ನವದೆಹಲಿ, ಆ.9- ನಾವಿಬ್ಬರು ಮತ್ತು ನಮಗಿಬ್ಬರು ಸಿದ್ಧಾಂತದಿಂದ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಆದಿವಾಸಿಗಳ ಹಕ್ಕು ಕಸಿಯುವ ಯತ್ನ ನಡೆಸಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಆರೋಪಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸದಾ ಕಾಲ ಬುಡಕಟ್ಟು ಮತ್ತು ಆದಿವಾಸಿಗಳ ನೀರು, ಅರಣ್ಯ ಹಾಗೂ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಈಗ ಆದಿವಾಸಿಗಳ ಹಕ್ಕುಗಳನ್ನು ಕಸಿಯಲು ಹೊಸ ನಿಯಮಗಳು ಹಾಗೂ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇದು ನಾವಿಬ್ಬರು, ನಮಗಿಬ್ಬರು ಎಂಬ ಸಿದ್ಧಾಂತಕ್ಕೆ ಲಾಭ ಮಾಡಿಕೊಡುವಾಗಿದೆ ಎಂದು ಆರೋಪಿಸಿದ್ದಾರೆ.
ವಿಶ್ವ ಆದಿವಾಸಿಗಳ ದಿನದ ಅಂಗವಾಗಿ ನಾನು ಪ್ರಮಾಣ ಮಾಡುತ್ತೇನೆ. ನಾನು ನನ್ನ ಜೀವದ ಕೊನೆ ಉಸಿರು ಇರುವವರೆಗೂ ಆದಿವಾಸಿಗಳ ಪರ ನ್ಯಾಯಕ್ಕಾಗಿ ಹೋರಾಡುತ್ತೇನೆ. ಜೈ ಜೋಹರ್ ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಿಜೆಪಿ ರಾಷ್ಟ್ರಪತಿ ಚುನಾವಣೆಗೆ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಆದಿವಾಸಿ ಸಮುದಾಯಕ್ಕೆ ಸಂವಿಧಾನದ ಅತ್ಯುನ್ನತ ಸ್ಥಾನ ನೀಡಲಾಗಿದೆ ಎಂದು ಬಿಂಬಿಸಲಾಗಿದೆ. ಒಂದೆಡೆ ರಾಷ್ಟ್ರಪತಿ ಸ್ಥಾನಕ್ಕೆ ಆದಿವಾಸಿ ಸಮುದಾಯವನ್ನು ಆಯ್ಕೆ ಮಾಡಿ, ಮತ್ತೊಂದೆಡೆ ಆದಿವಾಸಿಗಳ ಹಕ್ಕುಗಳನ್ನು ಕಸಿಯುವ ಕಾನೂನು ರೂಪಿಸಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ.