ಬೆಂಗಳೂರು,ಅ.6- ಪೇ ಸಿಎಂ, 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪ್ರತ್ಯಸ್ತ್ರವಾಗಿ ರಾಜ್ಯ ಸರ್ಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಯಲ್ಲಿ ಸೋಲಾರ್ ಪಾರ್ಕ್ ಯೋಜನೆಯ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಮುಂದಾಗಿದೆ.
ಈ ಮೂಲಕ ಕಾಂಗ್ರೆಸ್‍ನ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಒಂದೊಂದಾಗಿ ಬಯಲಿಗೆಳೆದು ತಮ್ಮ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಒಂದೊಂದೇ ಅಸ್ತ್ರಗಳನ್ನು ಬಳಸುವ ಮೂಲಕ ತಿರುಗೇಟು ನೀಡಲು ಸರ್ಕಾರ ಸಜ್ಜಾಗಿದೆ.
ತುಮಕೂರು ಜಿಲ್ಲೆ ಪಾವಗಡ ಬಳಿ ಸೋಲಾರ್ ವಿದ್ಯುತ್ ಪಾರ್ಕ್ ನಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಸುಮಾರು 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಹಂಚಿಕೆಯನ್ನು ಕೇವಲ 8 ನಿಮಿಷದಲ್ಲಿ 295 ಮಂದಿಗೆ ನೀಡಿದ್ದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು.
ಸೋಲಾರ್ ಟೆಂಡರ್ ನೀಡುವಾಗ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬುದು ಬಿಜೆಪಿ ಆರೋಪವಾಗಿತ್ತು.ಪ್ರಸ್ತುತ ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿದೆ. ಜತೆಗೆ ಪೇ ಸಿಎಂ ಅಭಿಯಾನ ಆರಂಭಿಸಿದೆ.
ಹಾಗಾಗಿ ಕಾಂಗ್ರೆಸ್ ಸರ್ಕಾರದ ಅವಯಲ್ಲಿ ನಡೆದಿರುವ ಹಗರಣಗಳನ್ನು ಹೊರತೆಗೆದು ಜನತೆಯ ಮುಂದಿಡಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಇಂಧನ ಸಚಿವ ಸುನೀಲ್‍ಕುಮಾರ್, ಸೋಲಾರ್ ವಿದ್ಯುತ್ ಉತ್ಪಾದನಾ ಟೆಂಡರ್ ವೇಳೆ ನಡೆದ ಹಂಚಿಕೆ ಪ್ರಕ್ರಿಯೆ ಕುರಿತು ವರದಿ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಇದರ ಇಂಚಿಂಚು ಮಾಹಿತಿಯನ್ನು ಕಲೆಹಾಕಿರುವ ಅಕಾರಿಗಳು ವರದಿಯೊಂದನ್ನು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಮೇಲ್ನೋಟಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪದೋಷ ಉಂಟಾಗಿ ಅಕ್ರಮ ನಡೆದಿರುವುದು ಕಂಡು ಬಂದಿದೆ. ನೆಪಮಾತ್ರಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ತಮಗೆ ಬೇಕಾದವರಿಗೆ ಮಾತ್ರ ಇದನ್ನು ಹಂಚಿಕೆ ಮಾಡಲಾಗಿದೆ. ಮೊದಲೇ ಎಲ್ಲವೂ ಪೂರ್ವ ನಿಗದಿಯಂತೆ ನಡೆದಿದ್ದರಿಂದ ಟೆಂಡರ್‍ನ್ನು ಒಂದು ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಹಿಂಬಾಲಕರಿಗೆ ನೀಡಲಾಗಿದೆ.
ನಿಯಮಗಳ ಪ್ರಕಾರ ಟೆಂಡರ್ ಹಂಚಿಕೆಯಾಗದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವ ಸಾಧ್ಯತೆ ಇರುವುದರಿಂದ ತನಿಖೆ ನಡೆಸುವುದು ಸೂಕ್ತ ಎಂದು ಅಧಿಕಾರಿಗಳು ಸಚಿವ ಸುನೀಲ್‍ಕುಮಾರ್‍ಗೆ ವರದಿಯಲ್ಲಿ ಮನವಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿ ಸೋಲಾರ್ ವಿದ್ಯುತ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಸರ್ಕಾರ ತೀರ್ಮಾನಿಸಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಒಂದೆರಡು ದಿನಗಳಲ್ಲಿ ಸರ್ಕಾರದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.
ಏನಿದು ಪ್ರಕರಣ:
ತುಮಕೂರು ಜಿಲ್ಲೆ ಪಾವಗಡ ಬಳಿ ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಘಟಕವನ್ನು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿತ್ತು.
ನಾಗಲಮಡಿಕೆ ಹೋಬಳಿಯ 2300 ರೈತರು, 13 ಸಾವಿರ ಎಕರೆ ಭೂಮಿಯನ್ನು ಗುತ್ತಿಗೆ ನೀಡಿದ್ದರು. ಒಂದು ಎಕರೆಗೆ ವಾರ್ಷಿಕ 21ಸಾವಿರ ರೂ. ಬಾಡಿಗೆ ನೀಡಲಾಗುತ್ತಿತ್ತು. ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ.5ರಷ್ಟು ಬಾಡಿಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಸುಮಾರು 300 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, 8 ನಿಮಿಷದಲ್ಲೇ ಈ ಟೆಂಡರ್ ಪ್ರಕ್ರಿಯೆ ಮುಗಿದಿದ್ದಕ್ಕೆ ಹಲವರು ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ಈಗ ಬಿಜೆಪಿ ಸರ್ಕಾರ ನ್ಯಾಯಾಂಗ ತನಿಖೆ ನಡೆಸಲು ಮುಂದಾಗಿದೆ.