ರೆವಾ, ಜು.30- ಹಿರಿಯ ನಾಗರಿಕರೊಬ್ಬರನ್ನು ರೈಲ್ವೆ ಪೊಲೀಸ್ ಕಾನ್ಸ್‍ಟೆಬಲ್ ಒಬ್ಬರು ಅಮಾನವೀಯವಾಗಿ ಥಳಿಸಿ, ರೈಲ್ವೆ ಟ್ರಾಕ್ ಮೇಲೆ ಉಲ್ಟಾ ಹಿಡಿದು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕವಾಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮಧ್ಯ ಪ್ರದೇಶದ ರೆವಾ ಜಿಲ್ಲೆಯ ಜಬ್ಲಾಪುರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು ತಡವಾಗಿ ವರದಿಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಪೊಲೀಸ್ ಹಿರಿಯ ಅಕಾರಿಗಳು ಕಾನ್ಸ್‍ಟೆಬಲ್‍ನನ್ನು ಅಮಾನತುಗೊಳಿಸಿದ್ದಾರೆ.
ದುರ್ಬಲರಂತೆ ಕಾಣುವ ಹಿರಿಯ ನಾಗರಿಕರು ರೈಲ್ವೆ ಪೊಲೀಸ್ ಅಧಿಕಾರಿಯೊಂದಿಗೆ ಉದ್ಧಟತನದಿಂದ ವರ್ತಿಸಿದರು ಎಂಬ ಕಾರಣಕ್ಕೆ ಸಿಟ್ಟಾದ ಕಾನ್ಸ್‍ಟೆಬಲ್ ಅಮಾನವೀಯತೆಯಿಂದ ವರ್ತಿಸಿದ್ದಾನೆ. ಹಿರಿಯ ವ್ಯಕ್ತಿಗೆ ಬೂಟ್ ಕಾಲಿನಿಂದ ಒದ್ದಿದ್ದಾನೆ.
ಬಳಿಕ ಅವರ ಕಾಲು ಹಿಡಿದು ಪ್ಲಾಟ್‍ಫಾರಂ ಮೇಲೆ ರೈಲ್ವೆ ಟ್ರಾಕ್ ನತ್ತ ಎಳೆದು ತಂದಿದ್ದಾನೆ. ಟ್ರಾಕ್ ಗಳಿರುವ ಹಳ್ಳದತ್ತ ದೇಹದ ಅರ್ಧ ಭಾಗವನ್ನು ಉಲ್ಟಾ ಹಿಡಿದು ಟ್ರಾಕ್ ಮೇಲೆ ಬಿಸಾಡುವುದಾಗಿ ಬೆದರಿಸಿದ್ದಾನೆ, ಅಲ್ಲಿಯೂ ಕಾಲಿನಿಂದ ವೃದ್ಧರ ಹೊಟ್ಟೆಗೆ ಒದ್ದಿದ್ದಾನೆ.
ಈ ಎಲ್ಲಾ ಘಟನೆಗಳನ್ನು ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದಾರೆ. 30 ಸೆಕೆಂಟ್‍ಗಳ ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಘಟನೆಯನ್ನು ಪರಿಶೀಲನೆ ನಡೆಸಲಾಗಿದ್ದು, ಅಮಾನವೀಯತೆಯಿಂದ ವರ್ತಿಸಿದ ಅನಂತ್ ಮಿಶ್ರಾರನ್ನು ಅಮಾನತು ಮಾಡಲಾಗಿದೆ ಎಂದು ಸಹಾಯಕ ಪೊಲೀಸ್ ಮುಖ್ಯಾಕಾರಿ ಪ್ರತಿಮಾ ಪಟೇಲ್ ತಿಳಿಸಿದ್ದಾರೆ.