ಬೆಂಗಳೂರು, ಜು.21- ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರ ವಿಚಾರಣೆಯನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಗರದಲ್ಲಿಂದು ರಾಜಭವನ ಚಲೋ ನಡೆಸಿದರು. ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶಗೊಂಡಿದ್ದ ಮುಖಂಡರು ಮತ್ತು ಕಾರ್ಯಕರ್ತರು ಅಲ್ಲಿಂದ ರಾಜಭವನದತ್ತ ಪಾದಯಾತ್ರೆ ನಡೆಸಿದರು.
ನೃಪತುಂಗ ರಸ್ತೆಯಿಂದ ಅರಮನೆ ರಸ್ತೆಯತ್ತ ನಡೆದ ಕಾಂಗ್ರೆಸ್ ರ್ಯಾಲಿಯನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಮತ್ತು ಪ್ರಧಾನಿ ನರೇದ್ರ ಮೋದಿ ಅವರಿಗೆ ಧಿಕ್ಕಾರ ಕೂಗಿದ ನಾಯಕರು, ಕಾರ್ಯಕರ್ತರು ರಾಜಭವನದತ್ತ ಮುನ್ನುಗ್ಗಲು ಯತ್ನಿಸಿದರು. ಅವರನ್ನು ಬ್ಯಾರಿಕೇಡ್ ಹಾಕಿ, ವಾಹನಗಳನ್ನು ಅಡ್ಡ ನಿಲ್ಲಿಸುವ ಮೂಲಕ ತಡೆಯಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬ್ಯಾರಿಕೇಡ್ ಹತ್ತಿ ಪೊಲೀಸರ ಮೇಲೆ ಜಿಗಿದರು. ನಂತರ ಕಾಂಗ್ರೆಸ್ ಬಾವುಟ ಹಿಡಿದು ಮುಂದೆ ಹೋದ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲಿಂ ಅಹ್ಮದ್, ಮಾಜಿ ಸಚಿವರಾದ ಎಂ.ಪಿ.ಪಾಟೀಲ್, ಪರಮೇಶ್ವರ್‍ನಾಯಕ್, ರಮಾನಾಥ್ ರೈ, ದಿನೇಶ್ ಗುಂಡೂರಾವ್, ರಮೇಶ್ ಕುಮಾರ್ ಸೇರಿದಂತೆ ಅನೇಕ ನಾಯಕರು ಭಾವಹಿಸಿದ್ದರು. ಎಲ್ಲಾ ನಾಯಕರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿವಿಧ ಠಾಣೆಗಳಿಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರದ ಬೆದರಿಕೆಗಳಿಗೆ ಹೆದರದೇ ಕಾಂಗ್ರೆಸ್‍ನ ಎಲ್ಲಾ ಕಾರ್ಯಕರ್ತರು ಪ್ರತಿಭಟನೆಯುದ್ಧಕ್ಕೂ ಜೊತೆ ನಡೆಯಬೇಕು. ಅವರು ನಮ್ಮನ್ನು ಬಂಧಿಸಿದರು ಹಿಂದೇಟು ಹಾಕುವುದು ಬೇಡ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಬಿಜೆಪಿ ಸರ್ಕಾರಕ್ಕೆ ಗಾಂಧಿ ಕುಟುಂಬ ಎಂದರೆ ಭಯ, ಅದಕ್ಕಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿಚಾರಣೆ ನಡೆಸುತ್ತಿದೆ. ರಾಹುಲ್ ಗಾಂಧಿ ಅವರ ವಿಚಾರಣೆಯಿಂದ ಏನನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈಗ ಸೋನಿಯಾ ಗಾಂಧಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಗಿದು ಹೋದ ಅಧ್ಯಾಯ ಎಂದು ಈ ಮೊದಲು ಹಣಕಾಸು ಸಚಿವರಾಗಿದ್ದ ಅರುಣ್ ಜೈಟ್ಲಿ ಸಂಸತ್‍ನಲ್ಲಿ ಹೇಳಿಕೆ ನೀಡಿದ್ದರು.
ಕೇಂದ್ರ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಹೊಸದಾಗಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ. ವಿಚಾರಣೆ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳೇನು ಎಂಬುದನ್ನು ವಿಡಿಯೋ ಮಾಡಿ ಬಹಿರಂಗ ಪಡಿಸಿ ಎಂದು ಸವಾಲು ಹಾಕಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಬಿಜೆಪಿ ಸರ್ಕಾರಗಳು ಎಲ್ಲಾ ರಂಗಗಳಲ್ಲೂ ವಿಫಲವಾಗಿವೆ. ತಮ್ಮ ವೈಪಲ್ಯವನ್ನು ಮುಚ್ಚಿಟ್ಟುಕೊಳ್ಳಲು ಪ್ರತಿಪಕ್ಷಗಳ ಮೇಲೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿವೆ. ಈ ಮೂಲಕ ಪ್ರಶ್ನೆ ಕೇಳುವ ಧ್ವನಿಯನ್ನು ಅಡಗಿಸಬಹುದು ಎಂದು ಭಾವಿಸಿವೆ. ಅದು ಎಂದಿಗೂ ಸಾಧ್ಯವಿಲ್ಲ ಕಿಡಿಕಾರಿದರು.
ದುರಾಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಕರ್ನಾಟಕದಲ್ಲೂ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು. ಆಪರೇಷನ್ ಕಮಲ ನಡೆಸಲು ಕೋಟಿ ಕೋಟಿ ರೂ.ಗಳನ್ನು ಎಲ್ಲಿಂದ ತಂದಿದ್ದರು, ಅದಕ್ಕೆ ಏಕೆ ಕೇಂದ್ರದ ತನಿಖೆಗಳು ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಐಟಿ ಕಾಯ್ದೆಗಳಿಗೆ ತಿದ್ದುಪಡಿ ತರಬೇಕಿದೆ. ಇಲ್ಲವಾದರೆ ಸಂವಿಧಾನ ಉಳಿಯಲು ಇವರು ಬಿಡುವುದಿಲ್ಲ. ಸಂವಿಧಾನ ಉಳಿಯದಿದ್ದರೆ ಎಲ್ಲರಿಗೂ ಅಪಾಯವಿದೆ. ಆರ್‍ಎಸ್‍ಎಸ್‍ನವರು ಮನುವಾದಿಗಳು. ದೇಶವನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಹೋರಾಟ ನಿರಂತರವಾಗಿರಬೇಕು. ಸೋನಿಯಾಗಾಂಧಿ ಅವರ ವಿಚಾರಣೆ ಮೂಲಕ ಕಾಂಗ್ರೆಸ್ ಆತ್ಮಸ್ಥೈರ್ಯ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಈ ಹಿಂದೆ ರಾಹುಲ್‍ಗಾಂಧಿ ಅವರನ್ನು ವಿಚಾರಣೆ ನಡೆಸಿದಾಗ ಕಾಂಗ್ರೆಸ್ಸಿಗರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯವರ ವಿರುದ್ಧ ನಡೆಯದ ತನಿಖೆಗಳು ಕಾಂಗ್ರೆಸಿಗರ ಮೇಲೆ ಮಾತ್ರ ಕೇಂದ್ರೀಕೃತವಾಗಿರುವುದು ಪ್ರಶ್ನಾರ್ಹವಾಗಿವೆ.
ಕಾಂಗ್ರೆಸ್ ಮುಕ್ತ ಭಾರತ ಮಾಡುವ ದುರುದ್ದೇಶದಿಂದ ಈ ರೀತಿಯ ತನಿಖೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನೇಶ್ ಗುಂಡೂರಾವ್ ಮಾತನಾಡಿ, ಕೇಂದ್ರ ತನಿಖಾ ಸಂಸ್ಥೆಗಳು ಕೆಲವರ ರಕ್ಷಣೆಗೆ ನಿಂತಿವೆ ಎಂದು ಟೀಕಿಸಿದರು.
ಎಂ.ಬಿ.ಪಾಟೀಲ್ ಮಾತನಾಡಿ, ಜನರು ಸಂಕಷ್ಟದಲ್ಲಿದ್ದಾರೆ. ಜಿಎಸ್‍ಟಿ ದರ ಹೆಚ್ಚಳ ಮಾಡಿ ಬರೆ ಎಳೆದಿದ್ದಾರೆ. ಇಂತಹ ಸಂದರ್ಭದಲ್ಲಿ ಸೋನಿಯಾ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್‍ಕುಮಾರ್ ಅವರು ಮಾತನಾಡುವಾಗ ಕಾರ್ಯಕರ್ತರು ಅಡ್ಡಿಪಡಿಸಿದರು. ಇದರಿಂದ ಅವರು ಸಿಟ್ಟಾಗಿ ನಮ್ಮನ್ನು ಭಾಷಣ ಮಾಡಲು ಏಕೆ ಕರೆಸುತ್ತೀರ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ನಗರದ ಎರಡು ಕಡೆ ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಶಾಂತಿನಗರದಲ್ಲಿರುವ ಜಾರಿನಿರ್ದೇಶನಾಲಯದ ಕಚೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರೊಂದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶೇಷಾದ್ರಿಪುರಂನ ನೆಹರು ವೃತ್ತದಲ್ಲೂ ಕಾರೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆಯಿಂದಾಗಿ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಾವರರು ಪರದಾಡಿದರು.