ಗುತ್ತಿಗೆದಾರರ ಆರೋಪ ಕುರಿತು ಲೋಕಾಯುಕ್ತ ತನಿಖೆ ಸರ್ಕಾರ ನಿರ್ಧಾರ

Social Share

ಬೆಂಗಳೂರು,ಆ.26- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ಗುತ್ತಿಗೆದಾರರ ಸಂಘದ 40% ಕಮೀಷನ್ ಆರೋಪವನ್ನು ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ.

2006ರಿಂದ ಈವರೆಗೂ ಲೋಕೋಪಯೋಗಿ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ 5 ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಲೋಕಾಯುಕ್ತ ಸಂಸ್ಥೆಯಿಂದಲೇ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನತೆಯ ಮುಂದಿಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಈ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿರುವ ಅವರು ಸುಮಾರು 15 ವರ್ಷದಿಂದ ವಿವಿಧ ಇಲಾಖೆಗಳಲ್ಲಿ ನಡೆದಿರುವ ಸಣ್ಣ ಮತ್ತು ಬೃಹತ್ ಕಾಮಗಾರಿಗಳ ವಿವರವನ್ನು ನೀಡಬೇಕೆಂದು ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಪ್ರಮುಖವಾಗಿ ಲೋಕೋಪಯೋಗಿ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ವಸತಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆಗಳು ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ನಡೆದಿರುವ ಗುತ್ತಿಗೆ ಕಾಮಗಾರಿಗಳನ್ನು ಪಟ್ಟಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಜೊತೆ ಔಪಚಾರಿಕವಾಗಿ ಚರ್ಚೆ ನಡೆಸಿ ಲೋಕಾಯುಕ್ತ ಸಂಸ್ಥೆಗೆ ವಹಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಗುತ್ತಿಗೆದಾರರಿಂದ ಆರೋಪ ಕೇಳಿಬಂದಿದೆ. ಎಸ್.ಎಂ.ಕೃಷ್ಣ ಅವಧಿಯಿಂದ ಈವರೆಗೂ ಇಂತಹ ಆರೋಪಗಳು ಹೊಸದೇನಲ್ಲ. ಹಿಂದಿನ ಸರ್ಕಾರಗಳು ಭ್ರಷ್ಟಾಚಾರಕ್ಕೇನೂ ಹೊರತಾಗಿರಲಿಲ್ಲ. ಆದರೆ ನಮ್ಮ ಸರ್ಕಾರದ ಮೇಲೆ ಗಂಭೀರ ಆರೋಪ ಇರುವುದರಿಂದ ತನಿಖೆ ನಡೆಸುವುದೇ ಸೂಕ್ತ ಎಂದು ಸಿಎಂ ಸಚಿವರಿಗೆ ಮನವರಿಕೆ ಮಾಡಿದ್ದಾರೆ.

ಚುನಾವಣಾ ವರ್ಷವಾಗಿರುವುದರಿಂದ ಪ್ರತಿಪಕ್ಷಗಳು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತವೆ. ಮಾಧ್ಯಮಗಳಲ್ಲೂ ಕೂಡ ಹೆಚ್ಚು ಪ್ರಚಾರಕ್ಕೆ ಬರುತ್ತದೆ. ಇದಕ್ಕೆ ಪೂರ್ಣ ವಿರಾಮ ಹಾಕಬೇಕಾದರೆ ಲೋಕಾಯುಕ್ತ ಸಂಸ್ಥೆಯಿಂದಲೇ ತನಿಖೆ ನಡೆಸುವುದು ಸರಿಯಾದ ಕ್ರಮ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಹಿಂದೆ ಕೆಲವು ಪ್ರಭಾವಿ ನಾಯಕರ ಬೆಂಬಲವಿದೆ. ಇದನ್ನು ಬೆಳೆಯುತ್ತಾ ಬಿಟ್ಟರೆ ಪಕ್ಷಕ್ಕೆ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಕೂಡಲೇ ಇದನ್ನು ಲೋಕಾಯುಕ್ತಕ್ಕೆ ವಹಿಸುವುದು ಸೂಕ್ತ ಎಂದು ಸಿಎಂ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಕಾನೂನು ಸಮರಕ್ಕೂ ಸಿದ್ದ: ಸರ್ಕಾರದ ವರ್ಚಸ್ಸಿಗೆ 40% ಕಮೀಷನ್ ಆರೋಪ ಧಕ್ಕೆ ಉಂಟು ಮಾಡುವ ಕಾರಣ ಗುತ್ತಿಗೆದಾರರ ವಿರುದ್ಧ ಕಾನೂನಿನ ಸಮರ ಸಾರಲು ಸರ್ಕಾರ ಮುಂದಾಗಿದ್ದು, ಕಾನೂನಿನ ಮೂಲಕವೇ ಪ್ರತಿಪಕ್ಷಗಳಿಗೆ ಉತ್ತರ ಕೊಡಲು ಸಿದ್ಧವಾಗಿದೆ.

ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು ಕೊಡುವಂತೆ ಸವಾಲು ಹಾಕಬೇಕು. ಇದು ಸಿದ್ದರಾಮಯ್ಯ ಪ್ರಚೋದಿತ ಆರೋಪ. ಸಿದ್ದರಾಮಯ್ಯ ವಿರುದ್ಧ ಮತ್ತು ಕೆಂಪಣ್ಣ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂಬ ಬಗ್ಗೆ ಸಚಿವರು ಕೌಂಟರ್ ಮುಂದುವರೆಸುವಂತೆ ಸೂಚನೆ ನೀಡಲಾಗಿದೆ.

ಸಿದ್ದರಾಮಯ್ಯ ಪ್ರಚೋದಿತ ಈ ಹೊಸ ನಾಟಕಕ್ಕೆ ಇತರೇ ಕಾಂಗ್ರೆಸ್ ನಾಯಕರು ಸಾತ್ ಕೊಡುತ್ತಿಲ್ಲ. ಇದು ನಮಗೆ ದೊಡ್ಡ ಪ್ಲಸ್ ಪಾಯಿಂಟ್. ಇದನ್ನೂ ಸಚಿವರ ಕೌಂಟರ್ ಅಟ್ಯಾಕ್‍ನಲ್ಲಿ ಪ್ರಸ್ತಾಪಿಸಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮೀಷನ್ ದಂಧೆ ಬಗ್ಗೆ ಸಾಕ್ಷಿ ಇದ್ದರೆ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ನೀಡಬೇಕು. ಕಾಂಗ್ರೆಸ್ ಪ್ರಾಯೋಜಿತ ಕೆಂಪಣ್ಣ ಆರೋಪಕ್ಕೆ ನಾವು ಕೂಡ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಸೂಚಿಸಿದ್ದಾರೆ.ಚುನಾವಣೆ ಬಂದಾಗ ಸರ್ಕಾರದ ಮೇಲೆ ಇಂಥ ಆರೋಪ ಮಾಡುವುದು ಸರ್ವೆ ಸಾಮಾನ್ಯ. ಇದನ್ನು ನಾವು ಕೂಡ ರಾಜಕೀಯವಾಗಿಯೇ ಎದುರಿಸಬೇಕು. ಒಬ್ಬೊಬ್ಬರ ಹೇಳಿಕೆಗೂ ತಿರುಗೇಟು ನೀಡಬೇಕು ಎಂದು ಸಚಿವರಿಗೆ ನಿರ್ದೇಶನ ನೀಡಲಾಗಿದೆ.

Articles You Might Like

Share This Article