ಬೆಂಗಳೂರು, ಆ.30- ಬಿಜೆಪಿ ವಿರುದ್ಧ ಉತ್ತರ ಕೇಳುವ ಅಭಿಯಾನವನ್ನು ಕಾಂಗ್ರೆಸ್ ಇಂದಿನಿಂದ ಆರಂಭಿಸಿದ್ದು, ಮೊದಲ ದಿನವೇ ಸಾಲ ಮನ್ನಾ ಮಾಡದ ಕುರಿತು ಪ್ರಶ್ನೆ ಮಾಡಲಾಗಿದೆ.
ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಕೇಳಿರುವ ಕಾಂಗ್ರೆಸ್, ಶೇ.90 ವಚನ ಭ್ರಷ್ಟತೆಯ ಹ್ಯಾಸ್‍ಟ್ಯಾಗ್ ದಾಖಲಿಸಿದೆ. ಇಂದಿನಿಂದ ವಿಧಾನಸಭೆ ಚುನಾವಣೆಯವರೆಗೂ ಕಾಂಗ್ರೆಸ್ ಪ್ರಶ್ನೆ ಕೇಳುವುದನ್ನು ಮುಂದುವರೆಸಲಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳನ್ನು ಆಧರಿಸಿ ಪ್ರತಿ ದಿನ ಒಂದೊಂದು ಪ್ರಶ್ನೆ ಕೇಳುವುದಾಗಿ ನಿನ್ನೆ ಅಭಿಯಾನ ಉದ್ಘಾಟನೆಯ ವೇಳೆ ಕಾಂಗ್ರೆಸ್ ನಾಯಕರ ತಿಳಿಸಿದ್ದರು. ಪ್ರಣಾಳಿಕೆಯ ಭರವಸೆಗಳ ಜೊತೆಗೆ ಪ್ರಚಲಿತ ವಿದ್ಯಮಾನಗಳು, ಭ್ರಷ್ಟಚಾರಗಳ ಕುರಿತು ಪ್ರಶ್ನೆ ಕೇಳುವುದಾಗಿ ತಿಳಿಸಿದ್ದಾರೆ.
ಅದರ ಅಂಗವಾಗಿ ಇಂದು ಮೊದಲ ಬಾರಿಗೆ ಸಾಲ ಮನ್ನಾದ ಪ್ರಶ್ನೆ ಕೇಳಲಾಗಿದೆ. 2018ರ ವಿಧಾನಸಭೆ ಚುನಾವಣೆಯ ವೇಳೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ 1 ಲಕ್ಷ ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಡಬಲ್ ಎಂಜಿನ್ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಲಾಗಿಲ್ಲ.
ರೈತರ ಆದಾಯವೂ ದ್ವಿಗುಣವಾಗಲಿಲ್ಲ, ಆಗಿದ್ದು ಬೆಲೆ ಏರಿಕೆ ಮಾತ್ರ. ಇಂತಹ ಹೊಣೆಗೇಡಿತನ ಏಕೆ ಎಂದು ಪ್ರಶ್ನಿಸಲಾಗಿದೆ.
ಕೊಟ್ಟ ಶೇ.90 ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ವಚನ ವಂಚನೆಗೆ ಉತ್ತರ ಕೊಡುವ ಸಮಯ ಬಂದಿದೆ. ನೇಮಕಾತಿ ಅಕ್ರಮ, ಭ್ರಷ್ಟಾಚಾರ, ಕಮಿಷನ್ ದಂಧೆಯಲ್ಲಿ ಮುಳುಗಿರುವ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನಸಾಮಾನ್ಯರ ಧ್ವನಿಯಾಗಿ ನಮ್ಮ ನೇರ ಪ್ರಶ್ನೆಗಳು, ಉತ್ತರಿಸುವ ಧೈರ್ಯವಿದೆಯೇ ? ಎಂದು ಕಿಡಿಕಾರಲಾಗಿದೆ.
ಪ್ರಶ್ನೆಯಿಂದ ಸಾಲ ಮನ್ನಾ ಸಾಧ್ಯವೇ ?
ಈ ಹಿಂದೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದವು. 2018ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದವು. ಜೆಡಿಎಸ್‍ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಲು ಪಟ್ಟು ಹಿಡಿದರು.
ಸದನದ ಒಳಗೆ ಮತ್ತು ಹೊರಗೆ ಭಾರೀ ಪ್ರತಿಭಟನೆ ನಡೆಸಿದ್ದರು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ ಸಾಲ ಮನ್ನಾವನ್ನು ಘೋಷಣೆ ಮಾಡುವುದು ಅನಿವಾರ್ಯವಾಗಿತ್ತು. ಅದಕ್ಕೂ ಮೊದಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಬಿಜೆಪಿ ಪದೇ ಪದೇ ರೈತರ ಸಾಲ ಮನ್ನಾಕ್ಕಾಗಿ ಪಟ್ಟು ಹಿಡಿದಿತ್ತು. ಪರಿಣಾಮಕಾರಿ ಪ್ರತಿಪಕ್ಷದ ಪಟ್ಟಿಗೆ ಮಣಿದು ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಬೇಕಾಯಿತು.
ನಂತರದ ರಾಜಕೀಯ ಬೆಳವಣಿಗೆಯಲ್ಲಿ ಆಪರೇಷನ್ ಕಮಲ ನಡೆದಿದ್ದು, ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದರು. ಕಳೆದ ಒಂದು ವರ್ಷದಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ.
ಈ ಅವಯಲ್ಲಿ ಪ್ರತಿಪಕ್ಷಗಳು ಒಮ್ಮೆಯೂ ರೈತರ ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆಯಿಟ್ಟು ಪ್ರತಿಭಟನೆ ನಡೆಸಿಲ್ಲ, ಒತ್ತಡ ಹೇರುವ ಪ್ರಯತ್ನ ಮಾಡಿಲ್ಲ. ಚುನಾವಣೆ ವೇಳೆ ಬಿಜೆಪಿ ಸಾಲ ಮನ್ನಾ ಕುರಿತು ನೀಡಿದ್ದ ಭರವಸೆಯನ್ನು ಮುಂದಿಟ್ಟುಕೊಂಡು ಪ್ರಶ್ನೆ ಮಾಡಲಾಗಿದೆ. ಪ್ರಶ್ನೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಉಳಿದಿದೆ.
ಇಷ್ಟಕ್ಕೆ ಗಲಿಬಿಲಿಗೊಂಡು ಸರ್ಕಾರ ಸಾಲ ಮನ್ನಾ ಘೋಷಣೆ ಮಾಡುವ ಸಾಧ್ಯತೆ ಕಡಿಮೆ ಎನಿಸುತ್ತಿದೆ. ಕಾಂಗ್ರೆಸ್ ಪ್ರಶ್ನೆ ಕೇಳುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ಪಕ್ಷದ ಕಾರ್ಯಕರ್ತರು ಅಸಮದಾನ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ಯಡಿಯೂರಪ್ಪ ಹಾಗೂ ಬಿಜೆಪಿಯ ಮಾದರಿಯಲ್ಲಿ ಕಾಂಗ್ರೆಸ್ ಹೋರಾಟಗಳಿಗಾಗಿ ಜನಪರ ವಿಚಾರಗಳಿಗೆ ಪರಿಣಾಮಕಾರಿಯಾಗಿ ಬೀದಿಗಿಳಿಯುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.