ನವದೆಹಲಿ, ಜು.26- ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‍ಗೆ ದೆಹಲಿಯ ರಾಜ್‍ಘಟ್‍ನಲ್ಲಿರುವ ಮಹಾತ್ಮಗಾಂಧಿ ಪುಣ್ಯಭೂಮಿಯ ಬಳಿ ಪ್ರತಿಭಟನೆ ನಡೆಸಲು ಅವಕಾಶ ನೀಡದೆ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಅಜಯ್‍ಮಖೇನ್ ಕಿಡಿಕಾರಿದ್ದಾರೆ.
ಎಐಸಿಸಿ ಕಚೇರಿಯಲ್ಲಿಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣವನ್ನು ಇದೇ ಜಾರಿ ನಿರ್ದೇಶನಾಲಯ ಈ ಮೊದಲು ಮುಕ್ತಾಯಗೊಳಿಸಿತ್ತು. ಆದರೆ, ದುರುದ್ದೇಶ ಪೂರ್ವಕವಾಗಿ ಮತ್ತೆ ಕೆಣಕಲಾಗಿದೆ ಎಂದು ಆರೋಪಿಸಿದರು.
ಸೋನಿಯಾಗಾಂಧಿ ಅವರ ವಿಚಾರಣೆ ನಡೆಯುವ ವೇಳೆ ದೆಹಲಿಯ ರಾಜ್‍ಘಟ್ ಸೇರಿದಂತೆ ದೇಶಾದ್ಯಂತ ರಾಜಧಾನಿ ಕೇಂದ್ರೀಕೃತ ಪ್ರದೇಶಗಳಲ್ಲಿ ಕಾಂಗ್ರೆಸ್ ಮೌನ ಸತ್ಯಾಗ್ರಹ ಹಮ್ಮಿಕೊಂಡಿದೆ. ರಾಜ್‍ಘಟ್ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದು, ಅವಕಾಶ ನಿರಾಕರಿಸಿರುವುದಕ್ಕೆ ಆಕ್ಷೇಪಿಸಿದ್ದಾರೆ.
ಕಾಂಗ್ರೆಸ್‍ನ ಸತತ ಮನವಿಗೆ ಪೊಲೀಸರು ಸ್ಪಂದಿಸುತ್ತಿಲ್ಲ. ಸಂಚಾರ ದಟ್ಟಣೆಯ ನೆಪ ಹಿಡಿದು ಅವಕಾಶ ನಿರಾಕರಿಸಲಾಗಿದೆ. ಇದು ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಕಿಡಿಕಾರಿದರು. ಸೋನಿಯಾಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವುದು ಸಂಪೂರ್ಣ ನಿಯಮ ಬಾಹಿರ.
ಪ್ರತಿಪಕ್ಷ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬಾರದು. ಬೆಲೆ ಏರಿಕೆ, ರೈತ ವಿರೋ ನೀತಿ, ನಿರುದ್ಯೋಗ, ದೇಶದ ಸುರಕ್ಷತೆ, ಭ್ರಷ್ಟಾಚಾರಗಳ ಬಗ್ಗೆ ಚರ್ಚೆ ಮಾಡಬಾರದು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಆದರೆ, ಕಾಂಗ್ರೆಸ್ ತನ್ನ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ. ಎಷ್ಟೇ ಪ್ರತಿರೋಧ ವ್ಯಕ್ತಪಡಿಸಿದರೂ ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದರು. ದೇಶಾದ್ಯಂತ ಇಂದು ಸೋನಿಯಾಗಾಂಧಿ ಅವರ ವಿಚಾರಣೆ ಪೂರ್ಣಗೊಳ್ಳುವವರೆಗೂ ಪ್ರತಿಭಟನೆ ನಿರಂತರವಾಗಿರಲಿದೆ ಎಂದು ಹೇಳಿದರು.