ಅಮೆರಿಕಾದಲ್ಲಿ ಕೋವಿಡ್ ಲಸಿಕೆ ಪಡೆದ ಕನ್ನಡಿಗ ವೈದ್ಯ..!

ತುಮಕೂರು, ಡಿ.18- ಅಮೆರಿಕಾದಲ್ಲಿ ಮೊದಲ ಕೋವಿಡ್ ವ್ಯಾಕ್ಸಿನ್ ಪಡೆದ ಕನ್ನಡಿಗ ವೈದ್ಯ ಹರ್ಷ ವ್ಯಕ್ತಪಡಿಸಿದ್ದಾರೆ. ಜಾರ್ಜಿಯಾ ರಾಜ್ಯದ ಅಗಸ್ಟಾದಲ್ಲಿ ಮೊದಲ ವಾಕ್ಸಿನ್ ಪಡೆದ ಕನ್ನಡಿಗ ವೈದ್ಯ ಅರುಣ್ ರಂಗನಾಥ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮೂಲತಃ ತುಮಕೂರು ಜಿಲ್ಲಾಯ ಶಿರಾ ನಗರದವರಾದ ಅವರು ಅಮೆರಿಕಾದ ಅಗಸ್ಟಾದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಬಹಳಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಿ ವಿಶ್ವಾಸ ಮೂಡಿಸಿದ್ದಾರೆ.

ನಿನ್ನೆ ಅರುಣ್ ಅವರು ತುರ್ತು ಲಸಿಕೆ ಪಡೆದಿದ್ದು , ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ವ್ಯಾಕ್ಸಿನ್ ನಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಕೆಲವರು ಇಲಿ ಹೋಯಿತು ಅಂದರೆ ಹುಲಿ ಹೋಯಿತು ಎಂದು ಹಬ್ಬಿಸುತ್ತಾರೆ. ಸಣ್ಣ ಪುಟ್ಟ ವ್ಯತ್ಯಾಸಗಳಾದರೆ ಅದನ್ನೇ ದೊಡ್ಡಗದಾಗಿ ಬಿಂಬಿಸುತ್ತಾರೆ. ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಗೊಂದಲ ಮೂಡಿಸಲಾಗುತ್ತಿದೆ.

ಆದ್ದರಿಂದ ಯಾವುದೇ ತೊಂದರೆಯಾಗದಂತೆ ಜನರಿಗೆ ಧೈರ್ಯ ತುಂಬುವ ಸಲುವಾಗಿ ವೈದ್ಯರಾದ ನಾವೇ ಮೊದಲ ಇಂಜೆಕ್ಷನ್ ತೆಗೆದುಕೊಳ್ಳಲಾಗಿದೆ . ಕರ್ನಾಟಕದ ಯಾವುದೇ ಒಬ್ಬ ನಾಗರೀಕರು ಆತಂಕಪಡುವ ಅವಶ್ಯಕತೆ ಇಲ್ಲ. ವೈದ್ಯರು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಪರೀಕ್ಷೆಗಳನ್ನು ನೆಡೆಸಿ ವೈರಸ್ ನಿಯಂತ್ರಣಕ್ಕೆ ಚಿಕಿತ್ಸೆ ನೀಡಲಾಗುತ್ತದೆ . ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಅಮೆರಿಕದಿಂದ ಈ ಸಂಜೆ ಪತ್ರಿಕೆಯೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇಂದು ಬೆಳಿಗ್ಗೆ ದೂರವಾಣಿಯಲ್ಲಿ ಮಾತನಾಡಿ , ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡಿದ ಅವರು ಅಮೆರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ನಾನು ಮೊದಲ ಲಸಿಕೆ ತೆಗೆದುಕೊಂಡಿದ್ದೇನೆ. ಅಮೆರಿಕ ಸರ್ಕಾರ ನನ್ನನ್ನು ಗುರುತಿಸಿ ನೀಡಿದೆ ಎಂದು ಹೆಮ್ಮೆಯಿಂದ ಹೇಳಿದ ಡಾ.ಅರುಣ್ ರಂಗನಾಥ್. ಕರ್ನಾಟಕದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಬಗ್ಗೆ ಅನುಮಾನಗಳು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.