ಬಿಜೆಪಿಯಲ್ಲಿ ಕಳ್ಳನಾಯಕರು, ಖಳನಾಯಕರೇ ತುಂಬಿದ್ದಾರೆ : ಕಾಂಗ್ರೆಸ್ ತಿರುಗೇಟು

Social Share

ಬೆಂಗಳೂರು,ಜು.25- ಬಿಜೆಪಿ ಎಂದರೆ ಸಿಲ್ಲಿ ಸೋಲ್ಸ್ಗಳ ಕೂಟ. ಭ್ರಷ್ಟ ಜನತಾ ಪಕ್ಷದಲ್ಲಿ ಕಳ್ಳನಾಯಕರು, ಖಳನಾಯಕರೇ ತುಂಬಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಕನಕಪುರದ ಕೆಡಿಪಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕುರಿತು ಬಿಜೆಪಿ ಲೇವಡಿ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಹಲವು ಪತ್ರ ತಲುಪಿದರೂ ಕರ್ನಾಟಕದ ಲಂಚ, ಮಂಚದ ಸರ್ಕಾರದ ಬಗ್ಗೆ ದೆಹಲಿಯಲ್ಲಿರುವ ಬಿಜೆಪಿಯ ಕಳ್ಳರ ಗುರು ಮೌನದ ಮೂಲಕ ಭ್ರಷ್ಟಾಚಾರಕ್ಕೆ ಸಮ್ಮತಿ ನೀಡಿದ್ದಾರೆ. ವೈಫಲ್ಯಗಳಿಗೆ ಮೌನವೇ ಮದ್ದು ಎಂದು ತಿಳಿದಿರುವಂತಿದೆ ಎಂದು ಕಿಡಿಕಾರಿದೆ.

ಶೇ.40ರಷ್ಟು ಕಮೀಷನಿನ ಜೈಲು ಯಾತ್ರೆ ನಡೆಸಿದ್ದನ್ನು ಜಗತ್ತು ಕಂಡಿದೆ. ಡಿ.ಕೆ.ಶಿವಕುಮಾರ್ ವಿರುದ್ಧ ಯಾವ ಯೋಜನೆಯಲ್ಲಿ ಅಕ್ರಮ ನಡೆಸಿದ ಪ್ರಕರಣ ಇದೆ ಎಂಬುದನ್ನು ಬಿಜೆಪಿ ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದೆ.

ಭ್ರಷ್ಟತನವೇ ಬಿಜೆಪಿ ಮನೆ ದೇವರು. ಹಾಗಾಗಿ ಭ್ರಷ್ಟಾಚಾರ ವಿರೋಸಿದರೆ ಬಿಜೆಪಿ ಬುಡದಲ್ಲಿ ಬೆಂಕಿ ಉರಿಯುತ್ತದೆ ಎಂದು ಲೇವಡಿ ಮಾಡಲಾಗಿದೆ.
ಇನ್ನು ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ದ ದೆಹಲಿಯಲ್ಲಿ ಚಾರ್ಜ್ಶೀಟ್ ದಾಖಲಾಗಿರುವ ಬಗ್ಗೆಯೂ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ದೊಂಬಿ ನಡೆಸಿ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ ತೇಜಸ್ವಿ ಸೂರ್ಯ ವಿರುದ್ಧ ಉತ್ತರಪ್ರದೇಶದ ಬುಲ್ಡೋಜರ್ ಮಾದರಿಯನ್ನು ಏಕೆ ಜಾರಿ ಮಾಡಬಾರದು ಎಂದು ಪ್ರಶ್ನಿಸಿದೆ.

ಈ ಹಿಂದೆ ತೇಜಸ್ವಿ ಸೂರ್ಯ ಅವರು ದೊಂಬಿ, ಗಲಭೆ ಮಾಡುವವರ ವಿರುದ್ಧ ಯುಪಿ ಮಾದರಿಯನ್ನು ಅನುಸರಿಸಬೇಕೆಂದು ಒತ್ತಾಯಿಸಿದ್ದರು. ಈಗ ದೆಹಲಿ ಗಲಭೆಯಲ್ಲಿ ಸೂರ್ಯ ಅವರ ವಿರುದ್ಧ ಆರೋಪ ಪಟ್ಟಿ ದಾಖಲಾಗಿರುವುದರಿಂದ ಬುಲ್ಡೋಜರ್ ನುಗ್ಗಿಸುವುದು ಯಾವಾಗ? ಆಸ್ತಿ ಮುಟುಗೋಲು ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದ್ದು, ಶೀಘ್ರವೇ ಸಂಸದರ ಆಸೆಯನ್ನು ಈಡೇರಿಸುವಂತೆ ಒತ್ತಾಯಿಸಿದೆ.

Articles You Might Like

Share This Article