ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ರಣತಂತ್ರ

Social Share

ಬೆಂಗಳೂರು,ಜ.18- ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಈ ಕುರಿತು ಈಗಾಗಲೇ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೇವೆ. ನಮ್ಮ ಕಾರ್ಯಕರ್ತರು, ಮುಖಂಡರು ಅವರನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸಲಿದ್ದಾರೆ. ನಾವು ಈ ವಿಷಯದಲ್ಲಿ ಸುಮ್ಮನೆ ಕೂರುವುದಿಲ್ಲ ಎಂದರು.
ಬಿಜೆಪಿ ಕಾರ್ಯಕರ್ತರು, ಮುಖಂಡರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದಾಗ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಗಾಗಿ ಪಾದಯಾತ್ರೆ ನಡೆಸಿದ ನಮ್ಮ ವಿರುದ್ಧ ಕೇಸ್ ದಾಖಲಿಸಿದ್ದಾರೆ. ತಾವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಂಟಿಸ್ಥಿಕೆ ಬೆಳೆಸುವ ಅಗತ್ಯವಿಲ್ಲ ಅಥವಾ ಅವರ ಕಚೇರಿಗೆ ಹೋಗಿ ಕಾಫಿ ಕುಡಿದು ಬರುವ ಉದ್ದೇಶವೂ ತಮ್ಮದಲ್ಲ. ನಮ್ಮದೇನಿದ್ದರೂ ಹೋರಾಟ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಮೈಸೂರಿಗೆ ಹೋಗಿದ್ದಾರೆ. ಅವರು ಬರುವುದನ್ನೇ ಕಾಯುತ್ತಿದ್ದೇವೆ. ಏನು ಮಾಡುತ್ತೇವೆ ಎಂಬುದನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ. ಸಮಯ ಬಂದಾಗ ಹೇಳುತ್ತೇವೆ ಎಂದು ಹೇಳಿದರು.
ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ನಡೆಸಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮೇಕೆದಾಟು ಪಾದಯಾತ್ರೆ ಆಡಳಿತ ಮತ್ತು ಪ್ರತಿಪಕ್ಷದ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕೊರೊನಾ ಹೆಚ್ಚಳದಿಂದಾಗಿ 10 ದಿನಗಳ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಬಂದಿತ್ತು.
ಮತ್ತೆ ರಾಮನಗರದಿಂದ ಪಾದಯಾತ್ರೆ ಶುರು ಮಾಡಲು ತಯಾರಿ ನಡೆದಿದೆ. ಬೆಂಗಳೂರು ನಗರದಲ್ಲಿ ಈ ಮೊದಲು ನಿಗದಿಪಡಿಸಲಾಗಿದ್ದ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ಹೊಸ ಮಾರ್ಗದ ಪರಿಶೀಲನೆಗೆ ಖುದ್ದು ಸ್ಥಳಕ್ಕೆ ಭೇಟಿ ನೀಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆಯಿಂದ ಕನಕಪುರ ತಾಲ್ಲೂಕಿನ ರೈತರಿಗೆ ನೀರು ಸಿಗಲಿದೆ ಎಂದು ತಾವು ಹೇಳಿಲ್ಲ. ತಮಗೂ ಸಾಕಷ್ಟು ರಾಜಕೀಯ ಅನುಭವವಿದ್ದು, ಕೋರ್ಟ್‍ನಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗುವಂತೆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂದಾಯ ಸಚಿವ ಅಶೋಕ್ ಅವರು ಕೊರೊನಾದಿಂದ ವಿಶ್ರಾಂತಿ ಪಡೆಯುತ್ತಿದ್ದರು. ಪಾಪ ಈಗ ಮಾತನಾಡಲು ಆರಂಭಿಸಿದ್ದಾರೆ. ಮೇಕೆದಾಟು ಯೋಜನೆಯಿಂದ ಕನಕಪುರ ಅಥವಾ ಬೆಂಗಳೂರು ಗ್ರಾಮಾಂತರ ಒಂದು ಎಕರೆಗೂ ನೀರು ಸಿಗುವುದಿಲ್ಲ. ಬೆಂಗಳೂರಿನ ಕುಡಿಯುವ ನೀರಿಗಾಗಿ ರೂಪಿಸಿರುವ ಯೋಜನೆ ಅದು. ಹಾಸನ, ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಯವರಿಗೆ ಅನುಕೂಲವಾಗಲಿದೆ. ನೀರಾವರಿಯಂತಹ ಸೂಕ್ಷ್ಮ ವಿಚಾರದಲ್ಲಿ ಹೇಗೆ ಮಾತನಾಡಬೇಕು ಎಂಬ ರಾಜಕೀಯ ಪ್ರಜ್ಞೆ ತಮಗಿದೆ ಎಂದು ಅವರು ಹೇಳಿದರು.
ಮೇಕೆದಾಟು ಪಾದಯಾತ್ರೆ ಯಶಸ್ವಿಯಾಗುತ್ತಿದ್ದಂತೆ ಗಲಿಬಿಲಿಗೆ ಒಳಗಾದ ಬಿಜೆಪಿಯ ನಾಯಕರು ತಮ್ಮ ಪಕ್ಷದ ಒಕ್ಕಲಿಗ ನಾಯಕರಿಗೆ ಹೇಳಿ ನನ್ನ ಮೇ¯ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಅವರ ತಂತ್ರಗಾರಿಕೆ. ಮುಖ್ಯಮಂತ್ರಿಯವರೇ ಮೌನವಾಗಿದ್ದಾರೆ. ಉಳಿದವರು ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಪರಾಧವೇ ಸ್ವಯಂ ರಕ್ಷಣಾ ಅಸ್ತ್ರ ಎಂದು ಡಿ.ಕೆ.ಶಿವಕುಮಾರ್ ವರ್ತಿಸುತ್ತಿದ್ದಾರೆ ಎಂದಿರುವ ಸಚಿವ ಅಶ್ವಥ್ ನಾರಾಯಣ ಅವರ ವಿರುದ್ಧ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಮಾನಸಿಕ ಸ್ಥೀಮಿತ ಕಳೆದುಕೊಂಡವರ ಬಗ್ಗೆ ಮಾತನಾಡುವುದು ಬೇಡ ಎಂದರು.
ಬಳಿಕ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ರಿಯಾಲಿಟಿ ಶೋ ಸ್ರ್ಪ ಪುಟಾಣಿ ಸಮನ್ವಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.

Articles You Might Like

Share This Article