ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಿರಸ ಪ್ರತಿಕ್ರಿಯೆ

Social Share

ಬೆಂಗಳೂರು, ಜ.27- ಪಾದಯಾತ್ರೆ ಸೃಷ್ಟಿಸಿದ ಸಂಚಲನವನ್ನು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಸೃಷ್ಟಿಸಲು ವಿಫಲವಾಗಿದ್ದು, ಪಕ್ಷದ ನಾಯಕರಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹನ್ನೆರಡು ವರ್ಷಗಳ ಬಳಿಕ ಕೆಳ ಹಂತದಿಂದಲೂ ಸದಸ್ಯತ್ವ ನೋಂದಣಿಗೆ ಕಾಂಗ್ರೆಸ್ ಚಾಲನೆ ನೀಡಿದೆ. ಕಳೆದ ಡಿಸೆಂಬರ್ 10ರಂದು ರಾಜ್ಯದ ಎರಡು ಸಾವಿರ ಕೇಂದ್ರಗಳಲ್ಲಿ ಏಕಕಾಲಕ್ಕೆ ಸದಸ್ಯತ್ವ ನೋಂದಣಿ ನಡೆಸಲಾಯಿತು.
ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಆದರೆ ಈಗ ಕಾಂಗ್ರೆಸ್ ಹೈಕಮಾಂಡ್ ಹೊಸ ನಿಯಮ ಮಾಡಿದ್ದು, ಸದಸ್ಯತ್ವವನ್ನು ಡಿಜಿಟಲಿಕರಣ ಮಾಡಬೇಕು ಎಂದು ಸೂಚಿಸಿದೆ. ಈ ಮೊದಲು ಬೂತ್ ಮಟ್ಟದಲ್ಲಿ ಸದಸ್ಯರಾಗುವವರ ಮತದಾರರ ಗುರುತಿನ ಚೀಟಿ ಪಡೆದುಕೊಂಡು, ಕೆಲ ಮಾಹಿತಿಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳಲಾಯಿತು.
ಈಗ ಸದಸ್ಯತ್ವವನ್ನು ಡಿಜಿಟಲ್ ರೂಪಕ್ಕೆ ಬದಲಾಯಿಸುವಂತೆ ಹೈಕಮಾಂಡ್ ಸೂಚಿಸಿರುವುದರಿಂದ ನಾಯಕರಿಗೆ ಹೊಸ ಸಂಕಟ ಎದುರಾಗಿದೆ. ಪಕ್ಷದ ಸದಸ್ಯತ್ವ ಪಡೆಯಲು ಐದು ರೂಪಾಯಿ ಶುಲ್ಕ ಪಾವತಿಸಬೇಕು. ಬಹಳಷ್ಟು ಕಾರ್ಯಕರ್ತರು ಶುಲ್ಕ ಪಾವತಿ ಮಾಡದಿದ್ದಾಗ ನಾಯಕರೆ ತಮ್ಮ ಕೈನಿಂದ ಹಣ ಹಾಕಿ ಸದಸ್ಯತ್ವ ನೋಂದಣಿ ಮಾಡಿಸಿದ್ದರು.
ಈಗ ಡಿಜಿಟಲೀಕರಣ ಮಾಡಬೇಕಾದರೆ ಆಯಾ ಸದಸ್ಯರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಹೋಗಲಿದೆ. ಅದನ್ನು ಖಚಿತ ಪಡಿಸಿದರೆ ಮಾತ್ರ ಸದಸ್ಯತ್ವ ಡಿಜಿಟಲೀಕರಣವಾಗಿ ಪರಿವರ್ತನೆಯಾಗಲಿದೆ. ಬಹಳಷ್ಟು ಮಂದಿ ಸದಸ್ಯರು ಪಕ್ಷ ನೀಡಿದ ಗುರಿಯನ್ನು ತಲುಪಲು ಆಸಕ್ತಿ ಇರಲಿ-ಇಲ್ಲದಿರಲಿ ಅವರ ದಾಖಲೆಗಳನ್ನು ಪಡೆದುಕೊಂಡು ಸದಸ್ಯತ್ವ ನೋಂದಣಿ ಮಾಡಿಸಿಕೊಂಡಿದ್ದರು, ಶುಲ್ಕವನ್ನು ತಾವೇ ಪಾವತಿಸಿದ್ದರು. ಇದರಲ್ಲಿ ಬಹಳಷ್ಟು ಮಂದಿ ನಕಲಿ ಸದಸ್ಯರು ಇದ್ದರು.
ಈಗ ಮೊಬೈಲ್ ಸಂಖ್ಯೆ ಆಧಾರಿತ ನೋಂದಣಿಯಿಂದ ನಕಲಿ ಸದಸ್ಯತ್ವಕ್ಕೆ ಪೆಟ್ಟು ಬೀಳಲಿದೆ. ಪ್ರತಿ ಸದಸ್ಯತ್ವ ನೋಂದಣಿಗೂ ಕನಿಷ್ಠ 10 ರಿಂದ 20 ನಿಮಿಷ ಸಮಯ ಹಿಡಿಯಲಿದೆ. ರಾಜಕೀಯ ಪಕ್ಷಗಳ ಮೇಲೆ ಭ್ರಮನಿರಸನ ಹೊಂದಿರುವ ಜನ ಸದಸ್ಯತ್ವ ಪಡೆಯಲು ಸಮಯ ವ್ಯಯ ಮಾಡುವಷ್ಟು ತಾಳ್ಮೆ ಉಳಿಸಿಕೊಂಡಿಲ್ಲ. ರಾಜಕೀಯವಾಗಿ ಆಕಾಂಕ್ಷೆಗಳು ಇರುವವರಿಗೆ ಸದಸ್ಯತ್ವ ಅನಿವಾರ್ಯ ಆದರೆ ಅಂತಹವರ ಸಂಖ್ಯೆ ಬಹಳ ಕಡಿಮೆ ಇದೆ.
ಹೀಗಾಗಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕುಂಟುತ್ತಾ ಸಾಗುತ್ತಿದೆ. ಡಿಜಿಟಲೀಕರಣ ಅದಕ್ಕೆ ಮತ್ತಷ್ಟು ಅಡಚಣೆಗಳನ್ನು ಉಂಟು ಮಾಡಿದೆ. ಬಿಜೆಪಿ ಸೇರಿದಂತೆ ಬಹಳಷ್ಟು ಪಕ್ಷಗಳು ಮಿಸ್ ಕಾಲ್ ನೀಡಿದರೆ ಸಾಕು ಸದಸ್ಯತ್ವ ತನ್ನಷ್ಟಕ್ಕೆ ತಾನೇ ನೋಂದಣಿಯಾಗುವ ಯಾಂತ್ರಿಕೃತ ವ್ಯವಸ್ಥೆ ರೂಪಿಸಿವೆ. ಕಾಂಗ್ರೆಸ್ ಬದ್ಧತೆ ಇರುವ ಕಾರ್ಯಕರ್ತರು ಮಾತ್ರ ಪಕ್ಷದಲ್ಲಿರಲಿ, ಕಾಟಾಚಾರದ ನಾಯಕರು, ಕಾರ್ಯಕರ್ತರು ಹೊರಗಿರಲಿ ಎಂಬ ಉದ್ದೇಶದಿಂದ ಸಮಗ್ರ ಮಾಹಿತಿಯ, ಡಿಜಿಟಲ್ ಸದಸ್ಯತ್ವ ನೋಂದಣಿಗೆ ಅಭಿಯಾನಕ್ಕೆ ಚಾಲನೆ ನೀಡಿದೆ.
ಪಕ್ಷದಲ್ಲಿ ತಮ್ಮ ಅಸ್ತಿತ್ವ ಸಾಬೀತು ಪಡಿಸಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಸದಸ್ಯರನ್ನು ಸೇರ್ಪಡೆ ಮಾಡುವುದೇ ಕಷ್ಟವಾಗಿದೆ. ಅದರಲ್ಲಿ ಡಿಜಿಟಲ್ ಸದಸ್ಯತ್ವ ಮತ್ತಷ್ಟು ಕಷ್ಟವಾಗಿದೆ ಎಂದು ಕ್ಷೇತ್ರಗಳ ಮಟ್ಟದಲ್ಲಿ ನಾಯಕರು ಗೋಳಾಡುತ್ತಿದ್ದಾರೆ.
ಇತ್ತೀಚೆಗೆ ಮೇಕೆದಾಟು ಯೋಜನೆಗೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಪಾದಯಾತ್ರೆಯಲ್ಲಿ ಕಂಡು ಬಂದ ಸಂಭ್ರಮ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಕಾಣಿಸುತ್ತಿಲ್ಲ. ಕೋವಿಡ್‍ನಿಂದ ಮೃತ ಪಟ್ಟವರ ಮನೆಗಳಿಗೆ ಭೇಟಿ ನೀಡಬೇಕು ಎಂಬ ಉದ್ದೇಶದಿಂದ ರೂಪಿಸಿದ ವಿಶೇಷ ಕಾರ್ಯಕ್ರಮವೂ ಪಕ್ಷದಲ್ಲಿ ಅಂತಹ ಸಂಚಲನ ಮೂಡಿಸಲಿಲ್ಲ.
ಚುನಾವಣೆ ಬಂದಾಗ ಟಿಕೆಟ್‍ಗಾಗಿ, ಅಧಿಕಾರ ಬಂದಾಗ ಸ್ಥಾನ ಮಾನ ಪಡೆಯಲು ಮುಂಚೂಣಿಯಲ್ಲಿ ನಿಲ್ಲುವ ನಾಯಕರು ಪಕ್ಷ ಸಂಘಟನೆ ವಿಷಯ ಬಂದಾಗ ರಗ್ಗು ಹೊದ್ದು ಮಲಗಿ ಬಿಡುತ್ತಾರೆ. ಅಂತಹವನ್ನು ಶೋಸಿ ಬದಿಗೆ ಸರಿಸುವುದು ರಾಜ್ಯ ನಾಯಕರಿಗೆ ತ್ರಾಸದಾಯಕ ವಿಷಯವಾಗಿದೆ.

Articles You Might Like

Share This Article