ಕಾಂಗ್ರೆಸ್ ಟ್ವೀಟ್‍ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಕೆಂಡ

Social Share

ಬೆಂಗಳೂರು,ಆ.10-ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆಯಾಗಿ 3ನೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾಂಗ್ರೆಸ್ ಟ್ವೀಟ್‍ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವ ಕಾಂಗ್ರೆಸ್ ನಾಯಕರು ಸುಳ್ಳು ಆರೋಪಗಳನ್ನು ಮಾಡುತ್ತಾ ಸರ್ಕಾರ ಮತ್ತು ನಮ್ಮ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ತಿರುಗೇಟು ನೀಡಿದರು.

ಬೊಮ್ಮಾಯಿ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂದು ಹೇಳಲು ಕಾಂಗ್ರೆಸ್‍ನವರಿಗೆ ಯಾವ ನೈತಿಕತೆ ಇದೆ. ಒಂದು ಅಧಿಕೃತ ವಿರೋಧ ಪಕ್ಷವಾಗಿ ಸಾಮಾಜಿಕ ಜಾಲತಾಣಗಳನ್ನು ಹೇಗೆ ನಿರ್ವಹಣೆ ಮಾಡಬೇಕೆಂಬ ಕನಿಷ್ಟ ಜ್ಞಾನ ಇಲ್ಲದಿರುವುದು ಆ ಪಕ್ಷದ ದಿವಾಳಿತನ ತೋರಿಸುತ್ತದೆ ಎಂದು ಕೆಂಡ ಕಾರಿದರು.

ಸಿಎಂ ಅವರ ಕೆಲಸ ಕಾರ್ಯವನ್ನು ಸಹಿಸಿಕೊಳ್ಳಲು ಆಗದೆ ಈ ರೀತಿ ಹೊಟ್ಟೆ ಉರಿದುಕೊಂಡು ಸುಳ್ಳು ವದಂತಿಗಳನ್ನು ಸೃಷ್ಟಿಸುವ ಕೆಲಸ ಕಾಂಗ್ರೆಸ್ ನಾಯಕರಿಂದ ನಡೆಯುತ್ತಿದೆ. ರಾಜ್ಯದ ಜನತೆ ಇದನ್ನು ನಂಬಬಾರದು ಎಂದು ಅವರು ಮನವಿ ಮಾಡಿದರು.

ಬೊಮ್ಮಾಯಿ ಆಡಳಿತ ನೋಡಿ ಕಾಂಗ್ರೆಸ್‍ಗೆ ತಲೆ ಕೆಟ್ಟಿದೆ. ಬಿಜೆಪಿ ಸಿಎಂನ್ನ ಕಾಂಗ್ರೆಸ್‍ನವರು ಹೇಗೆ ಬದಲಾವಣೆ ಮಾಡುತ್ತಾರೆ. ಅವರಿಗೆ ಭಯ ಬಂದು ಹೀಗೆ ಮಾತಾಡುತ್ತಿದ್ದಾರೆ. ಜನ ಕಾಂಗ್ರೆಸ್ ಮಾತು ಕೇಳಿ ನಗುತ್ತಿದ್ದಾರೆ ಎಂದು ಕುಹುಕವಾಡಿದರು.

ಬಿಡುಗಡೆಗೆ ವಿರೋಧ: ಸನ್ನಡತೆ ಆಧಾರದಲ್ಲಿ ಕೊಲೆ ಪಾತಕಿ ವಾಮಂಜೂರು ಪ್ರವೀಣ್ ಬಿಡುಗಡೆಯಾಗುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇಂದು ನನ್ನನ್ನು ಭೇಟಿಯಾದ ಪ್ರವೀಣ್ ಹೆಂಡತಿ ಮತ್ತು ಕುಟುಂಬ ಹಾಗೂ ಕೊಲೆಯಾದ ಕುಟುಂಬದ ಸದಸ್ಯರು ಯಾವುದೇ ಕಾರಣಕ್ಕೂ ಆತನನ್ನ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡದಂತೆ ಮನವಿ ಮಾಡಿದ್ದಾರೆ. ಈ ಕುರಿತು ಅಧಿಕಾರಿಗಳ ಜೊತೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

1994 ರಲ್ಲಿ 4 ಜನರನ್ನ ಕೊಲೆ ಮಾಡಿದ್ದ ಪ್ರವೀಣ್. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಸನ್ನಡತೆ ಆಧಾರದಲ್ಲಿ ಆತನನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಆತನ ಎರಡು ಕುಟುಂಬದವರಿಂದ ವಿರೋಧ ವ್ಯಕ್ತವಾಗಿದೆ ಎಂದರು.

Articles You Might Like

Share This Article