ಕಾಂಗ್ರೆಸ್‍ ಮಹಿಳಾ ನಾಯಕಿಯರ ಸಮಾವೇಶಕ್ಕೆ ಪ್ರಿಯಾಂಕ ಗಾಂಧಿ

Social Share

ಬೆಂಗಳೂರು,ಜ.9- ನಗರದಲ್ಲಿ ನಡೆಯುವ ಮಹಿಳಾ ನಾಯಕಿಯರ ಸಮಾವೇಶದಲ್ಲಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ 16ರಂದು ನಗರದ ಅರಮನೆ ಮೈದಾನದಲ್ಲಿ ಮಹಿಳಾ ನಾಯಕಿಯರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯತ್, ಸಹಕಾರ ಸಂಘಗಳು ಸೇರಿದಂತೆ ಸಂಸತ್‍ವರೆಗೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಹೆಣ್ಣುಮಕ್ಕಳು ಭಾಗವಹಿಸಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಹಿಳಾ ನಾಯಕಿಯರ ಕೊಡುಗೆಗಳ ಬಗ್ಗೆ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯದ ಪ್ರತಿಯೊಂದು ಪಂಚಾಯತ್‍ನಿಂದ ಕನಿಷ್ಠ 10 ಮಂದಿ, ಭೂತ್ ಮಟ್ಟದಿಂದ ಕನಿಷ್ಠ 3 ಮಂದಿ ನಾಯಕಿಯರು ಭಾಗವಹಿಸಬೇಕು. ರಾಜ್ಯದ ಎಲ್ಲಾ ಭಾಗಗಳಿಂದ ಮಹಿಳಾ ನಾಯಕಿಯರು ಆಗಮಿಸಬೇಕು ಎಂದು ಸೂಚಿಸಲಾಗಿದೆ.

‘ಸಿದ್ದು ನಿಜ ಕನಸುಗಳು’ ವಿವಾದಿತ ಪುಸ್ತಕ ಬಿಡುಗಡೆಗೆ ಕಾಂಗ್ರೆಸ್ ಆಕ್ರೋಶ

ಇಂದು ಮಧ್ಯಾಹ್ನ ಟಿಕೆಟ್ ಆಕಾಂಕ್ಷಿಗಳ ಹಾಗೂ ಪ್ರಧಾನ ಕಾರ್ಯದರ್ಶಿಗಳ ಜೊತೆ ತಾವು ಸಭೆ ನಡೆಸಲಿದ್ದು, ಕಾರ್ಯಕ್ರಮ ಯಶಸ್ಸಿಗೆ ಸಲಹೆ ಸೂಚನೆಗಳನ್ನು ನೀಡುವುದಾಗಿ ಹೇಳಿದರು.

ನಾಳೆಯಿಂದ ಕಾಂಗ್ರೆಸ್ ಯಾತ್ರೆ ಆರಂಭವಾಗಲಿದೆ. ಸಿದ್ದರಾಮಯ್ಯ ಮತ್ತು ನಾನು ಜೊತೆಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗಾಗಲೇ ಪ್ರಣಾಳಿಕೆ ತಯಾರಿಕೆಯನ್ನು ಆರಂಭಿಸಿದೆ. ಶೇ.50ರಷ್ಟಿರುವ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲು ನಿರ್ಧರಿಸಲಾಗಿದೆ. ಅವರ ಬದುಕು ಉತ್ತಮಗೊಳ್ಳಲು ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗುವುದು. ಪ್ರಣಾಳಿಕೆಗೆ ಸಲಹೆಗಳನ್ನು ನೀಡಲು ಎಲ್ಲಾ ನಾಯಕರಿಗೆ ಮನವಿ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸಲು ಮುಕ್ತ ಅವಕಾಶಗಳಿವೆ ಎಂದರು.

ಜನರಿಗೆ ಶಾಪವಾದ ಬೆಲೆ ಏರಿಕೆ:
ದೇಶದಲ್ಲಿ ಬೆಲೆ ಏರಿಕೆ ದೊಡ್ಡ ಪಿಶಾಚಿಯಾಗಿದೆ. ಬದುಕಿನಲ್ಲಿ ಪ್ರತಿ ದಿನ ಜನರನ್ನು ಕಾಡುವ ಮೂಲಕ ಭಾರೀ ಸಮಸ್ಯೆ ಸೃಷ್ಟಿಸಿದೆ. ಜನರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಯಾರಿಗೂ ಆದಾಯ ಏರಿಕೆಯಾಗಿಲ್ಲ. ಅಡುಗೆ ಎಣ್ಣೆ 95 ರಿಂದ 225 ರೂ ಆಗಿದೆ, ಗೋಧಿ ಹಿಟ್ಟಿನ ಬೆಲೆ ದ್ವಿಗುಣಗೊಂಡಿದೆ,

ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆಯಂತೂ ಹೇಳಲು ಅಸಾಧ್ಯವಾದ ಮಟ್ಟಿಗೆ ಹೆಚ್ಚಾಗಿದೆ. ಎಲ್ಲಾ ವಸ್ತುಗಳ ಬೆಲೆ ಶೇ.60ರಷ್ಟು ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ಮತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾಳೆ ವಿವರವಾದ ಹೇಳಿಕೆ ನೀಡುವುದಾಗಿ ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ರಾಜ್ಯದ 64 ಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ಬಳಲಿದ್ದಾರೆ. ಬಹಳಷ್ಟು ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದಲ್ಲಿ 924 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಿರುದ್ಯೋಗ, ವ್ಯಾಪಾರ ನಷ್ಟದಿಂದ 2470 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ಯಾವುದು ನನ್ನ ಅಂಕಿ ಸಂಖ್ಯೆಗಳಲ್ಲ, ಸರ್ಕಾರವೇ ನೀಡಿರುವ ಅಧಿಕೃತ ಮಾಹಿತಿ ಎಂದರು.

ಬಿಜೆಪಿ ಪ್ರಣಾಳಿಕೆಯಲ್ಲಿ 660 ಭರವಸೆ ನೀಡಿತ್ತು, ಅದರಲ್ಲಿ ಶೇ.10ರಷ್ಟು ಮಾತ್ರ ಈಡೇರಿಸಿ ಉಳಿದ ಶೇ.90ರಷ್ಟು ಬಾಕಿ ಉಳಿಸಿದೆ. ನಾವು ಪ್ರತಿದಿನ ಒಂದೊಂದು ಪ್ರಶ್ನೆ ಕೇಳುತ್ತಿದ್ದೇವೆ. ಆದರೆ ಬಿಜೆಪಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್ ಪ್ರಣಾಳಿಕೆಯ ಶೇ.99ರಷ್ಟು ಭರವಸೆಗಳನ್ನು ಈಡೇರಿಸಿದೆ ಎಂದರು.

ರಾಮನಗರದಲ್ಲಿ ರಾಮಮಂದಿರ ಕಟ್ಟುವುದಾಗಿ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥನಾರಾಯಣ್ ಹೇಳಿದ್ದಾರೆ. ಇದಕ್ಕೂ ಮೊದಲು ರಾಮನಗರ ಸ್ವಚ್ಚಗೊಳಿಸುವುದಾಗಿ ಹೇಳಿದ್ದರು. ಬೇಕಾದರೆ ನಾನೇ ಒಂದು ಲೋಡು ಪರಕೆ ಕೊಡಿಸಲು ತಯಾರಿದ್ದೇನೆ. ಮೊದಲು ಸ್ವಚ್ಚ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ನಾಯಕರು ದೇವಸ್ಥಾನ, ಮಂದಿರ ಎಂದು ಭಾವನಾತ್ಮಕ ರಾಜಕಾರಣ ಮಾಡುತ್ತಿದ್ದಾರೆ. ನಾವು ಪ್ರಗತಿಯ ಬಗ್ಗೆ ಮಾತನಾಡುತ್ತಿದ್ದೇವೆ. ಬಿಜೆಪಿ ಧರ್ಮಾಧಾರಿತವಾಗಿ ಸಮಾಜವನ್ನು ವಿಭಜಿಸುತ್ತಿದೆ. ಬಿಜೆಪಿಯ ಕೋಮುವಾದದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ.

ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆಯಾಗಿದೆ. ನಮ್ಮ ಪಕ್ಷ ಬಡವರ ಹಸಿವಿನ ಬಗ್ಗೆ ಯೋಜಿಸುತ್ತೇವೆ. ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ಭಾವನಾತ್ಮಕ ರಾಜಕಾರಣ ಮಾಡುತ್ತಿದೆ. ನಾನು 300 ದೇವಸ್ಥಾನ ಕಟ್ಟಿಸಿದ್ದೇನೆ. ಹಾಗೆಂದು ಹಿಂದು ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಕೆ ಎಂದು ಪ್ರಶ್ನಿಸಿದರು.

ಸಾಲು ಸಾಲು ಆರೋಪಗಳಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ ಸರ್ಕಾರ

ಟಿಪ್ಪು ಸುಲ್ತಾನ್ ಬಗ್ಗೆ ಹಿಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೋಗಳಿಕೆಯ ಮಾತುಗಳನ್ನಾಡಿದರು.
ಈಗ ಬಿಜೆಪಿ ಸಿದ್ದರಾಮಯ್ಯ ಅವರ ಕುರಿತು ಪುಸ್ತಕವನ್ನು ಪ್ರಕಟಿಸುವ ಮೂಲಕ ಅಪಪ್ರಚಾರ ನಡೆಸಲು ಮುಂದಾಗಿದೆ. ಅದು ಕೇವಲ ಕಾಗದ ತುಂಡು ಮಾತ್ರ. ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿ ಪುಸ್ತಕ ಬಿಡುಗಡೆ ಮಾಡಲಿ, ಚರ್ಚೆಯಾಗಲಿ ಉತ್ತರ ನೀಡಲು ಕಾಂಗ್ರೆಸ್ ಸಿದ್ಧವಿದೆ ಎಂದು ಹೇಳಿದರು.

ತನಿಖೆಯಾಗಲಿ:
ಸ್ಯಾಂಟ್ರೋ ರವಿ ಪ್ರಕರಣ ಕುರಿತು ಬಿಜೆಪಿಗೂ ಇರುವ ಸಂಬಂಧದ ಬಗ್ಗೆ ನಾನು ಯಾಕೆ ಮಾತನಾಡಲಿ. ಮಾಧ್ಯಮಗಳೇ ಎಲ್ಲವನ್ನೂ ವಿವರಿಸುತ್ತಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಚ್ಚಿ ಬಿಚ್ಚಿ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗಜ್ಞಾನೇಂದ್ರ ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ನಿಷ್ಟಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶವನ್ನು ತಿಳಿಸಬೇಕಿದೆ ಎಂದು ಹೇಳಿದರು.

ಸ್ಯಾಂಡ್ರ್ಯೋ ರವಿಯ ಕೋಡ್ ವರ್ಡ್‍ಗಳ ಬಗ್ಗೆ ನಾನು ನಿನ್ನೆ ಮಾಧ್ಯಮಗಳಲ್ಲಿ ನೋಡಿದೆ. ಬಿಎಂಡಬ್ಲ್ಯೂ, ಮರ್ಸಿಡೆಜ್‍ಬೆಂಜ್, ಆಡಿ ಕಾರುಗಳ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದದ್ದು ನನಗೆ ಗೋತ್ತಿರಲಿಲ್ಲ ಎಂದರು.

ಪಕ್ಷ ಸೇರ್ಪಡೆ:
ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧೆ ಮಾಡಿದ್ದ ವಿಶ್ವನಾಥ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇಷ್ಟು ದಿನ ಅವರು ಮತ್ತು ಅವರ ಕುಟುಂಬ ನನ್ನ ವಿರುದ್ಧ ಹೋರಾಟ ನಡೆಸಿತ್ತು. ಜೊತೆಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕ ರಾಧಾಕೃಷ್ಣ ಹಾಗೂ ಹಲವಾರು ಪ್ರಮುಖರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ನೋಡಿ ಬಹುತೇಕ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಪಕ್ಷದಲ್ಲಿ ಹಳಬರು, ಹೊಸಬರು ಎಂಬುದಿಲ್ಲ. ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಲಾಗುತ್ತದೆ. ಪಕ್ಷದಲ್ಲೇ ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅದಕ್ಕೂ ಮೊದಲು ಕಾರ್ಯಕರ್ತರಾಗಿರುತ್ತೇವೆ.

ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧುಮಾದೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Congress, women, leaders, convention, Priyanka Gandhi, kpcc president, d k shivakumar,

Articles You Might Like

Share This Article