ಮಹಿಳೆಯನ್ನು ಪ್ರಾಣಿಯಂತೆ ಎಳೆದೊಯ್ದ ಪೊಲೀಸರು..!
ಸಾಗರ್,ಮೇ.20-ಮಾಸ್ಕ್ ಧರಿಸದೆ ತರಕಾರಿ ತರಲು ಮಾರುಕಟ್ಟೆಗೆ ತೆರಳಿದ್ದ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿ ರಸ್ತೆಯಲ್ಲಿ ಎಳೆದೊಯ್ದಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯನ್ನು ಅಮಾನವೀಯವಾಗಿ ರೋಡಿನಲ್ಲಿ ಎಳೆದೊಯ್ದಿರುವ ವೀಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಧ್ಯಪ್ರದೇಶ ಪೊಲೀಸರು ಮಾಸ್ಕ್ ಧರಿಸದಿರುವುದನ್ನು ಪ್ರಶ್ನಿಸಿದ ಮಹಿಳಾ ಪೇದೆ ಮೇಲೆ ಆಕೆ ಹಲ್ಲೆ ನಡೆಸಿದ್ದರಿಂದ ಆಕೆಯನ್ನು ಎಳೆದೊಯ್ಯಬೇಕಾಯಿತು ಎಂದು ಸಮಜಾಯಿಷಿ ನೀಡಿದ್ದಾರೆ.
ತನ್ನ ಮಗಳ ಜತೆ ಮಾಸ್ಕ್ ಧರಿಸದೆ ಮಾರುಕಟ್ಟೆಗೆ ಬಂದಿದ್ದ ಮಹಿಳೆಯನ್ನು ಬಯಲು ಬಂಧೀಖಾನೆಗೆ ಕರೆದೊಯ್ಯಲು ಯತ್ನಿಸಿದಾಗ ಆಕೆ ನಿರಾಕರಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಮೇಲೆ ಪೊಲೀಸರು ಮನಬಂದಂತೆ ಹಲ್ಲೆ ನಡೆಸಿ ಆಕೆಯನ್ನು ಕೆಳಗೆ ತಳ್ಳಿ ಪ್ರಾಣಿಗಳನ್ನು ಎಳೆದುಕೊಂಡು ಹೋಗುವಂತೆ ಎಳೆದಾಡಿರುವ ವೈರಲ್ ಭಾರಿ ಸದ್ದು ಮಾಡಿದೆ.
ಆದರೆ, ಘಟನೆಯನ್ನು ಚಿತ್ರಿಕರಿಸಿರುವವರು ಕೇವಲ ಅರ್ಧ ವಿಡಿಯೋ ಮಾತ್ರ ವೈರಲ್ ಮಾಡಿ ಪೊಲೀಸರ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ ಎಂದು ರಾಹ್ಲಿ ಉಪವಿಭಾಗದ ಪೊಲೀಸ್ ಅಧಿಕಾರಿ ಕಮಲ್ಸಿಂಗ್ ತಿಳಿಸಿದ್ದಾರೆ.