ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಗಾಳ

Social Share

ಬೆಂಗಳೂರು, ಜ.22- ಬೆಳಗಾವಿ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ನತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿದೆ. ಈ ವಿಷಯದಲ್ಲಿ ಕೈ ಪಾಳೇಯದಲ್ಲೇ ಹಗ್ಗಜಗ್ಗಾಟವೂ ಶುರುವಾಗಿದ್ದು, ಹಲವು ಲೆಕ್ಕಾಚಾರಗಳು ನಡೆದಿವೆ.
ಕಳೆದ ಡಿಸೆಂಬರ್ನಲ್ಲಿ ನಡೆದ 25 ಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ತಲಾ 11 ಸ್ಥಾನಗಳನ್ನು ಹಂಚಿಕೊಂಡಿವೆ, ಜೆಡಿಎಸ್ ಎರಡು ಮತ್ತು ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಖನ್ ಗೆಲುವು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಹಾಗೇ ಕಾಂಗ್ರೆಸ್ಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಸಿಕ್ಕಿದಂತಾಗಿದೆ.
ಬೆಳಗಾವಿಯಲ್ಲಿ ಲಖನ್ರನ್ನು ಗೆಲ್ಲಿಸಿಕೊಳ್ಳಲು ಮತ್ತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಜಾರಕಿಹೊಳಿ ಕುಟುಂಬ ತೆರೆಮರೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಲಖನ್ರ ಗೆಲುವಿಗೆ ರಮೇಶ್ ಜಾರಕಿಹೊಳಿ ಪ್ರಮುಖರಾಗಿದ್ದರೂ, ರಾಜಕೀಯ ಭವಿಷ್ಯದ ಚರ್ಚೆ ಬಂದಾಗ ಇಡೀ ಕುಟುಂಬ ಒಂದಾಗಿ ನಿರ್ಣಯ ತೆಗೆದುಕೊಳ್ಳಲಿದೆ. ಹೀಗಾಗಿ ಲಖನ್ ಅವರ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ಗೆ ಕರೆ ತರುವ ತಯಾರಿಗಳು ನಡೆಯುತ್ತಿವೆ.
ಪಕ್ಷೇತರ ಲಖನ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ಗೆ ವಿಧಾನ ಪರಿಷತ್ನಲ್ಲಿ ಹೆಚ್ಚಿನ ಬಲ ಏನು ಬರುವುದಿಲ್ಲ. ಆದರೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಜೀವಿನಿಯಂತಾಗುವ ಸಾಧ್ಯತೆ ಇದೆ. ವಿಧಾನ ಪರಿಷತ್ನಲ್ಲಿ ಬಿಜೆಪಿ 37 ಸದಸ್ಯರನ್ನು, ಕಾಂಗ್ರೆಸ್ 26 ಸದಸ್ಯರನ್ನು ಹೊಂದಿದೆ. ಜೆಡಿಎಸ್ ಸಭಾಪತಿ ಸೇರಿ 11 ಸ್ಥಾನಗಳನ್ನು ಹೊಂದಿದೆ.
ಯಾವುದೇ ಕಾಯಿದೆ-ಕಾನೂನುಗಳು ಅಥವಾ ನಿರ್ಣಯಗಳು ಅಂಗೀಕಾರ ಪಡೆದುಕೊಳ್ಳಬೇಕಾದರೆ ಅಗತ್ಯವಾದ ಏಕಪಕ್ಷೀಯ ಬಲಾಬಲವನ್ನು ಬಿಜೆಪಿ ಈಗಾಗಲೇ ಹೊಂದಿದೆ. ಒಂದು ವೇಳೆ ಕಠಿಣ ಪರಿಸ್ಥಿತಿಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಾಗ ಮಾತ್ರ ಬಿಜೆಪಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಗ ಲಖನ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಲಿದೆ.
ಕಾಂಗ್ರೆಸ್ 26-ಜೆಡಿಎಸ್ 10 ಸೇರಿದರೆ 36 ಸಂಖ್ಯಾಬಲವಾಗಲಿದೆ. ಲಖನ್ ಅವರು ಯಾರ ಪರವಾಗಿ ನಿಲ್ಲಲಿದ್ದಾರೆಯೋ ಅವರಿಗೆ ಗೆಲುವಾಗಲಿದೆ. ಅನಿವಾರ್ಯ ಸಂದರ್ಭದಲ್ಲಿ ಸಭಾಪತಿ ಅವರು ಕೂಡ ಆತ್ಮಸಾಕ್ಷಿಯ ಮತ ಚಲಾಯಿಸಬಹುದು. ಇದು ಕೂಡ ನಿರ್ಣಾಯಕವಾಗಲಿದ್ದು, ಬಿಜೆಪಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸಲಿದೆ.
ಒಂದು ವೇಳೆ ಜೆಡಿಎಸ್ ತನ್ನದೇ ಆದ ನಿಲುವು ತಳೆದರೆ ಅಥವಾ ತಟಸ್ಥವಾದರೆ ಬಿಜೆಪಿಗೆ ಯಾರ ಬೆಂಬಲವೂ ಬೇಕಾಗುವುದಿಲ್ಲ. ಲಖನ್ ಅವರ ಮತಕ್ಕೂ ಹೆಚ್ಚಿನ ಮಾನ್ಯತೆ ಬರುವುದಿಲ್ಲ. ಬಹಳಷ್ಟು ಬಾರಿ ಸೂಕ್ಷ್ಮ ಸನ್ನಿವೇಶದಲ್ಲಿ ಕೂದಲೆಳೆಯ ಅಂತರದಲ್ಲಿ ಆಡಳಿತ ರೂಢ ಪಕ್ಷ ವಿಧಾನ ಪರಿಷತ್ನಲ್ಲಿ ಗುರಿ ಸಾಧನೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಮುಂದೆ ಮತಾಂತರ ನಿಷೇಧ ಕಾಯ್ದೆ ಎಂಬ ವಿವಾದಿತ ಮಸೂದೆ ವಿಧಾನ ಪರಿಷತ್ನಲ್ಲಿ ಅಂಗೀಕಾರಕ್ಕೆ ಬಾಕಿ ಇದೆ. ಈ ಸಂದರ್ಭದಲ್ಲಿ ಬಲಾಬಲಗಳ ಲೆಕ್ಕಾಚಾರ ಮಹತ್ವದ್ದಾಗಿದೆ.
ಪರಿಸ್ಥಿತಿಯನ್ನು ಗಮನಿಸಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಲಖನ್ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುವ ಒಲವು ತೋರಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪ್ರಸ್ತುತ ಬಿಜೆಪಿಯಲ್ಲಿರುವ ಶಾಸಕ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ನಾಯಕರು.
ಹೀಗಾಗಿ ಲಖನ್ರ ಕಾಂಗ್ರೆಸ್ ಸೇರ್ಪಡೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡು ತೆರೆ ಮರೆಯಲ್ಲಿ ಚರ್ಚೆಗಳು ನಡೆಯುತ್ತಿವೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಂತೇಶ್ ಕವಟಗಿ ಮಠ ಅವರ ಸೋಲಿನ ಸೇಡನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದಿನ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ಸುಳಿವು ಅರಿತಿರುವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರ ಜೊತೆ ಚರ್ಚೆಯಲ್ಲಿ ತೊಡಗಿದ್ದಾರೆ. ಇನ್ನೊಬ್ಬ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತ್ರ ಕಾಂಗ್ರೆಸ್ ಸೇರ್ಪಡೆ ವಿಷಯದಲ್ಲಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎನ್ನಲಾಗಿದೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವೆ ಮೊದಲಿನಿಂದಲೂ ವೈಯಕ್ತಿಕ ನೆಲೆಗಟ್ಟಿನಲ್ಲಿ ಅಸಮಧಾನಗಳಿವೆ. ಡಿ.ಕೆ.ಶಿವಕುಮಾರ್ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮೂಗು ತೂರಿಸುತ್ತಾರೆ ಎಂಬ ಕಾರಣಕ್ಕೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿದ್ದಾಗ ಬಂಡಾಯದ ಕಹಳೆ ಊದಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದರು.
ಈಗ ಅದೇ ಕಾಂಗ್ರೆಸ್ ಜೊತೆ ಸಹಕಾರ ನೀಡಲು ಸಿದ್ಧರಿದ್ದರಾದರೂ ಡಿ.ಕೆ.ಶಿವಕುಮಾರ್ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಮತ್ತೊಂದೆಡೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಲಖನ್ ಸೇರ್ಪಡೆಗೆ ವಿರೋಧ ಹೊಂದಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವೆ ಪದೇ ಪದೇ ವಾಕ್ಸಮರ ನಡೆಯುತ್ತಿದ್ದು, ಕೆಲವೊಮ್ಮೆ ಅದು ತಾರಕಕ್ಕೆ ಹೋಗಿರುವ ಪ್ರಸಂಗಳು ಇವೆ. ಈಗಾಗಲೇ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ನಲ್ಲಿ ಪ್ರಭಾವಿಯಾಗಿದ್ದಾರೆ.
ಕಳೆದ ಬಾರಿ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಇದೇ ಲಖನ್ ಅವರನ್ನು ರಮೇಶ್ ಜಾರಕಿಹೊಳಿ ವಿರುದ್ಧವೇ ಕಣಕ್ಕಿಳಿಸಿತ್ತು. ಈಗ ಲಖನ್ರನ್ನು ವಿಧಾನ ಪರಿಷತ್ನಲ್ಲಿ ರಮೇಶ್ ಜಾರಕಿಹೊಳಿ ಅವರೆ ಗೆಲ್ಲಿಕೊಂಡು ಬಂದು ಭವಿಷ್ಯ ರೂಪಿಸಿದ್ದಾರೆ. ಇಡೀ ಕುಟುಂಬ ಲಖರನ್ನು ಕಾಂಗ್ರೆಸ್ಗೆ ಸೇರಿಸಲು ಆಸಕ್ತಿ ತೋರಿಸಿದ್ದರೆ ಡಿ.ಕೆ.ಬಣ ಅಡ್ಡಗಾಲಾಗಿ ನಿಂತಿದೆ.
ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಬಣ ತೆರೆ ಮರೆಯಲ್ಲಿ ಹಲವು ಕಸರತ್ತುಗಳನ್ನು ನಡೆಸುತ್ತಿದೆ. ಅಂತಿಮ ಫಲಿತಾಂಶ ಏನು ಎಂಬುದು ಕುತೂಹಲ ಕೆರಳಿಸಿದೆ.

Articles You Might Like

Share This Article