ಶೇ.40ರಷ್ಟು ಕಮಿಷನ್ ಆರೋಪ, ವ್ಯಕ್ತಿಗತ ದ್ವೇಷಕ್ಕಷ್ಟೆ ಸೀಮಿತವೇ.. ?

ಬೆಂಗಳೂರು, ಏ.13- ಸರ್ಕಾರಿ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ದಂಧೆಯ ಆರೋಪ ಪ್ರಸ್ತಾಪವಾದಾಗಲೇಲ್ಲಾ ದೂರ್ವಾಸ ಮುನಿಗಳಂತೆ ಸಿಡಿದೆದ್ದು, ಕಾಂಗ್ರೆಸ್ ವಿರುದ್ಧ ಮುಗಿ ಬೀಳುತ್ತಿದ್ದ ಬಿಜೆಪಿ ಸರ್ಕಾರದ ಸಚಿವರು, ಮುಖಂಡರಿಗೆ ಸಂತೋಷ್ ಕುಮಾರ್ ಪಾಟೀಲ್ ಆತ್ಮಹತ್ಯೆ ಪ್ರಕರಣ ನಿರುತ್ತರನ್ನಾಗಿ ಮಾಡಿದೆ.

ಶೇ.40ರಷ್ಟು ಕಮಿಷನ್ ದಂಧೆಯ ವಿಷಯ ಚರ್ಚೆಗೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಹಲವು ಬಾರಿ ಮನವಿ ಮಾಡಿತ್ತು. ನಿಲುವಳಿ ಸೂಚನೆಯಡಿ ನೋಟಿಸ್ ಅನ್ನು ನೀಡಿತ್ತು. ಯಾವುದೇ ಸೂಚನೆ ನೀಡಿದಾಗ ಅದರ ಪ್ರಸ್ತುತತೆ ಕುರಿತು ಪ್ರಾಥಮಿಕ ವಿಷಯ ಮಂಡನೆಗೆ ಅವಕಾಶ ನೀಡುವುದು ಸಾಮಾನ್ಯ. ಆದರೆ ವಿಧಾನಸಭೆಯಲ್ಲಿ ನೋಟಿಸ್ ಚರ್ಚೆಯಾಗದೆ ತಿರಸ್ಕಾರವಾಗಿತ್ತು.

ವಿಧಾನ ಪರಿಷತ್‍ನಲ್ಲಿ ವಿಷಯ ಪ್ರಸ್ತಾಪವಾಗಿತ್ತಾದರೂ ಚರ್ಚೆಗೆ ಹೆಚ್ಚು ಅವಕಾಶ ಸಿಗಲಿಲ್ಲ. ಸಾರ್ವಜನಿಕ ಮಹತ್ವದ ವಿಷಯ ವರ್ಗೀಕರಣದ ಮೇಲೆ ಚರ್ಚೆಗೆ ಅವಕಾಶ ಸಿಕ್ಕಿತ್ತಾದರೂ ಬಿಜೆಪಿಯ ಸಚಿವರು, ಶಾಸಕರು ಹೆಚ್ಚು ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ.

ಯಾರೋ ಒಬ್ಬ ವ್ಯಕ್ತಿ ಆರೋಪ ಮಾಡಿದ ತಕ್ಷಣ, ಅದನ್ನು ತಂದು ಇಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ಇದೇ ರೀತಿ ಮಾಡಿದರೆ ವ್ಯವಸ್ಥೆ ಹಾಳಾಗುತ್ತದೆ. ಸರ್ಕಾರ ನಡೆಸುವುದು ಕಷ್ಟವಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಪಕ್ಷಗಳಿಗೆ ಅಡ್ಡಗೋಡೆಯಾಗಿ ನಿಂತು ಚರ್ಚೆಯ ದಿಕ್ಕು ತಪ್ಪಿಸಿದರು. ನನ್ನ ಬಳಿ ನೀವು ಲಂಚ ಕೇಳಿದ್ದೀರಾ ಎಂದು ಆರೋಪ ಮಾಡುತ್ತೇನೆ, ಒಪ್ಪಿಕೊಳ್ಳುತ್ತೀರಾ ಎಂದು ತಿರುಗೇಟು ನೀಡಿದ್ದರು. ಮಾಧುಸ್ವಾಮಿಯವರಿಗೆ ಪ್ರಕರ ವಾಗ್ದಾಳಿಗೆ ಪ್ರತ್ಯುತ್ತರಿಸಲಾಗದೆ ಪ್ರತಿಪಕ್ಷಗಳ ಸದಸ್ಯರು ಸುಮ್ಮನಾಗಿ ಬಿಡುತ್ತಿದ್ದರು.

ವಿಧಾನ ಸಭೆಯಲ್ಲೂ ಇದೇ ರೀತಿ ಚರ್ಚೆಗಳು ನಡೆದು ಶೇ.40ರಷ್ಟು ಕಮಿಷನ್ ದಂಧೆ ಚರ್ಚೆಯಾಗಲೇ ಇಲ್ಲ. ಒಂದು ಹಂತದಲ್ಲಿ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರತಿಭಟನೆಗೆ ಕರೆ ನೀಡಿರುವುದು ಪ್ರಸ್ತಾಪವಾಯಿತು. ಆದರೂ ಪ್ರತಿಪಕ್ಷಗಳು ಅಸಹಾಯಕವಾಗಿದ್ದವು.

2018ರ ವಿಧಾನಸಭೆ ಚುನಾವಣೆ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಪ್ರಚಾರ ಮಾಡುವಾಗ ಸಿದ್ದರಾಮಯ್ಯ ಅವರದು 10 ಪರ್ಸೆಂಟ್ ಸರ್ಕಾರ ಎಂದು ಬಹಿರಂಗ ಆರೋಪ ಮಾಡಿದ್ದರು. ಅದನ್ನು ಬಿಜೆಪಿ ಆಕ್ರಮಣಕಾರಿ ಪ್ರಚಾರಕ್ಕೆ ಬಳಸಿಕೊಂಡಿತ್ತು. ಅಭಿವೃದ್ಧಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಎಷ್ಟೇ ಪ್ರಚಾರ ಮಾಡಿದರು, 10 ಪರ್ಸೆಂಟ್ ಆರೋಪದ ಮುಂದೆ ಯಾವುದು ನಿಲ್ಲಲಿಲ್ಲ.

ಹೆಚ್ಚು ಹಣ ಖರ್ಚು ಮಾಡಿದಷ್ಟು ಹೆಚ್ಚು ಕಮಿಷನ್ ಪಡೆದಿರುತ್ತಾರೆ. ಭ್ರಷ್ಟಾಚಾರ ವ್ಯಾಪಕವಾಗಿ ಸಚಿವರು, ಅಕಾರಿಗಳ ಸಂಪಾದನೆ ಕೂಡ ಏರಿಕೆಯಾಗಿರುತ್ತದೆ ಎಂಬ ವಾದಗಳು ಕೇಳಿ ಬಂದಿದ್ದವು. ಹೀಗಾಗಿ ಹೆಚ್ಚು ಕೆಲಸ ಮಾಡಿದ ಸಿದ್ದರಾಮಯ್ಯ ಅವರ ಸರ್ಕಾರದ ಹೆಗ್ಗಳಿಕೆಗೆ ಕಮಿಷನ್ ದಂಧೆ ಮುಳುವಾಗಿತ್ತು.

ಇತ್ತೀಚೆಗೆ ಈಶ್ವರಪ್ಪ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಮಹಾತ್ಮ ಗಾಂ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯ ಗುರಿ ಮೀರಿ ಸಾಧನೆ ಮಾಡಿದೆ. ಕೇಂದ್ರ ಸರ್ಕಾರ 12 ಕೋಟಿ ಮಾನವ ದಿನಗಳ ಗುರಿ ನೀಡಿತ್ತು. ರಾಜ್ಯ ಸರ್ಕಾರ ಇನ್ನೂ ಮೂರು ಕೋಟಿ ಹೆಚ್ಚುವರಿ ಮಾನವ ದಿನಗಳಷ್ಟು ಕೆಲಸ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದರು. ಹೀಗಾಗಿ ಬಿಜೆಪಿಯೇ ಮಾಡುತ್ತಿದ್ದ ಹೆಚ್ಚು ಕೆಲಸ, ಹೆಚ್ಚು ಕಮಿಷನ್ ವಾದ ಈಗ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೂ ಮುಳುವಾಗಿದೆ. ಅದರಲ್ಲೂ ಕಮಿಷನ್ ಪ್ರಮಾಣ ಶೇ.10ರಿಂದ ಶೇ.40ಕ್ಕೆ ದುಬಾರಿಯಾಗಿ ಗುತ್ತಿಗೆದಾರರನ್ನು ಹೈರಾಣಾಗಿಸಿದೆ.

# ತಿರುಗು ಬಾಣವಾದ ವಾದ:
ಸಚಿವ ಮಾಧುಸ್ವಾಮಿ ಕಮಿಷನ್ ದಂಧೆ ಆರೋಪ ನಿರಾಕರಿಸುವ ವೇಳೆ ಪ್ರಬಲವಾದವೊಂದನ್ನು ಮುಂದಿಟ್ಟಿದ್ದರು. ಸರ್ಕಾರಿ ಕಾಮಗಾರಿ ನಿರ್ವಹಣೆ ಮಾಡಿದವರು ಸರ್ಕಾರಕ್ಕೆ ಶೇ.20ರಷ್ಟು ತೆರಿಗೆ ಪಾವತಿಸಬೇಕು, ಶೇ.40ರಷ್ಟು ಕಮಿಷನ್ ಕೊಟ್ಟರೆ ಉಳಿಯುವುದು, ಬಾಕಿ ಶೇ.40ರಷ್ಟು ಮಾತ್ರ. ಅರ್ಧಕ್ಕಿಂತಲೂ ಕಡಿಮೆ ಹಣದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವೇ. ಗುತ್ತಿಗೆದಾರರ ಸಂಘದ ಆರೋಪದಲ್ಲಿ ತಲೆ ಬುಡ ಇದೆಯೇ ಎಂದು ಪ್ರಶ್ನಿಸಿದರು. ಈಶ್ವರಪ್ಪ ಅದಕ್ಕೆ ಧ್ವನಿಗೂಡಿಸಿದ್ದರು. ಈಗ ಸಂತೋಷ್ ಕುಮಾರ್ ಪಾಟೀಲ್ ಆತ್ಮಹತ್ಯೆ ಮತ್ತು ಅದರ ಹಿಂದಿರುವ ಭ್ರಷ್ಟಾಚಾರದ ಆರೋಪ ಶೇ.40ರಷ್ಟು ಕಮಿಷನ್ ದಂಧೆಗೆ ಸಾಕ್ಷ್ಯ ಒದಗಿಸಿದಂತಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ.

ಈ ಮೊದಲು ಬಿಜೆಪಿ ನಾಯಕರು, ಸಚಿವರು ಭ್ರಷ್ಟಾಚಾರ ಸಮರ್ಥಿಸಿಕೊಳ್ಳುವ ಭರದಲ್ಲಿ ಮಂಡಿಸಿದ ವಾದಗಳು ಈಗ ತಿರುಗು ಬಾಣವಾಗುತ್ತಿವೆ. ರಾಜಕೀಯವಾಗಿ ಈ ಆರೋಪ ಭಾರೀ ಪರಿಣಾಮ ಬೀರುವುದಂತೂ ಸತ್ಯ. ಇನ್ನೂ ಆಡಳಿತಾತ್ಮಕವಾಗಿ ಸರ್ಕಾರಕ್ಕೆ ಅಂಟಿದ ಕಳಂಕ ಮತ್ತಷ್ಟು ರಾಡಿಯಾಗಲಿದೆ.

ಗಣಿ ಅಕ್ರಮಗಳಿಗೆ ನೆರವಾಗಿದ್ದ ಆರೋಪ ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿಯಲ್ಲಿ ದಾಖಲಾದ ಹಿನ್ನೆಲೆಯಿಂದ 2011ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ನಂತರದ ಬೆಳವಣಿಗೆಯಲ್ಲಿ ಡಿ-ನೋಟಿಫಿಕೇಷನ್ ಆರೋಪ ಯಡಿಯೂರಪ್ಪ, ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರನ್ನು ಜೈಲು ಪಾಲು ಮಾಡಿತ್ತು. ಆ ವೇಳೆ ಚೆಕ್ ನಲ್ಲಿ ಲಂಚ ಪಡೆದ ಆರೋಪ ಭಾರೀ ಸದ್ದು ಮಾಡಿತ್ತು.

ಇತ್ತಿಚೆಗೆ ಆರ್ ಟಿ ಜಿ ಎಸ್ ನಲ್ಲಿ ಲಂಚ ಪಡೆದ ಆರೋಪ ಕೇಳಿ ಬರಲಾಯಿತಾದರೂ ಪ್ರತಿಪಕ್ಷಗಳ ನಿರಾಸಕ್ತಿಯಿಂದ ತಾರ್ಕಿಕ ಅಂತ್ಯ ಕಾಣಲಿಲ್ಲ. ಈ ನಡುವೆ ಶೇ.40ರಷ್ಟು ಕಮಿಷನ್ ದಂಧೆ ಮತ್ತೆ ಸದ್ದು ಮಾಡುತ್ತಿದೆ. ಅಭಿವೃದ್ಧಿ ಮತ್ತು ಆಡಳಿತದ ಮೇಲೆ ಗಾಢ ಪರಿಣಾಮ ಬೀರುವ ಅಕ್ರಮಗಳು ವ್ಯಕ್ತಿಗತ ದ್ವೇಷಕ್ಕೆ ಸೀಮಿತವಾಗುತ್ತಿರುವುದು ಅಪೇಕ್ಷಣಿಯವಲ್ಲ.

ಸಂತೋಷ್ ಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪರನ್ನು ಮಾತ್ರ ಗುರಿ ಮಾಡಿ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ಸಿದ್ದರಾಮಯ್ಯ ಅವರು ಹೇಳುವ ಪ್ರಕಾರವೇ ಯೋಜನಾ ವೆಚ್ಚ ಮಾಡುವ ಎಲ್ಲಾ ಇಲಾಖೆಗಳಲ್ಲೂ ಕಮಿಷನ್ ಪ್ರಮಾಣ ಶೇ.40ಕ್ಕೆ ಏರಿದೆ ಎನ್ನಲಾಗುತ್ತಿದೆ. ಆದರೆ ಭ್ರಷ್ಟಾಚಾರಕ್ಕೆ ಇಡೀ ಸರ್ಕಾರ ಹೊಣೆಗಾರರಾಗಬೇಕಲ್ಲವೇ ? ಎಂಬ ಜಿಜ್ಞಾಸೆಗಳು ಕೇಳಿ ಬರುತ್ತಿವೆ.

ಈ ಮೊದಲು ಕಮಿಷನ್ ದಂಧೆ ಇತ್ತು ಎಂಬ ಕಾರಣಕ್ಕೆ ಪ್ರತಿಪಕ್ಷ ಹೆಚ್ಚು ಕೇಳದೆ ಪ್ರಸ್ತುತ ಬೆಳವಣಿಗೆಯಲ್ಲಿ ಈಶ್ವರಪ್ಪರನ್ನು ಮಾತ್ರ ಹೊಣೆ ಮಾಡಿ ಕೈ ತೊಳೆದುಕೊಳ್ಳಲು ಯತ್ನಿಸುತ್ತಿವೆ. ಈಶ್ವರಪ್ಪ ಆರಂಭದಿಂದಲೂ ಮಾತಿ ವರಸೆಯ ಮೂಲಕವೇ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದವರು. ನಿಷ್ಠೂರತೆ ಹೆಸರಿನಲ್ಲಿ ಅವಹೇಳನ, ಉದ್ಧಟತನದ ಮಾತುಗಳು ಈಶ್ವರಪ್ಪರಿಂದ ಧಾರಾಳವಾಗಿ ಕೇಳಿ ಬರುತ್ತಿದ್ದವು.

ಸಂಘ ಪರಿವಾರದ ಅವರ ನಿಷ್ಠೆ ಅಚಲವಾದದ್ದು, ಈ ವಿಷಯವಾಗಿಯೇ ಸದನದ ಒಳಗೆ ಮತ್ತು ಹೊರಗೆ ರಾಜಕೀಯ ಪ್ರತಿಸ್ರ್ಪಗಳ ಜೊತೆ ವಿವಾದಿತ ವಾಗ್ವಾದ ನಡೆಸಿ ಪ್ರಸಂಗಗಳಿವೆ. ಹಿಡಿತ ತಪ್ಪಿದ ಮಾತುಗಳು ಈಶ್ವರಪ್ಪರಿಗೆ ರಾಜಕೀಯ ಎದುರಾಳಿಗಳನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷದಲ್ಲಷ್ಟೆ ಅಲ್ಲ, ಸ್ವಪಕ್ಷೀಯರ ಈಶ್ರ್ಯೆಗೂ ಈಶ್ವರಪ್ಪ ಸಿಲುಕಿದ್ದಾರೆ.