ಮೇಕೆದಾಟು ಪಾದಯಾತ್ರೆ ಯಶಸ್ವಿಗೆ ಕೈ ಪಡೆ ಅಂತಿಮ ತಯಾರಿ

Social Share

ಬೆಂಗಳೂರು,ಜ.8- ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಡ ಹೇರಲು ಕಾಂಗ್ರೆಸ್ ಹಮ್ಮಿಕೊಂಡಿರುವ ನೀರಿಗಾಗಿ ನಡಿಗೆ ಐತಿಹಾಸಿಕ ಪಾದಯಾತ್ರೆ ನಾಳೆಯಿಂದ ಆರಂಭವಾಗಲಿದೆ.ಹಳೆ ಮೈಸೂರು ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಈಗಾಗಲೇ ಕನಕಪುರ, ರಾಮನಗರದಲ್ಲಿ ಜಮಾವಣೆಗೊಂಡಿದ್ದಾರೆ.
ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದ್ದರೂ ನೀರಿಗಾಗಿ ನಡಿಗೆ ಕಾರ್ಯಕ್ರಮ ನಿರ್ವಿಗ್ನವಾಗಿ ನಡೆಯಲಿದೆ ಎಂದು ಕಾಂಗ್ರೆಸ್ ವಿಶ್ವಾಸ ಹೊಂದಿದೆ.ಪಾದಯಾತ್ರೆಗೆ ಸರ್ಕಾರದಿಂದ ತೀವ್ರ ವಿರೋಧ ವ್ಯಕ್ತಯಾಗುವ ಮಾತುಗಳು ಆರಂಭದಿಂದಲೂ ಕೇಳಿ ಬಂದಿದ್ದವು. ಆದರೆ, ಕ್ರಮೇಣ ಲಭ್ಯವಾಗುತ್ತಿರುವ ಮುನ್ಸೂಚನೆಗಳು ನೀರಿಗಾಗಿ ನಡೆ ಕಾರ್ಯಕ್ರಮಕ್ಕೆ ಹೆಚ್ಚಿನ ಅಡ್ಡಿ ಪಡಿಸದೆ ನಿಯಮ ಉಲ್ಲಂಘನೆ ವಿರುದ್ಧ ವಿಪ್ಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಲಾ ಹಾಗು-ಹೋಗುಗಳನ್ನು ಕಾಂಗ್ರೆಸ್ಸಿಗರ ತಲೆಗೆ ಕಟ್ಟಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಪಾದಯಾತ್ರೆಗೆ ಹೆಚ್ಚಿನ ಪ್ರತಿರೋಧ ವ್ಯಕ್ತವಾಗುವುದಿಲ್ಲ ಎಂಬ ಸಂದೇಶ ಕಾಂಗ್ರೆಸ್ ಪಾಳೇಯಕ್ಕೆ ದೊರೆತಿದೆ.
ಹೀಗಾಗಿ ಕೈ ಪಡೆಯಲ್ಲಿ ಉತ್ಸಾಹ ಹೆಚ್ಚಾಗಿದೆ. ಪಾದಯಾತ್ರೆಯಲ್ಲಿ ಯಶಸ್ವಿಗೊಳಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿ ಹಂತದಲ್ಲೂ ಚಾಣಕ್ಷ ನಡೆ ಅನುಸರಿಸುತ್ತಿದ್ದಾರೆ. ಸರ್ಕಾರ ಕೋವಿಡ್ ವಿಷಯದಲ್ಲಿ ರೂಪಿಸಿರುವ ಮಾರ್ಗಸೂಚಿಗಳು, ಜಾರಿಗೆ ತಂದ ಕಠಿಣ ನಿಯಮಗಳು, ಕಾಂಗ್ರೆಸ್ ಯಾತ್ರೆಗೆ ಅಡ್ಡಿ ಪಡಿಸುವ ಸಲುವಾಗಿ ಆಡಳಿತ ಯಂತ್ರ ದುರುಪಯೋಗ ಸೇರಿದಂತೆ ಎಲ್ಲವನ್ನು ಜನರ ಮುಂದಿಡಲಾರಂಭಿಸಿದ್ದಾರೆ.
ಹೀಗಾಗಿ ಸರ್ಕಾರ ಮುಜುಗರಕ್ಕೆ ಒಳಗಾಗಿದ್ದು, ವಿರೋಧ ವ್ಯಕ್ತಪಡಿಸಿದಷ್ಟು ಕಾಂಗ್ರೆಸ್ ರಾಜಕೀಯ ಲಾಭ ಮಾಡಿಕೊಳ್ಳುವುದನ್ನು ಹೆಚ್ಚು ಮಾಡಲಿದೆ. ಪಾದಯಾತ್ರೆಯಿಂದ ಬಿಜೆಪಿಗೆ ಹೆಚ್ಚಿನ ನಷ್ಟವೇನು ಆಗುವುದಿಲ್ಲ. ಜೆಡಿಎಸ್ ಪ್ರಾಬಲ್ಯಕ್ಕೆ ಹೆಚ್ಚು ಹಾನಿಯಾಗುವುದರಿಂದ ಆಡಳಿತಾರೂಢ ಬಿಜೆಪಿ ಪ್ರತಿರೋಧದಿಂದ ಹಿಂದೆ ಸರಿದಿದೆ ಎಂದು ಹೇಳಲಾಗುತ್ತಿದೆ.
ಆದರೆ, ಸರ್ಕಾರದ ಕಡೆಯಿಂದ ಬಂದಿರುವ ಸಂದೇಶ ಅಸಲಿಯೋ ಅಥವಾ ದಾರಿ ತಪ್ಪಿಸುವ ಹುನ್ನಾರವೋ ಎಂಬ ಗೊಂದಲ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಹೆಚ್ಚು ವಿರೋಧ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕೊನೆ ಕ್ಷಣದಲ್ಲಿ ಬಿಗಿ ಕ್ರಮ ಕೈಗೊಂಡರೆ ಎಂಬ ಆತಂಕವೂ ಕಾಡುತ್ತಿದೆ.
ಚಾಮರಾಜನಗರ, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಂದ ಸುಮಾರು 10 ಸಾವಿರ ಜನ ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಪೊಲೀಸರು ಜಿಲ್ಲೆಗಳ ಗಡಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳನ್ನು ತಡೆದು ನಿಲ್ಲಿಸುವ ಸಾಧ್ಯತೆ ಇದೆ.
ಹೀಗಾಗಿ ಪಾದಯಾತ್ರೆಯ ಮೊದಲ ದಿನಕ್ಕೆ ಹೊರ ಜಿಲ್ಲೆಗಳ ಬದಲು ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಲು ಸೂಚನೆ ರವಾನೆಯಾಗಿದೆ. ವೀಕೆಂಡ್ ಕಫ್ರ್ಯೂ ಮುಗಿದ ಬಳಿಕ ಸೋಮವಾರದಿಂದ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ ಹಂತದಲ್ಲೂ ಸರ್ಕಾರದ ನಿರ್ಧಾರಗಳ ಮೇಲೆ ನಿಗಾವಹಿಸಿರುವ ಕಾಂಗ್ರೆಸ್ ನಾಯಕರು, ಹಲವು ರೀತಿಯ ಯೋಜನೆಗಳನ್ನು ಸಜ್ಜು ಮಾಡಿಕೊಂಡಿದೆ. ಪಾದಯಾತ್ರೆಗೆ ಯಾವುದೇ ಅಡ್ಡಿ ಪಡಿಸದೆ ಇದ್ದರೆ ಅನುಸರಿಸಬೇಕಾದ ತಂತ್ರಗಾರಿಕೆಗಳ ಬಗ್ಗೆ, ಪ್ರತಿರೋಧ ವ್ಯಕ್ತವಾದರೆ ಅನುಸರಿಸಬೇಕಾದ ತಂತ್ರಗಾರಿಕೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೀಗಾಗಲೇ ಕನಕಪುರಕ್ಕೆ ತೆರಳಿದ್ದು, ಮಧ್ಯಾಹ್ನ ಶಾಸಕಾಂಗ ಸಭೆ ಹಾಗೂ ಹಿರಿಯ ನಾಯಕರ ಸಭೆ ನಡೆಯಲಿದೆ.
ಇಂದು ಮಧ್ಯಾಹ್ನ ಕಾಂಗ್ರೆಸ್‍ನ ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭೆ ಸದಸ್ಯರು, ಸಂಸದರು ಕನಕಪುರದತ್ತ ತೆರಳಿ ಸಮಾವೇಶಗೊಳ್ಳಲಿದ್ದಾರೆ. ಬೇರೆ ಬೇರೆ ತಂತ್ರಗಾರಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಶಾಸಕರಿಗೆ ಜವಾಬ್ದಾರಿ ವಹಿಸಲಾಗಿತ್ತಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂಬ ಭೇದ ಇಲ್ಲದೆ ಅಖಂಡ ಕರ್ನಾಟಕದ ಕಾಂಗ್ರೆಸ್ ಜನಪ್ರತಿನಿಗಳು ಪಾದಯಾತ್ರೆಗೆ ಕೈಜೋಡಿಸಲು ಸೂಚನೆ ನೀಡಲಾಗಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಸಮನ್ವಯತೆ ಹಿಂದಿಗಿಂತಲೂ ಹೆಚ್ಚಾಗಿದ್ದು, ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‍ಗೆ ಹೊಸ್ ಟಾನಿಕ್ ನೀಡುವ ಪಾದಯಾತ್ರೆ ನಾಳೆಯಿಂದ ಹತ್ತು ದಿನಗಳ ಕಾಲ ಸಂಚಲನ ಮೂಡಿಸಲಿದೆ.

Articles You Might Like

Share This Article