ಪ್ರಧಾನಿ ಅನುಮತಿ ಇಲ್ಲದೆ ಬಿಜೆಪಿ ಸಿಎಂಗಳು ವಿದೇಶ ಪ್ರವಾಸ ಮಾಡುವಂತಿಲ್ಲ..!
ನವದೆಹಲಿ,ಸೆ.14- ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ವಿದೇಶ ಪ್ರವಾಸ ತೆರಳಬೇಕಾದರೆ ಕಡ್ಡಾಯವಾಗಿ ಪ್ರಧಾನಮಂತ್ರಿಯವರ ಅನುಮತಿ ಪಡೆಯಲೇಬೇಕು. ಪ್ರಧಾನಿ ನರೇಂದ್ರಮೋದಿ ಇಲ್ಲವೇ ಅವರ ಕಚೇರಿಯ ಮಾಹಿತಿ ಇಲ್ಲದೇ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳು, ಸಚಿವರು ಮತ್ತು ಸಂಬಂಧಿಕರು ಸೇರಿದಂತೆ ಯಾರೇ ವಿದೇಶಕ್ಕೆ ತೆರಳಬೇಕಾದರೆ ಅನುಮತಿ ಪಡೆಯದೇ ತೆರಳಬಾರದೆಂದು ಸೂಚಿಸಲಾಗಿದೆ.
ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿರುವ ಪ್ರಧಾನಿ, ಯಾರೇ ಆಗಲಿ ವಿದೇಶಕ್ಕೆ ಹೋಗಬೇಕಾದರೆ ನನಗೆ ಮಾಹಿತಿ ನೀಡಬೇಕು. ಮುಖ್ಯಮಂತ್ರಿಗಳೇ ಆಗಲಿ, ಉಪಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳಿಗೂ ಕೂಡ ಇದು ಅನ್ವಯವಾಗುತ್ತದೆ ಎಂದಿದ್ದಾರೆ.
ಇತ್ತೀಚೆಗೆ ನವದೆಹಲಿಯಲ್ಲಿ ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡಲಾಗಿದೆ. ಕೆಲವರು ಪಕ್ಷದ ಅನುಮತಿ ಪಡೆಯದೆ ವಿದೇಶಕ್ಕೆ ತೆರಳುತ್ತಾರೆ. ನಾವು ಬೇರೆ ಪಕ್ಷಗಳನ್ನು ಟೀಕೆ ಮಾಡುತ್ತೇವೆ. ಆದರೆ ನಮ್ಮಲ್ಲಿ ಶಿಸ್ತು ಇಲ್ಲದಿದ್ದರೆ ಹೇಗೆ ಎಂದು ಪ್ರಧಾನಿ ಅಸಮಾಧಾನದಿಂದಲೇ ಅಮಿತ್ ಷಾ ಅವರನ್ನು ಪ್ರಶ್ನೆ ಮಾಡಿದ್ದಾರೆ.
ವಿದೇಶಕ್ಕೆ ಹೋಗಬೇಕಾದರೆ ಯಾವ ಕಾರ್ಯಕ್ರಮಕ್ಕೆ ಹೋಗುತ್ತೀದ್ದೀರಿ ಅದರ ಉದ್ದೇಶವೇನು? ನಿಮ್ಮ ಜೊತೆ ಯಾರ್ಯಾರು ಬರುತ್ತಾರೆ, ಕುಟುಂಬದ ಸದಸ್ಯರನ್ನು ಕರೆದೊಯ್ದರೆ ಅದರ ಮಾಹಿತಿಯನ್ನು ನೀಡಬೇಕು. ನನ್ನ ಒಪ್ಪಿಗೆ ಇಲ್ಲದೆ ತೆರಳಬಾರದು ಎಂದು ಸೂಚಿಸಿದ್ದಾರೆ. ಬಿಜೆಪಿ ಯಾವಾಗಲೂ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತದೆ. ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದವರನ್ನು ಟೀಕಿಸುವಾಗ ಮೊದಲು ನಾವು ಸರಿಯಾಗಿ ಇರಬೇಕು. ಮುಂಬರುವ ಮಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯದಲ್ಲಿ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕೆಂದು ತಾಕೀತು ಮಾಡಿದ್ದಾರೆ.
ಪ್ರಧಾನಿಯವರ ನಿರ್ದೇಶನದಿಂದ ಎಚ್ಚೆತ್ತುಕೊಂಡಿರುವ ಅಮಿತ್ ಷಾ ಎಲ್ಲ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ಸಚಿವರು ಸೇರಿದಂತೆ ಪ್ರತಿಯೊಬ್ಬರಿಗೂ ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.