ದಲಿತ ಮನೆಗೆ ಭೇಟಿ ಕೊಟ್ಟ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪ್ರಶ್ನೆ

Social Share

ಬೆಂಗಳೂರು, ಅ.12- ಪರಿಶಿಷ್ಟರ ಮೀಸಲಾತಿ ಹೆಚ್ಚಳದ ನಿರ್ಧಾರದ ಬಳಿಕ, ಇಂದು ದಲಿತರ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ ಜೋಷ್‍ನಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ 16 ಮಂದಿಯನ್ನು ಬಿಜೆಪಿಯ ಬೆಂಬಲಿಗರೆನ್ನಲಾದ ವ್ಯಕ್ತಿಯೊಬ್ಬರು ಕಾಫಿ ಎಸ್ಟೆಟ್‍ನ ಮನೆಯಲ್ಲಿ ಗೃಹ ಬಂಧನದಲ್ಲಿಟ್ಟು, ಕಿರುಕೂಳ ನೀಡಿರುವುದು ಮತ್ತು ಅದರಿಂದ ಮಹಿಳೆಯೊಬ್ಬರು ತನ್ನ ಮಗುವನ್ನು ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿರುವ ಸುದ್ದಿಯನ್ನು ಟ್ಯಾಗ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, ಈ ರೀತಿಯ ದಲಿತ ದೌರ್ಜನ್ಯದ ದುರ್ವಾಸನೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಯಲ್ಲಿ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಶೇ.54ರಷ್ಟು ದಲಿತ ದೌರ್ಜನ್ಯ ಪ್ರಕರಣಗಳು ಏರಿಕೆಯಾಗಿವೆ ಎಂದಿದ್ದಾರೆ.

ಅತ್ತ ಬೊಮ್ಮಾಯಿ, ಯಡಿಯೂರಪ್ಪ ಅವರು ದಲಿತರ ಮನೆಗೆ ಭೇಟಿ ನೀಡಿದ ಫೋಟೋವನ್ನು ಅಪ್‍ಲೋಡ್ ಮಾಡಿದ ಬೆನ್ನಲ್ಲೆ, ಬಿಜೆಪಿ ನಾಯಕರೊಬ್ಬರು 16 ದಲಿತರು ಮತ್ತು ಅಸಹಾಯಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ವರದಿ ಪ್ರಕಟವಾಗಿದೆ. ಇದು ನಾಚಿಕೆಗೇಡು ಮತ್ತು ಅಸಹ್ಯಕರ ಎಂದು ಟ್ವೀಟ್ ಮಾಡಿದ್ದಾರೆ.

ಬೊಮ್ಮಾಯಿ ಅವರೆ ಬಹುಸಂಖ್ಯಾತ ದಲಿತರು ಮತ್ತು ಬಡವರು ಬೇಡಿಕೆಗಳಿಗೆ ಉತ್ತರಿಸಿ. ಬಿಜೆಪಿ ನಾಯಕರು ದಲಿತರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಗಳಲ್ಲಿ ನೀವು ಮೌನವಾಗಿರುವುದೇಕೆ. ನಿಮ್ಮ ಮೌನ ಯುದ್ಧ ತಂತ್ರದ ಒಪ್ಪಿಗೆ ಎಂದರ್ಥವೇ ಎಂದು ಪ್ರಶ್ನಿಸಲಾಗಿದೆ.

ದೌರ್ಜನ್ಯ ನಡೆದ ಸ್ಥಳಕ್ಕೆ ತೆರಳಿ ಸಂತ್ರಸ್ಥ ಕುಟುಂಬವನ್ನು ನೀವು ಯಾಕೆ ಭೇಟಿ ಮಾಡುವುದಿಲ್ಲ. ಬಿಜೆಪಿ ನಾಯಕನ ದೌರ್ಜನ್ಯದಿಂದ ಆ ತಾಯಿ ಕಳೆದುಕೊಂಡ ಮಗುವನ್ನು ಮರಳಿ ತಂದು ಕೊಡಲು ಸಾಧ್ಯವೇ ಎಂದು ಕೇಳಿದ್ದಾರೆ.
ಕಳೆದೊಂದು ವರ್ಷದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ಶೇ.54ರಷ್ಟು ಹೆಚ್ಚಾಗಿವೆ.

ಇದು ದಲಿತರನ್ನು ಗುರಿಯಾಗಿಸಿಕೊಂಡಿದೆ ಎನಿಸುವುದಿಲ್ಲವೇ ? ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 6500 ಕೋಟಿ ಎಸ್‍ಸಿಪಿ, ಟಿಎಸ್ಪಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿರುವುದು, ದಲಿತರ ಸಬಲೀಕರಣವನ್ನು ದುರ್ಬಲಗೊಳಿಸುವ ಯೋಜನೆಯಲ್ಲವೇ ಎಂದು ಕಿಡಿಕಾರಿದ್ದಾರೆ.

Articles You Might Like

Share This Article