ಬೆಂಗಳೂರು, ನ.28- ಮಂಗಳೂರಿನ ನಾಗೋರಿ ಬಳಿಯ ಕುಕ್ಕರ್ ಬಾಂಬ್ ಸೋಟದ ಪ್ರಮುಖ ಆರೋಪಿ ಶಾರಿಕ್ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಆತನ ವಿಚಾರಣೆ ಮೂಲಕ ಮತ್ತಷ್ಟು ಮಾಹಿತಿಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ.
ಕಳೆದ ನವೆಂಬರ್ 19ರಂದು ಸ್ವಯಂ ನಿರ್ಮಿತ ಕುಕ್ಕರ್ ಬಾಂಬ್ ಅನ್ನು ಶಾರಿಕ್ ಸಾಗಾಣಿಕೆ ಮಾಡುತ್ತಿದ್ದ, ದಾರಿ ಮಧ್ಯದಲ್ಲೇ ಅದು ಸೋಟಗೊಂಡು ಹೊಗೆ ಕಾರಿತ್ತು. ಸಣ್ಣ ಪ್ರಮಾಣದ ಸೋಟದಿಂದ ಖುದ್ದು ಶಾರಿಕ್ ಮತ್ತು ಆಟೋ ಚಾಲಕ ಪರಶುರಾಂ ಪೂಜಾರಿ ಗಾಯಗೊಂಡಿದ್ದರು.
ಶಾರಿಕ್‍ಗೆ ಶೇ.40ರಷ್ಟು ಸುಟ್ಟಗಾಯಗಳಾಗಿದ್ದವು. ಆಗಿನ ಪರಿಸ್ಥಿತಿಯಲ್ಲಿ ಆತ ಬದುಕುಳಿಯುವ ಸಾಧ್ಯತೆಗಳು ಕ್ಷೀಣವಾಗಿದ್ದವು. ಗುಣಮಟ್ಟದ ಚಿಕಿತ್ಸೆ ಕೊಡಿಸಲಾಗಿದ್ದು ಪ್ರಸ್ತುತ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಆತನ ವಿಚಾರಣೆಯಿಂದ ಮತ್ತಷ್ಟು ಮಾಹಿತಿಗಳು ಹೊರ ಬರುವ ನಿರೀಕ್ಷೆಯಲ್ಲಿದ್ದು, ಪೊಲೀಸರು ಆರೋಪಿಯ ವಿಚಾರಣೆಗೆ ವೈದ್ಯರ ಸಲಹೆ ನಿರೀಕ್ಷೆಯಲ್ಲಿದ್ದಾರೆ.
ಸೋಟದಿಂದ ಶಾರಿಕ್ ಗಂಟಲಿನಲ್ಲಿ ಹೊಗೆ ತುಂಬಿಕೊಂಡು ಘಾಸಿಯಾಗಿದೆ. ಹಾಗಾಗಿ ಸದ್ಯಕ್ಕೆ ಆತ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಲಾಗಿದೆ. ವೈದ್ಯರು ಆತನನ್ನು ಮಾತನಾಡಿಸುವ ಪ್ರಯತ್ನ ನಡೆಸಿದ್ದು, ಅದಕ್ಕೆ ಸ್ಪಂದಿಸುತ್ತಿದ್ದಾನೆ ಎನ್ನಲಾಗಿದೆ. ಘಟನೆ ನಡೆದು ಒಂಬತ್ತು ದಿನಗಳಾಗಿದ್ದು, ಪೊಲೀಸರು ಆರಂಭದಲ್ಲೇ ಚುರುಕಿನ ತನಿಖೆಯ ಮೂಲಕ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಈ ಮೊದಲು ಆತ ತನ್ನ ಹುಟ್ಟೂರು ತೀರ್ಥಹಳ್ಳಿಯ ತುಂಗಾ ನದಿ ಸಮೀಪ ಕಚ್ಚಾ ಬಾಂಬ್ ಸೋಟ ತಯಾರಿ ನಡೆಸಿರುವುದು, ತಾನೇ ಬಾಂಬ್ ತಯಾರಿಕೆಯನ್ನು ಕಲಿತು, ಬಾಂಬ್ ಸಿದ್ದ ಪಡಿಸಿ ಅದನ್ನು ಮಂಗಳೂರಿನ ದೇವಸ್ಥಾನಗಳಲ್ಲಿ ಸೋಟಿಸಲು ಯತ್ನಿಸಿರುವುದು.
ಈ ಮೂಲಕ ಕೋಮು ಸಂಘರ್ಷ ಹುಟ್ಟು ಹಾಕುವ ಸಂಚು ಹೊಂದಿದ್ದು ತಿಳಿದು ಬಂದಿದೆ. ಶಂಕಿತ ಆರೋಪಿ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವವರ ಜೊತೆ ಸಂಪರ್ಕ ಹೊಂದಿರುವುದು.
ತಮಿಳುನಾಡಿನ ಕೊಯಮತ್ತೂರು ಸೋಟದಲ್ಲಿ ಭಾಗಿದ್ದಾರೆ ಎಂದು ಹೇಳಲಾದ ಆರೋಪಿಯ ಜೊತೆ ಕೇರಳದಲ್ಲಿ ಏಕಕಾಲಕ್ಕೆ ತಂಗಿರುವುದು. ಅಲ್ಲಿನ ಲಾಡ್ಜ್‍ಗೆ ಕೆಲವೊಂದು ವಸ್ತುಗಳನ್ನು ಆನ್‍ಲೈನ್ ಮೂಲಕ ತರಿಸಿಕೊಂಡಿರುವುದು.
ಹಿಂದು ವ್ಯಕ್ತಿಯ ದಾಖಲೆಗಳನ್ನು ತಿರುಚಿ ನಕಲಿಯಾಗಿ ತಯಾರಿಸಿ, ಅವುಗಳನ್ನು ಬಳಸಿಕೊಂಡು ಮೈಸೂರಿನಲ್ಲಿ ಮನೆ ಬಾಡಿಗೆ ಪಡೆದು ವಾಸ ಮಾಡಿದ್ದು, ಮೊಬೈಲ್ ರಿಪೇರಿ ತರಬೇತಿ ಪಡೆದಿರುವುದು, ತನ್ನ ವಾಟ್ಸ್‍ಅಪ್ ಡಿಪಿಯಲ್ಲಿ ಈಶ್ವರ ದೇವರ ಫೋಟೋ ಹಾಕಿಕೊಂಡು ತನ್ನನ್ನು ತಾನು ಹಿಂದು ಬಿಂಬಿಸಿಕೊಳ್ಳಲು ಸಂಚು ನಡೆಸಿರುವುದು ಪತ್ತೆಯಾಗಿದೆ.
ದೆಹಲಿಯಲ್ಲಿ ಮತ್ತೊಂದು ವಿಕೃತ ಕೊಲೆ, ಪತಿಯನ್ನು 22 ತುಂಡು ಮಾಡಿದ ಪತ್ನಿ ಮತ್ತು ಪುತ್ರ..!
ಹಿಂದು ಹೆಸರಿನಲ್ಲಿ ಬಾಂಬ್ ಸೋಟದಂತಹ ಭಯೋತ್ಪಾದನ ಕೃತ್ಯಗಳನ್ನು ನಡೆಸಿ, ಆರೋಪವನ್ನು ಹಿಂದು ಸಂಘಟನೆಗಳ ತಲೆಗೆ ಕಟ್ಟುವ ಹುನ್ನಾರ ಕೂಡ ನಡೆಸಿದ್ದ ಎಂದು ಹೇಳಲಾಗಿದೆ.
ಅತಿ ಚಿಕ್ಕ ವಯಸ್ಸಿನಲ್ಲೇ ದಾರಿ ತಪ್ಪಿ, ಇಷ್ಟು ಯೋಜಿತವಾಗಿ ಸಂಚು ನಡೆಸಿರುವ ಶಾರಿಕ್ ಹಿಂದೆ ಯಾರಿದ್ದಾರೆ ಎಂಬ ಕುತೂಹಲಗಳು ಹೆಚ್ಚಾಗಿವೆ. ಇದಕ್ಕೆಲ್ಲಾ ಖುದ್ದು ಆತನೇ ಉತ್ತರ ಹೇಳಬೇಕಿದೆ. ಆತ ವಿಚಾರಣೆಗೆ ಒಳಪಟ್ಟು ಮಾಹಿತಿಯನ್ನು ಬಾಯಿ ಬಿಟ್ಟರೆ ಅಂತಾರಾಷ್ಟ್ರೀಯ ಜಾಲವೇ ತೆರೆದುಕೊಳ್ಳುವ ಸಾಧ್ಯತೆ ಇದೆ ಎಂಬ ನಿರೀಕ್ಷೆಗಳಿವೆ.
ಹೀಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಕಾತುರತೆಯಿಂದಿದ್ದಾರೆ. ಎನ್‍ಐಎ ಕೂಡ ಮಾಹಿತಿ ಕಲೆ ಹಾಕಲು ಕಾದು ಕುಳಿತಿದೆ. ಶಾರಿಕ್ ಬಾಯಿ ಬಿಡುವುದರಿಂದ ಹೆಚ್ಚಿನ ಮಾಹಿತಿ ತಿಳಿಯುವ ಜೊತೆಗೆ ಆಂತರಿಕ ಭದ್ರತೆ ಧಕ್ಕೆಯುಂಟು ಮಾಡುವ ಮತ್ತಷ್ಟು ಸಂಚುಗಳು ಬಯಲಾಗಬಹುದು ಎಂಬ ಅಂದಾಜುಗಳಿವೆ.
#MangaluruBlast, #Mangaluru, #AutoRickshawBlast, #TerroristAct, #ಆಟೋಸ್ಪೋಟ, #ಮಂಗಳೂರುಸ್ಪೋಟ, #ಮಂಗಳೂರುಬ್ಲಾಸ್ಟ್, #Shareeq,