ಬೆಂಗಳೂರು,ಫೆ.12-ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿ ಅತಿ ಹೆಚ್ಚು ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿರುವು ಅಂಕಿ ಅಂಶಗಳಿಂದ ಉಲ್ಲೇಖವಾಗಿದೆ. ಕಳೆದ ಎರಡು ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆ ಸಂದರ್ಭದಲ್ಲೇ ಅತಿ ಹೆಚ್ಚು ಮಕ್ಕಳು ಮಹಾಮಾರಿಗೆ ಬಲಿಯಾಗಿದ್ದಾರೆ.
ಕಳೆದ ಜ.17 ರಿಂದ ಇದುವರೆಗೂ ಬರೊಬ್ಬರಿ 25 ಮಕ್ಕಳು ಕೊರೊನಾ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಕೇವಲ 25 ದಿನಗಳಲ್ಲಿ 25 ಮಕ್ಕಳು ಪ್ರಾಣ ಕಳೆದುಕೊಂಡಿರುವುದರಿಂದ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡುವುದು ಅನಿವಾರ್ಯವಾಗಿದೆ. ಒಂದು ವರ್ಷ ತುಂಬದ ಏಳು ಮಕ್ಕಳ ಮೇಲೂ ಕೊರೊನಾ ದಾಳಿ ಮಾಡಿದ್ದು ಹಸುಗೂಸುಗಳ ಪ್ರಾಣವನ್ನು ನಿರ್ದಾಕ್ಷಿಣ್ಯವಾಗಿ ಕೊಂಡೋಯ್ದಿದೆ.
ನಾಲ್ಕು ದಿನದ ಕೂಸಿನಿಂದ 18 ವರ್ಷದೊಳಗಿನ 25 ಮಕ್ಕಳು ಸೋಂಕಿನಿಂದ ಅಸು ನೀಗಿದ್ದಾರೆ. ಅದರಲ್ಲೂ 1 ರಿಂದ 12 ವರ್ಷದೊಳಗಿನ ಮಕ್ಕಳೆ ಕೊರೊನಾ ಮಹಾಮಾರಿಗೆ ಬಲಿಯಾಗಿರುವುದು. ಇನ್ನು 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿರುವುದರಿಂದ ಈ ಪ್ರಾಯದ ಮಕ್ಕಳಲ್ಲಿ ಹೆಚ್ಚು ಸಾವು-ನೋವು ಕಂಡು ಬಂದಿಲ್ಲ.
ಆದರೂ ಮೊದಲ ಡೋಸ್ ಲಸಿಕೆ ಪಡೆದ 17 ಹಾಗೂ 18 ವರ್ಷದ ಇಬ್ಬರು ಮಕ್ಕಳನ್ನು ಕೊರೊನಾ ಬಲಿ ತೆಗೆದುಕೊಂಡಿದೆ. ಮೂರನೆ ಅಲೆ ಮಕ್ಕಳ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಹೀಗಾಗಿಯೇ ಮೂರನೆ ಅಲೆ ಸಂದರ್ಭದಲ್ಲೆ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿತ್ತು.
ಆದರೆ, 12 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಇನ್ನು ಲಸಿಕೆ ನೀಡಲು ಸಾಧ್ಯವಾಗದಿರುವ ಹಿನ್ನಲೆಯಲ್ಲಿ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎನ್ನಲಾಗಿದೆ.
