ಬೆಂಗಳೂರು,ಸೆ.19- ಕಾಂಗ್ರೆಸ್‍ನವರು ಏಕೆ ಕಿತ್ತಾಡುತ್ತಿದ್ದಾರೋ ಗೊತ್ತಿಲ್ಲ. ಜನರು ಅವರನ್ನು ತಿರಸ್ಕರಿಸಲಿದ್ದಾರೆ. ಅವರು ಏನೇ ಮಾಡಿದರೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರಲ್ಲಿ ಕಾಂಗ್ರೆಸ್‍ಗೆ ಎಷ್ಟು ಬಹುಮತ ಬಂದಿತ್ತು, ಅಂದು ಸಿದ್ದರಾಮಯ್ಯನವರೇ ಒಬ್ಬರೆ ಇದ್ದರಲ್ಲ ಅಂದು ಬಹುಮತ ಸಿಕ್ಕಿಲ್ಲ. ಮುಂದೇನೂ ಅವರು ಅಧಿಕಾರಕ್ಕೆ ಬರಲು ಸಾಧ್ಯನೇ ಇಲ್ಲ ಎಂದರು.
2023ರ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‍ನವರ ಯಾವ ತಂತ್ರಗಾರಿಕೆಯೂ ನಡೆಯುವುದಿಲ್ಲ ಎಂದು ಭವಿಷ್ಯ ನುಡಿದರು. ಅವರು ಏನೇ ಮಾಡಿದರೂ ಜನ ನಂಬುವುದಿಲ್ಲ. ಈಗಾಗಲೇ ಅವರನ್ನು ತಿರಸ್ಕರಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸರಕಾರ ಮತ್ತು ಸಚಿವರು, ಶಾಸಕರ ವಿರುದ್ಧ 40% ಕಮೀಷನ್ ಆರೋಪವನ್ನು ಗುತ್ತಿಗೆದಾರರ ಸಂಘ ಮಾಡಿತ್ತು. ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಸ್ವತಃ ಮುಖ್ಯಮಂತ್ರಿಯವರೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಗುತ್ತಿಗೆದಾರರ ಸಂಘದ ಕೆಂಪಣ್ಣನವರು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಬಳಿಕ ಮಾಧ್ಯಮದವರ ಮುಂದೆ ಕೋಲಾರ ಉಸ್ತುವಾರಿ ಸಚಿವರು ಕಮಿಷನ್ ಕೇಳುತ್ತಾರೆ ಎಂದು ಆರೋಪಿಸಿದ್ದರು. ಇದಕ್ಕೆ ನಾನು ದೆಹಲಿಯಲ್ಲೇ ಉತ್ತರ ನೀಡಿದ್ದೆ, ಮಾನನಷ್ಟ ಮೊಕದ್ದಮೆ ಹೂಡು ವುದಾಗಿ ಎಂದು ಹೇಳಿದ್ದೆ ಎಂದರು.
ಪ್ರಧಾನಿ ನರೇಂದ್ರಮೋದಿ, ಲೋಕಾಯುಕ್ತಕ್ಕೆ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನವರಿಗೆ ದಾಖಲೆ ನೀಡಿ ಗುತ್ತಿಗೆದಾರರ ಸಂಘಕ್ಕೆ ಹೇಳಿದ್ದೆ. ಇಲ್ಲಿಯವರೆಗೂ ಈ ಬಗ್ಗೆ ಒಂದು ಹೆಜ್ಜೆ ಕೂಡ ಇಟ್ಟಿಲ್ಲ. ಎಂದಿನಿಂದ ಇಲ್ಲಿಯವರೆಗೂ ಯಾವುದೇ ದಾಖಲೆಯನ್ನು ಅವರು ಒದಗಿಸಿಲ್ಲ ಎಂದು ಟೀಕಿಸಿದರು.
ದಾಖಲೆ ಇಲ್ಲದಿದ್ದರೆ ಕ್ಷಮೆ ಕೇಳಬೇಕು ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಹೇಳಿದ್ದೆ. ಸುಳ್ಳು ಆರೋಪ ಮಾಡಿದರೆ ಎರಡು ವರ್ಷ ಜೈಲಿಗೂ ಸಹ ಹೋಗಬೇಕಾಗುತ್ತದೆ. ಐಪಿಸಿ ಸೆಕ್ಷನ್ ಅಡಿಯಲ್ಲಿ 2 ವರ್ಷ ಶಿಕ್ಷೆಯಾಗುತ್ತದೆ. ಆರೋಪ ಸತ್ಯವಾಗಿದ್ದರೆ ನ್ಯಾಯಲಯಕ್ಕೆ ದಾಖಲೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಪ್ರಕರಣವನ್ನು ನಾಲ್ಕು ತಿಂಗಳಲ್ಲಿ ಮುಗಿಸಬೇಕೆಂದು ಕೋರ್ಟ್‍ಗೆ ಮನವಿ ಮಾಡುತ್ತೇನೆ. ಇದು ಸಾಕಷ್ಟು ಗಂಭೀರ ಪ್ರಕರಣ, ಇದು ಜನರ ಮನಸ್ಸಲ್ಲಿ ಉಳಿಯುವುದು ಬೇಡ ಇದನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಈ ಅರ್ಜಿ ಸಲ್ಲಿಸಲಿದ್ದೇನೆ ಎಂದು ಅವರು ತಿಳಿಸಿದರು.