ಬೆಂಗಳೂರು, ಫೆ.15- ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಹೈಟೆಕ್ ಬಸ್ನಿಲ್ದಾಣಗಳ ನಿರ್ಮಾಣ ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಧಾನಸಭೆಗಿಂದು ತಿಳಿಸಿದರು.
ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಕಾರಣದಿಂದಾಗಿ ಅನೇಕ ಕಡೆ ಬಸ್ ಸಂಚಾರವೇ ಆಗಿಲ್ಲ. ನೌಕರರು ಮತ್ತು ಸಿಬ್ಬಂದಿಗಳ ಕುಟುಂಬಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ನಮ್ಮ ಇಲಾಖೆ 5ರಿಂದ 6 ಸಾವಿರ ಕೋಟಿ ರೂ. ಸಾಲ ನೀಡಿದೆ ಎಂದು ಹೇಳಿದರು.
ಸಾರಿಗೆ ಇಲಾಖೆಯ ಬಹುತೇಕ ಎಲ್ಲ ನಿಗಮಗಳು ನಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ ನಾವು ಹೈಟೆಕ್ ಬಸ್ನಿಲ್ದಾಣಗಳನ್ನು ನಿರ್ಮಿಸಲು ಹೇಗೆ ಸಾಧ್ಯ? ಹೊಸ ಬಸ್ಗಳ ಖರೀದಿಗೆ ತೀರ್ಮಾನ ಮಾಡಲಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಅವರು, ನಾನು ಸಾರಿಗೆ ಸಚಿವನಾಗಿದ್ದಾಗ ಮದ್ದೂರು, ಮಂಡ್ಯ, ಮಳವಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಮೈತ್ರಿ ಸರ್ಕಾರ ಪತನವಾದ ಬಳಿಕ ಈ ಪ್ರಸ್ತಾವನೆ ಕಾಗದದ ಮೇಲೆ ಉಳಿದೆ. ನಾನು ಯಾರಿಗೂ ತಾರತಮ್ಯ ಮಾಡಿರಲಿಲ್ಲ.
ಉತ್ತರ ಕರ್ನಾಟಕದ ಅನೇಕ ಕಡೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದೆ ಎಂದು ಸದನದ ಗಮನ ಸೆಳೆದರು. ಶಾಸಕ ಆರ್.ನರೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಇಲಾಖೆಯಿಂದ ಹೊಸ ಬಸ್ ಖರೀದಿಗೆ ತೀರ್ಮಾನಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹೊಸ ಬಸ್ಗಳು ಬರುತ್ತಿದ್ದಂತೆ ಆದ್ಯತೆ ಮೇರೆಗೆ ಬಸ್ ಒದಗಿಸುವುದಾಗಿ ಹೇಳಿದರು.
#Construction, #hitech, #busstation, #notpossible, #Sriramulu,