ಕೊರೊನಾ 4ನೇ ಅಲೆ ಎದುರಿಸುವ ಸಾಮರ್ಥ್ಯ ಬಿಬಿಎಂಪಿಗಿದೆಯೇ..?

Social Share

ಬೆಂಗಳೂರು,ಡಿ.23- ಚೀನಾ ಮತ್ತಿತರ ದೇಶಗಳ ಗಂಭೀರತೆಯನ್ನು ಗಮನಿಸಿದರೆ ಮತ್ತೆ ಕೊರೊನಾ ನಾಲ್ಕನೆ ಅಲೆ ಅಪ್ಪಳಿಸುವ ಸಾಧ್ಯತೆಗಳಿವೆ. ಒಂದು ವೇಳೆ ಅಂತಹ ಸನ್ನಿವೇಶ ಎದುರಾದರೆ ಅಂತಹ ಪರಿಸ್ಥಿತಿಯನ್ನು ಎದುರಿಸಲು ಬಿಬಿಎಂಪಿಗೆ ಸಾಮಥ್ರ್ಯ ಇದೆಯೇ ಎಂಬ ಪ್ರಶ್ನೆ ಇದೀಗ ಎಲ್ಲರನ್ನು ಕಾಡುತ್ತಿದೆ.

ಕೊರೊನಾ ಒಂದು ಮತ್ತು ಎರಡನೆ ಅಲೆ ಅರಂಭದಲ್ಲಿ ಎದುರಾಗಿದ್ದ ಸಮಸ್ಯೆಗಳನ್ನು ತಡೆಗಟ್ಟಲು ಬಿಬಿಎಂಪಿ ವಿಫಲವಾಗಿತ್ತು. ಹೀಗಾಗಿ ವಿನಾಶಕಾರಿ ಕೊರೊನಾ ನಾಲ್ಕನೆ ಅಲೆಯನ್ನು ಎದುರಿಸಲು ಪಾಲಿಕೆಗೆ ಸಾಧ್ಯವೆ ಎಂಬ ಅನುಮಾನ ಕಾಡುವುದು ಸಹಜವಾಗಿದೆ.

ಮಾರಣಾಂತಿಕವಾಗಬಹುದು ಎಂದು ನಿರೀಕ್ಷಿಸಲಾಗಿದ್ದ ಮೂರನೆ ಅಲೆ ಅಷ್ಟರ ಮಟ್ಟಿಗೆ ಘಾತುಕವಾಗಿರಲಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಬರಲಿರುವ ನಾಲ್ಕನೇ ಅಲೆ ಭಾರಿ ಭಯಾನಕ ಹಾಗೂ ಅತಿ ವೇಗವಾಗಿ ಹರಡುತ್ತೆ ಎಂದು ತಜ್ಞರು ಸಲಹೆ ನೀಡಿರುವುದರಿಂದ ಬಿಬಿಎಂಪಿಯವರು ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಸಮಸ್ಯೆಗಳನ್ನು ಪರಿಹರಿಸಲು ಗಂಭೀರ ಪ್ರಯತ್ನ ಪಡಬೇಕಿದೆ.

ಎರಡು ಮತ್ತು ಮೂರನೇ ಅಲೆ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಕೋವಿಡ್ ಕೇರ್ ಸೆಂಟರ್ಗಳನ್ನು ನಂತರ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ನಾಲ್ಕನೆ ಅಲೆ ಬೀಸುವ ಸಾಧ್ಯತೆ ಇರುವುದರಿಂದ ಪಾಳು ಬಿದ್ದಿರುವ ಕೋವಿಡ್ ಕೇರ್ ಸೆಂಟರ್ಗಳನ್ನು ಮರು ನಿರ್ಮಾಣ ಮಾಡುವುದಕ್ಕೆ ಆಧ್ಯತೆ ನೀಡಬೇಕಿದೆ.

ರಾಜ್ಯಗಳ ಕೋವಿಡ್ ಪೂರ್ವಸಿದ್ಧತೆ ಕುರಿತು ಕೇಂದ್ರ ಸಚಿವರಿಂದ ಪರಿಶೀಲನೆ

ಇದರ ಜತೆಗೆ ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆ ಸಲ್ಲಿಸಿದ್ದ ಸಿಬ್ಬಂದಿಗಳಿಗೆ ಇದುವರೆಗೂ ವೇತನ ಬಿಡುಗಡೆ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿದರೆ ಅಲ್ಲಿ ಕೆಲಸ ಮಾಡಲು ಯಾರು ಮುಂದೆ ಬರುತ್ತಾರೆ ಎನ್ನುವುದನ್ನು ಗಮನಿಸಬೇಕಾಗುತ್ತದೆ.
ಹೀಗಾಗಿ ನಾಲ್ಕನೆ ಅಲೆ ಬಂದರೆ ಅದನ್ನು ನಿಭಾಯಿಸಲು ಅಗತ್ಯ ಸಿಬ್ಬಂದಿ ನಿಯೋಜನೆಯತ್ತು ಬಿಬಿಎಂಪಿ ಗಮನ ಹರಿಸುವುದು ಸೂಕ್ತ ಎಂಬ ಸಲಹೆಗಳು ಕೇಳಿ ಬರುತ್ತಿವೆ.

ಕೋವಿಡ್ ಕೇರ್ ಸೆಂಟರ್ಗಳನ್ನು ಬಂದ್ ಮಾಡಿದ ನಂತರ ಅಲ್ಲಿ ಅಳವಡಿಸಲಾಗಿದ್ದ ಮೆಡಿಕಲ್ ಉಪಕರಣಗಳ ಬಗ್ಗೆ ನಿರಾಸಕ್ತಿ ತೊರಿರುವುದರಿಂದ ಉಪಕರಣಗಳು ತುಕ್ಕು ಹಿಡಿಯುವಂತಹ ಪರಿಸ್ಥಿತಿಗೆ ಬಂದು ತಲುಪಿವೆ.
ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡರೆ ಸೋಂಕಿತರನ್ನು ನಿಯಂತ್ರಿಸುವುದು ಅಸಾಧ್ಯವಾಗುವುದಂತೂ ಗ್ಯಾರಂಟಿ ಬಿಬಿಎಂಪಿ ಸಿಬ್ಬಂದಿಗಳ ಬೇಜವಬ್ದಾರಿತನದಿಂದ ಎರಡು ಮತ್ತು ಮೂರನೇ ಅಲೆ ಸಂದರ್ಭದಲ್ಲಿ ಜನ ಸೋಂಕಿನಿಂದ ಬೀದಿಯಲ್ಲಿ ಬಿದ್ದು ನರಳುವಂತಾಗಿತ್ತು. ಚಿಕಿತ್ಸೆ ಪಡೆಯಲು ಸಿಲಿಕಾನ್ ಸಿಟಿ ಮಂದಿ ಪರದಾಡುವಂತಾಗಿತ್ತು.

ಸೋಂಕಿತರಿಗೆ ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಸಿಕ್ಕಿರಲಿಲ್ಲ. ಒಂದು ವೇಳೆ ಸಿಕ್ಕರೂ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಪರಿತಪಿಸುವಂತಾಗಿತ್ತು. ಹೀಗಾಗಿ ಬರುವ ನಾಲ್ಕನೆ ಅಲೆಯನ್ನು ಎದುರಿಸಲು ಬಿಬಿಎಂಪಿಯವರು ಈಗಿನಿಂದಲೇ ಸಕಲ ಸಿದ್ದತೆ ಮಾಡಿಕೊಳ್ಳುವುದು ಸೂಕ್ತವಾಗಿದೆ.

ಕ್ರೀಡಾ ಪ್ರೇಮಿಗಳ ಮನಗೆದ್ದ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿ

ಸಧ್ಯ ಬಿಬಿಎಂಪಿ ಬಳಿ ಇರುವುದು ಕೇವಲ 20 ಅಂಬ್ಯುಲೆನ್ಸ್ಗಳು ಮಾತ್ರ, ಇನ್ನು ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾಡುತ್ತಿದೆ. ಇರುವ ಆಸ್ಪತ್ರೆಗಳಲ್ಲೂ ಅತ್ಯಾಧುನಿಕ ಉಪಕರಣಗಳ ಅಲಭ್ಯತೆ ಪ್ರಮುಖ ಸಮಸ್ಯೆಯಾಗಿದೆ. ಇದರ ಜೊತೆಗೆ ವೈದ್ಯರ ಕೊರತೆ ತುಂಬುವುದಂತೂ ಅಸಾಧ್ಯವಾಗಿದೆ.

ಬಿಬಿಎಂಪಿಯವರು ಸ್ಥಾಪನೆ ಮಾಡಲು ತೀರ್ಮಾನಿಸಿರುವ ನಮ್ಮ ಕ್ಲಿನಿಕ್ಗಳಿಗೆ ವೈದ್ಯರು ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕು ನಿಭಾಯಿಸುವ ಕೆಲಸಕ್ಕೆ ಯಾವ ವೈದ್ಯರು ಬರುತ್ತಾರೆ ನೀವೆ ಹೇಳಿ.

ಇನ್ನು ಸೋಂಕು ಕಾಣಿಸಿಕೊಂಡವರಿಗೆ ಅಗತ್ಯವಾಗಿ ಆಕ್ಸಿಜನ್ ನೀಡಲೇಬೇಕು. ಕಳೆದ ಬಾರಿ ಆಕ್ಸಿಜನ್ಗಾಗಿ ಜನ ಪರದಾಡುವಂತಾಗಿತ್ತು. ಅಗತ್ಯ ಆಕ್ಸಿಜನ್ ಸಿಗದೆ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿತ್ತು. ಬಿಬಿಎಂಪಿ ಬಳಿ ಆಕ್ಸಿಜನ್ ಘಟಕ ಇಲ್ಲದಿರುವುದರಿಂದ ಖಾಸಗಿ ಕಂಪನಿಗಳಿಂದಲೇ ಆಕ್ಸಿಜನ್ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಾಹುಲ್‍ಗಾಂಧಿ ನಿಂದಿಸಿದ ಅನಿಲ್ ಶೆಟ್ಟಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ಎರಡು ಮತ್ತು ಮೂರನೇ ಅಲೆ ಸಂದರ್ಭದಲ್ಲಿ ಇಷ್ಟೆಲ್ಲಾ ಸಮಸ್ಯೆ ಎದುರಿಸಿದ್ದ ಬಿಬಿಎಂಪಿಯವರು ನಾಲ್ಕನೆ ಅಲೆ ಸಂದರ್ಭದಲ್ಲಿ ಇನ್ಯಾವ ರೀತಿ ಸೇವೆ ಒದಗಿಸಬಲ್ಲರು ಎಂಬ ಸಮಸ್ಯೆಗೆ ಪರಿಹಾರ ಕಂಡುಕೊಂಡು ಮತ್ತೆ ನಗರದಲ್ಲಿ ಭೀಕರ ಸನ್ನಿವೇಶ ನಿರ್ಮಾಣವಾಗಲು ಅವಕಾಶ ನೀಡಬಾರದು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

Corona, 4th wave, BBMP,

Articles You Might Like

Share This Article