇಲೆ ಕಲಾಪದ ಭವಿಷ್ಯ ನಿಂತಿದೆ.
