ಬೆಂಗಳೂರು,ಜ.28- ಶೀತ, ಕೆಮ್ಮು, ನೆಗಡಿ, ಜ್ವರದಿಂದ ನರಳುತ್ತಿರುವವರಿಗೆ ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಕಾಲ ಕಾಲಕ್ಕೆ ಕೊರೊನಾ ತಪಾಸಣಾ ವಿಧಾನ ಬದಲಿಸಿಕೊಳ್ಳುವಂತೆ ಐಸಿಎಂಆರ್ ನೀಡಿರುವ ವರದಿಯನ್ನಾಧರಿಸಿ ಸರ್ಕಾರ ಕೊರೊನಾ ತಪಾಸಣೆ ನೀತಿಯಲ್ಲಿ ಕೆಲ ಬದಲಾವಣೆ ತಂದಿದೆ.
ರಾಜ್ಯದಲ್ಲಿರುವ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾ ತಪಾಸಣೆ ನಡೆಸುವುದರ ಜತೆಗೆ ಕೊಮಾರ್ಬಿಡಿಟಿ ರೋಗದಿಂದ ನರಳುತ್ತಿರುವವರನ್ನು ತಪಾಸಣೆ ನಡೆಸಲಾಗುವುದು. ವಿದೇಶ ಪ್ರಯಾಣ ಕೈಗೊಳ್ಳುವ ಹಾಗೂ ವಿದೇಶದಿಂದ ಆಗಮಿಸುವವರಿಗೆ ಆಧ್ಯತೆ ಮೇರೆಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.
# ಯಾರಿಗೆ ಪರೀಕ್ಷೆ ಅಗತ್ಯವಿಲ್ಲ:
ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರು ಗುಣಲಕ್ಷಣರಹಿತವಾಗಿದ್ದರೆ ಟೆಸ್ಟ್ ಅಗತ್ಯವಿಲ್ಲ. ಕೇರಳ, ಮಹಾರಾಷ್ಟ್ರ, ಗೋವಾ ಹೊರತುಪಡಿಸಿ ಇತರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವವರನ್ನು ಟೆಸ್ಟ್‍ಗೆ ಒಳಪಡಿಸುವಂತಿಲ್ಲ.
ಒಳರೋಗಿ ವಿಭಾಗದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ರೋಗ ಲಕ್ಷಣಗಳಿಲ್ಲದಿದ್ದರೆ ಟೆಸ್ಟ್ ಮಾಡುವುದು ಕಡ್ಡಾಯವಲ್ಲ.ಒಳರೋಗಿಗಳನ್ನು ವಾರಕ್ಕೆ ಒಂದು ಬಾರಿಗಿಂತ ಹೆಚ್ಚು ಬಾರಿ ಕೊರೊನಾ ಟೆಸ್ಟ್‍ಗೆ ಒಳಪಡಿಸುವಂತಿಲ್ಲ. ಹೆರಿಗೆ ಹಾಗೂ ಇನ್ನಿತರ ತುರ್ತು ಪ್ರಕರಣಗಳಲ್ಲಿ ಕೊರೊನಾ ಪರೀಕ್ಷೆ ಅಗತ್ಯವಿಲ್ಲ.
ಶುಶ್ರೂಷ ವೈದ್ಯರು ಸಲಹೆ ಮೇರೆಗೆ ಮಾತ್ರ ಕೊರೊನಾ ಟೆಸ್ಟ್ ಮಾಡಿಸುವಂತೆ ಹೆರಿಗೆ ಆಸ್ಪತ್ರೆಗಳ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.
