ಮೈಸೂರು,ಸೆ.16- ಮತಾಂತರ ನಿಷೇಧ ಕಾಯ್ದೆ ಮಸೂದೆ ಮಂಡನೆ ವೇಳೆ ಬಿಲ್ ಪ್ರತಿಯನ್ನು ಹರಿದು ಹಾಕಿದ ಕಾಂಗ್ರೆಸ್ ಕ್ರಮವನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಓಲೈಕೆ ಮಾಡುವ ಸಲುವಾಗಿ ಕಾಂಗ್ರೆಸ್ ಸದಸ್ಯರು ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ವ್ಯಂಗ್ಯವಾಡಿರುವ ಅವರು, ಭಾರತ್ ಜೋಡೊ ಯಾತ್ರೆಯ ಸಿದ್ಧತೆಯಲ್ಲಿರುವಾಗ, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವುದಕ್ಕೆ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಡಿ.ಕೆ.ಶಿವಕುಮಾರ್ ಬೇಲ್ ಮೇಲೆ ಹೊರಗಿದ್ದಾರೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ಈ ರೀತಿಯ ಹೇಳಿಕೆ ನೀಡಬಾರದು ಎಂದರು.
ಇದನ್ನೂ ಓದಿ : ಶಿವಮೊಗ್ಗ ಚೂರಿ ಇರಿತ ಪ್ರಕರಣಕ್ಕೆ ಉಗ್ರ ಸಂಘಟನೆ ಲಿಂಕ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಅಖಂಡ ಭಾರತವನ್ನು ಒಡೆದು ಹಾಕಿದ್ದೇ ಕಾಂಗ್ರೆಸ್ ನವರು. ಈಗ ಅದನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕಾಂಗ್ರೆಸ್‍ನವರು ಬಲಿ ಪಡೆದರು. ಈಗ ಭಾರತ್ ಜೋಡೊ ಕಾರ್ಯಕ್ರಮ ಮಾಡುತ್ತಿದ್ದಾರೆ.
ನೀವು ನಿಮ್ಮ ಸ್ಲೋಗನ್ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮ ಮಾಡಿ. ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿ ಈ ಕಾರ್ಯಕ್ರಮ ಎಂದು ಹೇಳಿ. ಅಖಂಡ ಭಾರತ ಒಗ್ಗೂಡಬೇಕು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲವೂ ಒಟ್ಟಾಗಿ ಅಖಂಡ ಭಾರತವಾಗಬೇಕು ಎಂದರು.
ಆರ್ಥಿಕವಾಗಿ ಸಬಲರಾಗಿರುವವರಿಗೆ ಮೀಸಲಾತಿ ನೀಡಬಾರದು. ದಲಿತರಿಗೆ ಕಲ್ಪಿಸಿರುವ ಮೀಸಲಾತಿಯನ್ನು ಉಳ್ಳವರೇ ಪಡೆದುಕೊಳ್ಳುತ್ತಿದ್ದಾರೆ. ದಲಿತ ಸಮುದಾಯದಲ್ಲಿ ತುಳಿತಕ್ಕೊಳಗಾದವರಿಗೆ ಮೀಸಲಾತಿ ಸಿಗಬೇಕು. ಸ್ವಾಭಿಮಾನದ ಬದುಕು ಸಿಗುವವರೆಗೂ ದಲಿತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು. ಮಲ್ಲಿಕಾರ್ಜುನ ಖರ್ಗೆ ನಂತರ ಅವರ ಮಗ ಪ್ರಿಯಾಂಕ ಖರ್ಗೆ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮೀಸಲಾತಿ ನೀಡುವಾಗ ಕಡುಬಡವರಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಸಚಿವ ಸ್ಥಾನ ನೀಡುವ ವಿಶ್ವಾಸವಿತ್ತು. ನನಗೆ ಕ್ಲೀನ್ ಚಿಟ್ ಸಿಕ್ಕನಂತರ ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ಮತ್ತೆ ಸಚಿವ ಸ್ಥಾನ ನೀಡದಿರುವುದರಿಂದ ಸಹಜವಾಗಿಯೇ ಅಸಮಾಧಾನವಾಗಿದೆ ಎಂದರು.
ಇದನ್ನೂ ಓದಿ : ಅಪ್ಪು ಜನ್ಮದಿನವನ್ನು ‘ಸ್ಪೂರ್ತಿ ದಿನ’ವಾಗಿ ಆಚರಿಸಲು ಸರ್ಕಾರ ಘೋಷಣೆ
ಇಂಧನ ಇಲಾಖೆಯ ಅವ್ಯವಹಾರ ಕುರಿತು ಹಳೆಯ ಕಡತಗಳನ್ನು ಪರಿಶೀಲನೆ ಮಾಡುತ್ತಿರುವುದಕ್ಕೆ ಡಿಕೆಶಿ ಆಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿ ಅವು ಸಾರ್ವಜನಿಕ ದಾಖಲೆಗಳಾಗಿವೆ. ಯಾರು ಬೇಕಾದರೂ ದಾಖಲೆಗಳನ್ನು ಪಡೆಯಬಹುದು. ಆರ್‍ಟಿಐ ಮೂಲಕ ಅರ್ಜಿ ಸಲ್ಲಿಸಿ ಯಾರು ಬೇಕಾದರೂ ದಾಖಲೆಗಳನ್ನು ಪಡೆದುಕೊಳ್ಳಬಹುದು. ಯಾರ ಮೇಲೂ ಒತ್ತಡ ಹಾಕಿ ಕಡತಗಳನ್ನು ಪಡೆಯುವುದಿಲ್ಲ.
ನಾನು ಇಂಧನ ಸಚಿವನಾಗಿದ್ದಾಗಲೂ ಇದೇ ರೀತಿ ಕಡತಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಡಿಕೆಶಿ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ, ಮಂಜು ಮತ್ತಿತರರು ಉಪಸ್ಥಿತರಿದ್ದರು.