ಕೊರೊನಾ ವ್ಯಾಕ್ಸಿನ್ ಪಡೆಯೋದು ಹೇಗೆ..? ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು,ಜ.2-ಕೊರೊನಾ ಲಸಿಕೆ ಬಂದ ನಂತರ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಪಡೆಯುವುದು ಹೇಗೆ ಎಂಬ ಕುತೂಹಲ ನಿಮಗಿದೆಯೇ.. ಹಾಗಾದರೆ ಈ ವರದಿ ನೋಡಿ. ವ್ಯಾಕ್ಸಿನ್ ಬಂದ ನಂತರ ಲಸಿಕೆ ಪಡೆಯುವವರಿಗಾಗಿ ನಾಲ್ಕು ವಿಭಾಗಗಳನ್ನು ತೆರೆಯಲಾಗುವುದು ಮೊದಲನೆಯದು ರಿಜಿಸ್ಟ್ರೇಷನ್, ಎರಡನೆಯದು ವೈಟಿಂಗ್ ರೂಮು, ಮೂರನೇಯದು ವ್ಯಾಕ್ಸಿನ್ ರೂಂ ಹಾಗೂ ನಾಲ್ಕನೆಯದು ಅಬ್ಸರ್ವೇಶನ್ ವಿಭಾಗಗಳಿರುತ್ತವೆ.

ವ್ಯಾಕ್ಸಿನ್ ಪಡೆಯಲು ಬಂದ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಹೆಸರುಗಳನ್ನು ರಿಜಿಸ್ಟ್ರೇಷನ್ ರೂಮಿನಲ್ಲಿ ನೋಂದಾಯಿಸಿಕೊಳ್ಳಬೇಕು. ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ವಿಳಾಸ ದಾಖಲೆ ನೀಡಬೇಕು. ಪಾನ್ ಕಾರ್ಡ್, ವೋಟರ್ ಐಡಿ, ಡಿಎಲ್ ಇಲ್ಲವೇ ಸರ್ಕಾರಿ ಸೇವೆಯಲ್ಲಿದ್ದರೆ ಅದರ ಗುರುತಿನ ಚೀಟಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ಹೆಸರು ನೋಂದಾಯಿಸಿಕೊಂಡ ನಂತರ ಅವರಿಗೆ ನಂಬರ್ ನೀಡಲಾಗುವುದು. ನಂಬರ್ ಪ್ರಕಾರ ವೈಟಿಂಗ್ ರೂಮಿನಲ್ಲಿ ಕುಳಿತುಕೊಳ್ಳಬೇಕು. ತಮ್ಮ ಸರದಿ ಬಂದಾಗ ವ್ಯಾಕ್ಸಿನ್ ರೂಮಿಗೆ ಹೋಗಬೇಕಾಗುತ್ತದೆ. ವ್ಯಾಕ್ಸಿನ್ ರೂಮಿನಲ್ಲಿ ವೈದ್ಯರು ರೋಗಿಯನ್ನು ಕೂರಿಸಿಕೊಂಡು ವಿಚಾರಣೆ ನಡೆಸಿ ನಂತರ ವ್ಯಾಕ್ಸಿನ್ ನೀಡುತ್ತಾರೆ.ನಂತರ ರೋಗಿಯನ್ನು ಅಬ್ಸರ್ವೇಷನ್ ರೂಮಿಗೆ ಕಳುಹಿಸುತ್ತಾರೆ.

ಅಬ್ಸರ್ವೇಷನ್ ರೂಮಿನಲ್ಲಿ ರೋಗಿಯನ್ನು 30 ನಿಮಿಷಗಳ ಕಾಲ ನಿಗಾದಲ್ಲಿ ಇಡಲಾಗುವುದು. ಆ ವೇಳೆಯಲ್ಲಿ ರೋಗಿ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು. ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುವುದು.

30 ನಿಮಿಷದೊಳಗೆ ರೋಗಿಗೆ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡ ಬರದಿದ್ದರೆ ಅವರನ್ನು ಮನೆಗೆ ಕಳುಹಿಸಿಕೊಡಲಾಗುವುದು. ಲಸಿಕೆ ಬಂದ ನಂತರ ಹೆಸರು ನೋಂದಾಯಿಸಿಕೊಂಡಿರುವ ಕೊರೊನಾ ವಾರಿಯರ್ಸ್‍ಗಳಿಗೆ ವ್ಯಾಕ್ಸಿನ್ ನೀಡಲು ಈಗಾಗಲೇ ಬೆಂಗಳೂರಿನ ಕಾಮಾಕ್ಷಿಪಾಳ್ಯ ಮತ್ತು ವಿದ್ಯಾಪೀಠ ವೃತ್ತದಲ್ಲಿ ಲಸಿಕಾ ತಾಲಿಮು ನಡೆಸಲಾಗುತ್ತಿದೆ.

ಎರಡು ಗಂಟೆಗಳ ತಾಲಿಮಿನ ಸಂದರ್ಭದಲ್ಲಿ ವ್ಯಾಕ್ಸಿನ್ ಬಂದ ನಂತರ ಯಾವ ರೀತಿ ತಯಾರಿ ನಡೆಸಬೇಕು. ಒಂದು ವೇಳೆ ರೋಗಿಗೆ ವ್ಯತಿರಿಕ್ತ ಪರಿಣಾಮ ಎದುರಾದರೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಡ್ರೈ ರನ್ ನಡೆಸಲಾಯಿತು.