ರಸ್ತೆಗೆ ಅಡ್ಡಬಿದ್ದ ಕಂಟೈನರ್ ಲಾರಿಗಳು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್

Social Share

ಬೆಂಗಳೂರು/ನೆಲಮಂಗಲ, ಫೆ.27- ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಬಿದ್ದ ಕಂಟೈನರ್ ಲಾರಿಗಳನ್ನು ಮೇಲೆತ್ತಿ ತೆರವುಗೊಳಿಸಲು ಗಂಟೆಗಟ್ಟಲೆ ಹಿಡಿದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ನಿಂತಲ್ಲೇ ನಿಂತು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಾಷ್ಟ್ರೀಯ ಹೆದ್ದಾರಿ-4ರ ಅಡಕಮಾರನಹಳ್ಳಿ ಬಳಿ ಮೇಲ್ಸೇತುವೆ ಮೇಲೆ ದೊಡ್ಡ ಕಂಟೈನರ್ ಲಾರಿಗಳು ಪರಸ್ಪರ ಡಿಕ್ಕಿ ಹೊಡೆದು ರಸ್ತೆಯ ಎರಡೂ ಬದಿಗೂ ಅಡ್ಡಲಾಗಿ ಬಿದ್ದಿದ್ದರಿಂದ ಆ ಭಾಗದಲ್ಲಿ ಸಂಚರಿಸುವ ವಾಹನಗಳು ಸಂಪೂರ್ಣವಾಗಿ ಸುಮಾರು ಐದಾರು ಗಂಟೆಗಳ ಕಾಲ ಸ್ತಬ್ಧಗೊಂಡು ಪೊಲೀಸರು ಹಾಗೂ ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿಗೆ ಹಿಡಿಶಾಪ ಹಾಕಿದ್ದಾರೆ.
ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಪೂನಾ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಪಕ್ಕದಲ್ಲೇ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ.ಇದರಿಂದ ಎರಡೂ ವಾಹನಗಳು ಉರುಳಿಬಿದ್ದವು. ಹಿಂದೆ ಬರುತ್ತಿದ್ದ ವಾಹನಗಳ ಚಾಲಕರು ದಿಢೀರನೆ ನಿಲ್ಲಿಸಿದ ಪರಿಣಾಮ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಆದರೆ, ಈ ಬಗ್ಗೆ ಮಾಹಿತಿ ಇಲ್ಲದೆ ಒಂದೇ ಸಮನೆ ವಾಹನಗಳು ಮೇಲ್ಸೇತುವೆ ಮೇಲೆ ಬಂದ ಪರಿಣಾಮ ಟ್ರಾಫಿಕ್ ಜಾಮ್ ಆಗಿ ಯಾವ ಕಡೆಯೂ ಹೋಗಲಾರದೆ ಪರದಾಡುವಂತಾಯಿತು. ಪೊಲೀಸರಿಗೆ ಕರೆ ಮಾಡಿದರೆ ಅವರೆಲ್ಲರೂ ಬೇರೆ ಕಡೆ ಕರ್ತವ್ಯದಲ್ಲಿದ್ದರು. ಇನ್ನು ಹೆದ್ದಾರಿ ಪ್ರಾಕಾರದ ತುರ್ತು ಪರಿಹಾರ ಕಾರ್ಯಾಚರಣೆ ವಾಹನಗಳು ಕೂಡ ಸ್ಪಂದಿಸದೆ ಇದ್ದಿದ್ದರಿಂದ ವಾಹನಗಳಲ್ಲಿದ್ದ ಪ್ರಯಾಣಿಕರ ತಾಳ್ಮೆ ಕಟ್ಟೆಯೊಡೆದಿತ್ತು.
ಸುಮಾರು ಎರಡು ತಾಸುಗಳ ನಂತರ ಅಲ್ಲಿಗೆ ಬಂದ ಕೆಲ ಸಿಬ್ಬಂದಿ ಲಾರಿಯನ್ನು ಅಲ್ಲಿಂದ ಎತ್ತಲು ಪ್ರಯತ್ನಿಸಿದ ಸಂದರ್ಭದಲ್ಲಿ ಒಳಗಿದ್ದ ಸರಕು ಹೊರಗೆ ಬಿದ್ದಿತ್ತು. ಇದರಿಂದ ಗಾಬರಿಗೊಂಡು ನಿಲ್ಲಿಸಿದರು.ಕ್ರೇನ್ ಕೂಡ ಬರಲು ಸಾಧ್ಯವಾಗದ ಕಾರಣ ಸುಮಾರು ಆರು ತಾಸಿಗೂ ಹೆಚ್ಚು ಕಾಲ ವಾಹನಗಳು ನಿಂತುಕೊಂಡು ಏನೂ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಾತ್ರಿ 9 ಗಂಟೆ ನಂತರ ವಾಹನಗಳನ್ನು ಸರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕಾದ ಸಿಬ್ಬಂದಿ ಹಾಗೂ ಪೊಲೀಸರು ಒಂದೊಂದು ಸಬೂಬು ಹೇಳಿ ವಾಹನ ಸವಾರರ ಕೋಪಕ್ಕೆ ಕಾರಣರಾದರು.
ಹೆದ್ದಾರಿಗಳಲ್ಲಿ ಸಂಚರಿಸುವ ಗಸ್ತು ವಾಹನಗಳು ಸುಗಮ ಸಂಚಾರದ ಬಗ್ಗೆ ಆಗಾಗ ಮಾಹಿತಿ ನೀಡಬೇಕಾಗುತ್ತದೆ. ಎಲ್ಲೂ ಕೂಡ ಸಂಚಾರಕ್ಕೆ ವ್ಯತ್ಯಯವಾಗದೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿರುತ್ತದೆ. ಆದರೆ, ಇಲ್ಲಿ ಎಲ್ಲರೂ ಮೈಮರೆತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಸಂಚಾರವನ್ನು ಬೇರೆ ಮಾರ್ಗಕ್ಕೆ ಬದಲಾಯಿಸಿದ ಪರಿಣಾಮ ಬೆಂಗಳೂರಿಗೆ ಬರಲು ಕೆಲವರಿಗೆ ಸುಮಾರು ಎಂಟೊಂಬತ್ತು ತಾಸು ಬೇಕಾಯಿತು. ಇನ್ನು ತಮ್ಮ ಊರುಗಳಿಗೆ ತೆರಳಲು ಬಂದವರು ಯಾಕಾದರೂ ಈ ರಸ್ತೆಗೆ ಬಂದೆವೋ ಎಂದು ವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹೆಣಗಾಡಿ ಕೊನೆಗೆ ರಾತ್ರಿ 9.30ರ ನಂತರ ಲಾರಿಗಳನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಲಾರಿಯನ್ನು ಅಲ್ಲಿಂದ ಎತ್ತಲು ಇನ್ನೂ ಪ್ರಯಾಸ ಪಡುತ್ತಿದ್ದಾರೆ.

Articles You Might Like

Share This Article