ಬೆಂಗಳೂರು, ಜು.22- ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟನ್ನು ನಾವು ಮಾಡಿಟ್ಕೊಂಡಿದ್ದೇವೆ ಎಂದು ಮಾಜಿ ಸಚಿವ ರಮೇಶ್ ಕುಮಾರ್ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಶೇ.40ರಷ್ಟು ಕಮಿಷನ್ ಪಡೆದು ಆಸ್ತಿ ಮಾಡಿಕೊಂಡಿದ್ದು ಬಿಜೆಪಿ ಎಂದು ತಿರುಗೇಟು ನೀಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ನಿನ್ನೆ ವಿಚಾರಣೆ ನಡೆಸುವ ವೇಳೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸಿಗರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ್ದ ರಮೇಶ್‍ಕುಮಾರ್, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹೆಸರಿನಲ್ಲಿ ಮೂರ್ನಾಲ್ಕು ತಲೆ ಮಾರಿಗಾಗುವಷ್ಟನ್ನು ನಾವು ಮಾಡಿಕೊಟ್ಟಿದ್ದೇವೆ.
ಈ ಕಿಂಚಿತ್ತು ತ್ಯಾಗಕ್ಕೂ ನಾವು ಸಿದ್ಧವಾಗದಿದ್ದರೆ ಮುಂದೆ ನಾವು ತಿನ್ನುವ ಅನ್ನದಲ್ಲಿ ಹುಳ ಬೀಳಲಿದೆ ಎಂದು ಹೇಳಿದ್ದರು. ಅದನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಮೂರ್ನಾಲ್ಕು ತಲೆಮಾರಿಗಾಗುವಷ್ಟನ್ನು ಮಾಡಿಕೊಂಡಿದ್ದೇವೆ ಎಂದು ಬಿಂಬಿಸಲಾಗಿದೆ.
ಬಿಜೆಪಿ ಮತ್ತು ಜೆಡಿಎಸ್‍ನ ಘಟಾನುಘಟಿ ನಾಯಕರು ರಮೇಶ್‍ಕುಮಾರ್ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ. ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂದು ರಮೇಶ್‍ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ ಎಂದು ಟೀಕಿಸಿವೆ.
ಕಾಂಗ್ರೆಸ್ ವಿರುದ್ಧ ನಿನ್ನೆಯಿಂದ ಮುಗಿ ಬಿದ್ದಿರುವ ಬಿಜೆಪಿ, ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಎದಿರೇಟು ನೀಡಿದೆ. ಟ್ವೀಟರ್‍ನಲ್ಲಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ರಮೇಶ್ ಕುಮಾರ್ ಅವರ ಹೇಳಿಕೆಯನ್ನು ಪ್ರಸಾರ ಮಾಡಿದೆ. ರಮೇಶ್ ಕುಮಾರ್ ಹೇಳಿದ್ದರಲ್ಲಿ ತಪ್ಪಿಲ್ಲ ಎಂದಿದೆ.
ರಮೇಶ್ ಕುಮಾರ್ ಹೇಳಿದಂತೆ ನೆಹರು ಕುಟುಂಬ ದೇಶಕ್ಕಾಗಿ ವೈಜ್ಞಾನಿಕ ಮನೋಭಾವದ ಶಿಕ್ಷಣ, ಆರ್ಥಿಕ ಸಮಾನತೆಯ ನೀತಿಗಳು, ಸಮಾಜದಲ್ಲಿ ಸ್ವಾಭಿಮಾನದ ಬದುಕಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಬಿಜೆಪಿಯವರಿಗೆ ಕಣ್ಣಿದ್ದೂ ಕುರುಡು, ಕಿವಿಯಿದ್ದೂ ಕಿವುಡು . ಮಾತು ತಿರುಚುವುದು ಅವರ ಹುಟ್ಟು ಗುಣ ಎಂದು ಪ್ರತಿ ವಾಗ್ದಾಳಿ ನಡೆಸಿದೆ.
ರಮೇಶ್ ಕುಮಾರ್ ಮಾಡಿಕೊಂಡಿದ್ದೇವೆ ಎಂದಿಲ್ಲ, ಮಾಡಿಕೊಟ್ಟಿದ್ದೇವೆ ಎಂದಿದ್ದಾರೆ. ನಿಜ ಈ ದೇಶದ ಮೂರ್ನಾಲ್ಕು ತಲೆಮಾರಿಗೆ ಆಗುವಂತ ದೂರದೃಷ್ಟಿಯ ವ್ಯವಸ್ಥೆಗಳನ್ನು ನೆಹರು, ಇಂದಿರಾ ಗಾಂಧಿ ಅವರು ಮಾಡಿಕೊಟ್ಟಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಜನತೆ ಇದೇ ಮಾತನ್ನು ಹೇಳುತ್ತಾರೆ. ಜನತೆ ಬದುಕುವ ದಾರಿ ಮಾಡಿಕೊಟ್ಟಿದ್ದು ಕಾಂಗ್ರೆಸ್ ಎಂದು ಬಿಜೆಪಿಗೆ ತಿರುಗೇಟು ನೀಡಲಾಗಿದೆ.
ಶೇ.40ರಷ್ಟು ಕಮಿಷನ್ ಹೊಡೆದು ಆಸ್ತಿ ಮಾಡಿಕೊಂಡಿದ್ದು ಬಿಜೆಪಿ ಎಂದು ಆರೋಪಿಸುವ ಜೊತೆಗೆ ಬಿಜೆಪಿ ದೇಶದ ನಂಬರ್ ಒನ್ ಶ್ರೀಮಂತ ಪಕ್ಷವಾಗಿದೆ. 2019-20ರ ವೇಳೆಗೆ ಬಿಜೆಪಿ ಆಸ್ತಿ ಮೌಲ್ಯ 4847 ಕೋಟಿ ರೂಪಾಯಿಗಳು ಎಂಬ ವರದಿಯನ್ನು ಲಗತ್ತಿಸಲಾಗಿದೆ. ದೇಶದಲ್ಲಿ ಎರಡನೇ ಶ್ರೀಮಂತ ಪಕ್ಷ ಬಿಎಸ್‍ಪಿಯಾಗಿದ್ದು, ಕಾಂಗ್ರೆಸ್ ಅಲ್ಲ ಎಂಬ ಮಾಹಿತಿಯನ್ನು ಪ್ರಕಟಿಸಲಾಗಿದೆ.