ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದೆ : ಆರ್.ಅಶೋಕ್

Social Share

ಬೆಂಗಳೂರು,ಜ.30- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವಿನ ಒಳಜಗಳ ಬೀದಿಗೆ ಬಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರ ನಡುವಿನ ಪಿಸುಮಾತು ಮಾಧ್ಯಮಗಳ ಮೂಲಕ ಬಯಲಾಗಿದೆ.
ಈ ಇಬ್ಬರು ನಾಯಕರ ಒಳಜಗಳದ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ. ವೈಯಕ್ತಿ ವರ್ಚಸ್ಸಿಗಾಗಿ ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎಲ್ಲರೂ ಒಗ್ಗಟಾಗಿದ್ದೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯನವರ ಪಿಸು ಮಾತಿನಿಂದಲೇ ಎಲ್ಲ ಬಯಲಾಗಿದೆ.
ಎಲ್ಲ ಕ್ಷೇತ್ರಗಳನ್ನು ಶಿವಕುಮಾರ್ ಹಾಳು ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆದರೂ ತಿರುಕನ ಕನಸು ಕಾಣುತ್ತಿದ್ದಾರೆ. ಒಳಜಗಳದಿಂದ ಹೊರಗೆ ಬಂದರೆ ಸಾಕು ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ರಾಮ್‍ದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ಅಭಿವೃದ್ಧಿ ವಿಚಾರಕ್ಕೆ ಜಗಳವಾಗಿದೆ ಹೊರತು ಬೇರೇನು ಇಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಲ್ಲಿ ಒಳಜಗಳವಿಲ್ಲವೇ? ಸಚಿವರ ವಿರುದ್ಧ ಶಾಸಕರು ದೂರು ಕೊಟ್ಟಿದ್ದಾರಲ್ಲ ಎಂಬ ಪ್ರಶ್ನೆಗೆ ಅಶೋಕ್ ಪ್ರತಿಕ್ರಿಯಿಸಲಿಲ್ಲ.
# ನಾಳೆ ಸಭೆ:
ನಗರದಲ್ಲಿ ಸಂಚಾರ ಸಮಸ್ಯೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಾಗಿ ಕಂದಾಯ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು. ಪೊಲೀಸರು ಮತ್ತು ಜನಸಾಮಾನ್ಯರ ನಡುವೆ ಜನಸ್ನೇಹಿ ವ್ಯವಸ್ಥೆ ಕಲ್ಪಿಸಬೇಕು. ಬೆಂಗಳೂರಿನಲ್ಲಿ ವಾಹನಗಳನ್ನು ಟೋಯಿಂಗ್ ಮಾಡುವ ವಿಚಾರದಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ಸೂಕ್ತ ನಿರ್ದೇಶನ ಕೊಡುತ್ತೇವೆ.
ಟೋಯಿಂಗ್ ವಿಚಾರದಲ್ಲಿ ಪೊಲೀಸರು ಮತ್ತು ಜನರ ನಡುವೆ ಘರ್ಷಣೆಯಾಗುತ್ತಿದೆ. ಹಲವು ಪ್ರಕರಣಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಕೆಲವೆಡೆ ಬೇಕಾಬಿಟ್ಟಿ ಟೋಯಿಂಗ್ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ನಗರದ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡ ಅವರೊಂದಿಗೂ ಈ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದರು.

Articles You Might Like

Share This Article