ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಅಗ್ನಿಪರೀಕ್ಷೆಯಾಗಲಿರುವ ಪೂರ್ವಭಾವಿ ಸಭೆ

Social Share

ಬೆಂಗಳೂರು, ನ.22- ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಪೈಕಿ, ಗಟ್ಟಿ ಮತ್ತು ಜೋಳ್ಳನ್ನು ವಿಂಗಡಿಸಲು ನವೆಂಬರ್ 25ರಂದು ನಡೆಯುವ ಸಭೆ ಮಹತ್ವದ್ದಾಗಲಿದೆ.

ವರ್ತೂರಿನ ಸಮೀಪ ನಡೆಯುವ ಸಭೆಯಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಆಕಾಂಕ್ಷಿಯೂ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಭಾಗವಹಿಸುವವರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಬೂತ್‍ನ ಪ್ರತಿಯೊಬ್ಬ ಏಜೆಂಟ್‍ನ ಸಂಪೂರ್ಣ ವಿವರಗಳೊಂದಿಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲದವರಿಗೆ ಈ ಮಾಹಿತಿಗಳು ಲಭ್ಯವಾಗುವುದಿಲ್ಲ. ಸದಸ್ಯತ್ವ ನೋಂದಣಿ, ಕ್ಷೇತ್ರ ಸಮೀಕ್ಷೆ ನಡೆಸಿದವರಿಗೆ ಮಾತ್ರ ಸ್ಪಷ್ಟ ಮಾಹಿತಿ ಇರಲು ಸಾಧ್ಯ. ಕಾಟಾಚಾರಕ್ಕೆ ಅರ್ಜಿ ಸಲ್ಲಿಸಿ ಅದೃಷ್ಟ ಪರೀಕ್ಷೆಯ ಮೇಲೆ ನಂಬಿಕೆ ಇಟ್ಟುಕೊಂಡವರಿಗೆ ಪೂರ್ವ ಭಾವಿ ಸಭೆ ಕಠಿಣ ಪರೀಕ್ಷೆಯಾಗಲಿದೆ.

ಪ್ರಭಾವ ಬಳಸಿ ಟಿಕೆಟ್ ಪಡೆಯುತ್ತೇವೆ ಎಂಬ ವಿಶ್ವಾಸದಲ್ಲಿ ಇರುವವರಿಗೆ ಅಥವಾ ಸಿಕ್ಕರೆ ಸಿಗಲಿ ಎಂದು ಕಾಟಾಚಾರಕ್ಕೆ ಅರ್ಜಿ ಸಲ್ಲಿಸಿದವರು ಪೂರ್ವ ಭಾವಿ ಸಮಾಲೋಚನೆಯಲ್ಲಿ ಜರಡಿಯಾಗಿ ಹೋಗಲಿದ್ದಾರೆ.

ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಲು ನಿನ್ನೆಯವರೆಗೂ ಕಾಲಾವಕಾಶವಿತ್ತು. 224 ಕ್ಷೇತ್ರಗಳಿಂದ 1450 ಮಂದಿ ಅರ್ಜಿ ಖರೀದಿಸಿದ್ದರು. ಅವರಲ್ಲಿ 1350 ಮಂದಿ ಚುನಾವಣಾ ಬಾಂಡ್ ಪಾವತಿ ಮಾಡಿ ಅರ್ಜಿ ಮರಳಿಸಿದ್ದಾರೆ. ಸಾಮಾನ್ಯ ಕ್ಷೇತ್ರಕ್ಕೆ ಎರಡು ಲಕ್ಷ, ಮೀಸಲು ಕ್ಷೇತ್ರಗಳಿಗೆ ಒಂದು ಲಕ್ಷ ಬಾಂಡ್ ಸಲ್ಲಿಸುವಂತೆ ಪಕ್ಷ ಸೂಚಿಸಿತ್ತು. ಈ ಬಾಂಡ್‍ಗಳಿಂದ ಒಟ್ಟು 27 ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ.

ಕೆಲವರು ಹಣ ಇದೆ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಶಾಸಕರಿರುವ ಕಡೆಯೂ ಕೆಲವರು ಅರ್ಜಿ ಗುಜರಾಯಿಸಿ ಟಿಕೆಟ್ ಬಯಸಿದ್ದಾರೆ. ಬಹುತೇಕ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಖಚಿತ ಎಂದು ಹೇಳಲಾಗಿದೆ. ಹಾಗಾಗಿ ಈ ಕ್ಷೇತ್ರಗಳಿಗೆ ಸಲ್ಲಿಸಿರುವ ಅರ್ಜಿಗಳು ಊರ್ಜಿತವಾಗುವ ಸಾಧ್ಯತೆ ಕಡಿಮೆಯಿದೆ. ಆದರೂ ಕೆಲವರು ಶಾಸಕರ ಸಲಹೆಯ ಮೇರೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪಕ್ಷದ ಶಾಸಕರಿಲ್ಲದ ಕಡೆಗಳಲ್ಲಿ ಕೆಲವು ಕಡೆ ಭಾರೀ ಪೈಪೊಟಿ ಇದೆ. ಸುಮಾರು 700 ಹೆಚ್ಚು ಮಂದಿ ಯುವಕರು ತಮ್ಮ ರಾಜಕೀಯ ಭವಿಷ್ಯ ಪರೀಕ್ಷೆ ಮುಂದಾಗಿದ್ದಾರೆ. ಉದಯಪುರ ಘೋಷಣೆಯ ಪ್ರಕಾರ ಶೇ.50ರಷ್ಟು ಬಿ ಫಾರಂಗಳನ್ನು 50 ವರ್ಷದೊಳಗಿನವರಿಗೆ ನೀಡಬೇಕಿದೆ. ಮಹಿಳೆಯರಿಗೆ ಆದ್ಯತೆ ನೀಡಬೇಕಿದೆ. ಹಾಗಾಗಿ ಬಹಳಷ್ಟು ಹಿರಿಯ ನಾಯಕರು ತಮ್ಮ ಜೊತೆ ತಮ್ಮ ಮಕ್ಕಳಿಂದಲೂ ಅರ್ಜಿ ಹಾಕಿಸಿದ್ದಾರೆ. ಅರ್ಜಿ ಸಲ್ಲಿಸಿದಾಕ್ಷಣ ಟಿಕೆಟ್ ಪಡೆಯಲು ಅರ್ಹತೆ ಪಡೆದಿದ್ದೇವೆ ಎಂದು ಭಾವಿಸುವಂತಿಲ್ಲ ಎಂಬ ಸಂದೇಶ ರವಾನೆಯಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ನ.25ರಂದು ನಡೆಯುವ ಸಭೆಯಲ್ಲಿ ಕುಳಿತು ಅಭ್ಯರ್ಥಿಗಳಿಗೆ ಪೂರ್ವ ಭಾವಿ ಪರೀಕ್ಷೆ ನಡೆಸಲಿದ್ದಾರೆ.

ಆಕಾಂಕ್ಷಿಗಳಿಗೆ ಕ್ಷೇತ್ರಗಳ ಪರಿಚಯ ಯಾವ ಮಟ್ಟಿಗಿದೆ. ಪಕ್ಷದ ಚಟುವಟಿಕೆಗಳಲ್ಲಿ ಎಷ್ಟು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೆಪಿಸಿಸಿ ಸೂಚನೆ ಆಧರಿಸಿ ನಡೆದ ಪ್ರತಿಭಟನೆ, ಕಾರ್ಯಕ್ರಮಗಳಲ್ಲಿ ಯಾವ ಪಾತ್ರ ವಹಿಸಿದ್ದಾರೆ. ಸ್ಥಳೀಯ ಸಮಸ್ಯೆಗಳು ಹಾಗು ಕ್ಷೇತ್ರದ ನಾಡಿ ಮಿಡಿತವನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬೆಲ್ಲಾ ವಿಚಾರಗಳನ್ನು ಪರಿಶೀಲನೆಗೆ ಒಳಪಡಲಿವೆ.

ಚೀನಾದಲ್ಲಿ ಕೈಗಾರಿಕಾ ಸಗಟು ಕೇಂದ್ರದಲ್ಲಿ ಬೆಂಕಿ, 36 ಕಾರ್ಮಿಕರ ಸಾವು

ಪ್ರಮುಖವಾಗಿ ಪಕ್ಷ ನಿಷ್ಠೆ ಹಾಗೂ ಪಕ್ಷದ ಸಿದ್ಧಾಂತಗಳ ಕುರಿತು ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇದೆ. ಹೊಸ ಅಭ್ಯರ್ಥಿಗಳು ಮತ್ತು ಹಿರಿಯ ನಾಯಕರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಅರ್ಜಿ ಸಲ್ಲಿಸಿದವ ಪೈಕಿ ಸ್ಪರ್ಧೆಗೆ ಅರ್ಹರೆಷ್ಟು ಮಂದಿ ಎಂಬ ಸಂಭವನೀಯ ಪಟ್ಟಿ ಸಿದ್ಧಗೊಳ್ಳಲಿದೆ. ಅಂತಿಮ ಪಟ್ಟಿಯಲ್ಲಿ ಆಕಾಂಕ್ಷಿಗಳ ಜನಪ್ರಿಯತೆ, ಆರ್ಥಿಕ ಸ್ಥಿತಿಗತಿ ಮತ್ತು ಗೆಲ್ಲುವ ಸಾಧ್ಯತೆಗಳನ್ನು ಆಧರಿಸಿ ಚುನಾವಣೆಯಲ್ಲಿ ಸ್ರ್ಪಧಿಸುವ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಬಹುತೇಕ ಡಿಸೆಂಬರ್ ವೇಳೆಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಳ್ಳಲಿದೆ. ಅದಕ್ಕಾಗಿಯೇ ಬಿಡುವಿಲ್ಲದಂತೆ ಪಕ್ಷ ತಯಾರಿಗಳನ್ನು ನಡೆಸುತ್ತಿದೆ. 2023 ವಿಧಾನಸಭೆ ಚುನಾವಣೆಯನ್ನೂ ಮಾಡು ಇಲ್ಲವೇ ಮಡಿ ಅನುಸಾರ ಸವಾಲಾಗಿ ಸ್ವೀಕರಿಸಿರುವ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಅಧಿಕಾರ ಪ್ರತಿಷ್ಠಾಪಿಸಿ ದೇಶದಲ್ಲಿ ಮತ್ತೆ ಕಾಂಗ್ರೆಸ್‍ಗೆ ಜೀವ ತುಂಬಲು ಮುಂದಾಗಿದ್ದಾರೆ. ಬಹುತೇಕ ಕುಟುಂಬ ಪಾರುಪಥ್ಯ, ಪ್ರಭಾವ ಮೀರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಮತದಾರರ ಪಟ್ಟಿ ಅಕ್ರಮ : ನಾಳೆ ಕಾಂಗ್ರೆಸ್‍ನಿಂದ ಆಯೋಗಕ್ಕೆ ದೂರು

ಅನ್ಯ ಪಕ್ಷಗಳಿಂದ ಕಾಂಗ್ರೆಸ್‍ನತ್ತ ವಲಸೆ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹಲವಾರು ಮಂದಿ ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ಈವರೆಗೂ ಅವರು ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿಲ್ಲ. ಅಂತಹ ಹಾಲಿ ಶಾಸಕರಿಗೆ ಹೈಕಮಾಂಡ್ ಸೂಚನೆಯ ಮೇರೆಗೆ ವಿಶೇಷ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Congress, ticket, aspirants, preliminary, meeting,

Articles You Might Like

Share This Article