ಬೆಂಗಳೂರು,ಜ.31-ಕೊರೊನಾ ಮೂರನೆ ಅಲೆ ಮಕ್ಕಳ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದು ಊಹಿಸಲಾಗಿತ್ತು. ಆದರೆ, ಇದೀಗ ಮೂರನೆ ಅಲೆ ಸದ್ದುಗದ್ದಲವಿಲ್ಲದೆ ಜಾಗ ಖಾಲಿ ಮಾಡತೊಡಗಿದೆ. ಫೆಬ್ರವರಿ ಮೂರನೆ ವಾರದಿಂದ ಮೂರನೆ ಅಲೆ ಅಬ್ಬರ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಇದೀಗ ಕಳೆದ ಒಂದು ವಾರದಲ್ಲಿ 2ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿರುವುದರಿಂದ ಮೂರನೇ ಅಲೆ ಅಂತ್ಯದ ಕಡೆ ಮುಖ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜನವರಿ ಕೊನೆಯ ವಾರದಿಂದ ಶುರುವಾಗಿ ಫೆಬ್ರವರಿ ಮೊದಲ ವಾರದಲ್ಲೇ ಮೂರನೇ ಅಲೆ ಇಳಿಕೆ ಕಾಣುತ್ತಿದೆ.ಇದಕ್ಕೆ ಪೂರಕ ಎಂಬಂತೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ನಾಲ್ಕೇ ವಾರದಲ್ಲಿ ಆಸ್ಪತ್ರೆಯಿಂದ ಹೊರಬರುತ್ತಿರುವವರ ಸಂಖ್ಯೆ ಸುಮಾರು 70 ಪಟ್ಟು ಜಾಸ್ತಿಯಾಗಿದೆ.
ಜನವರಿ 25 ರಂದು 53,093 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 26 ರಂದು 41,699 ಮಂದಿ ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ. ಜ. 27 ರಂದು 67,236 ಮಂದಿ 28 ರಂದು 71,092 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜ. 29 ರಂದು 69.902 ಮಂದಿ 30 ರಂದು 29244 ಸೋಂಕಿತರು ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟಾರೆ, ಕಳೆದ ಒಂದು ವಾರದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವುದು ಮೂರನೇ ಅಲೆ ಅಂತ್ಯದತ್ತ ಸಾಗಿರುವುದರ ಧ್ಯೋತಕವಾಗಿದೆ. ಇದೇ ವೇಳೆ ಕಳೆದ ಐದು ದಿನದಲ್ಲಿ 1,59586 ಮಂದಿಗೆ ಸೋಂಕು ದೃಢಪಟ್ಟಿದೆ. ಎರಡನೇ ಅಲೆಗೆ ಹೋಲಿಸಿಕೊಂಡರೆ ಮೂರನೇ ಅಲೆಯಲ್ಲಿ ಸೋಂಕಿತರಿಗಿಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಹೀಗಾಗಿ ಮೂರನೇ ಅಲೆ ತಜ್ಞರ ಊಹೆಗಿಂತ ವೇಗವಾಗಿ ಅಂತ್ಯ ಕಾಣಲಿದೆ ಎಂದು ಅಂದಾಜಿಸಲಾಗಿದೆ. ದಿನೇ ದಿನೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ.
