ಫೆಬ್ರವರಿಯಲ್ಲಿ ಉತ್ತುಂಗಕ್ಕೆರಲಿದೆ ಕೊರೊನಾ 3ನೇ ಅಲೆ..!

Social Share

ಬೆಂಗಳೂರು,ಜ.17- ಫೆಬ್ರವರಿಯಲ್ಲಿ ನಿರೀಕ್ಷಿತ ಕೊರೋನಾ 3ನೇ ಅಲೆ ಉತ್ತುಂಗಕ್ಕೇರಲಿದ್ದು, ಈ ವೇಳೆ ರಾಜ್ಯದಲ್ಲಿ ಪ್ರತಿದಿನ 1.2 ಲಕ್ಷ ಕೋವಿಡ್ -19 ಪ್ರಕರಣಗಳು ಕಂಡುಬರಲಿದೆ ಎಂದು ಅಧ್ಯಯನಗಳು ತಿಳಿಸಿವೆ. ಈ ಪೈಕಿ ಶೇ.90-94 ಸೋಂಕಿತರು ಮನೆಯಲ್ಲೇ ಐಸೋಲೇಷನ್ ಗೊಳಗಾಗಲಿದ್ದು, ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಸಾಂಕ್ರಾಮಿಕ ರೋಗದ ಮೊದಲ ಎರಡು ಅಲೆಗಳ ಸಮಯದಲ್ಲಿ ಅನುಸರಿಸಿದ್ದಕ್ಕಿಂತ ತಂತ್ರವು ಭಿನ್ನವಾಗಿರದಿದ್ದರೂ, ಮನೆಯಲ್ಲಿ ಪ್ರತ್ಯೇಕವಾಗಿ ಇರುವವರನ್ನು ಪರೀಕ್ಷಿಸಲು ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಇದರ ಭಾಗವಾಗಿ, ಸೋಂಕಿಗೊಳಗಾದವರು ಮತ್ತು ಮನೆಯಲ್ಲಿ ಪ್ರತ್ಯೇಕವಾಗಿರುವವರ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಅಧಿಕಾರಿಗಳು ಪದೇ ಪದೇ ದೂರವಾಣಿ ಸಂಖ್ಯೆಗಳ ಮೂಲಕ ಜನರನ್ನು ಸಂಪರ್ಕಿಸಬಹುದು. ಫೆಬ್ರವರಿ ತಿಂಗಳಿನಲ್ಲಿ ದಿನಕ್ಕೆ 1.2 ಲಕ್ಷ ಪ್ರಕರಣಗಳು ವರದಿಯಾಗಬಹುದು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ) ಯ ಸಂಶೋಧಕರು ಕೂಡ ಇದೇ ರೀತಿ ಭವಿಷ್ಯವನ್ನು ನುಡಿದಿದ್ದಾರೆ.
ಹಾಗಾಗಿ ಪರಿಸ್ಥಿತಿ ಎದುರಿಸಲು ಕ್ರಮಗಳ ಕೈಗೊಳ್ಳಲಾಗುತ್ತಿದೆ. ಮನೆಯಲ್ಲಿ ಪ್ರತ್ಯೇಕವಾಗಿ ಇರುವ ಎಲ್ಲರಿಗೂ ನಾವು ಕಡ್ಡಾಯವಾಗಿ ವೈದ್ಯಕೀಯ ಕಿಟ್‍ಗಳನ್ನು ನೀಡುತ್ತಿದ್ದೇವೆ ಎಂದು ನೋಡಲ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು ಹೇಳಿದ್ದಾರೆ.
ಎರಡನೇ ಅಲೆಯಂತೆಯೇ ಈ ಬಾರಿಯೂ 10,000 ಐದನೇ ಸೆಮಿಸ್ಟರ್ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್-ಕರ್ತವ್ಯಗಳಿಗೆ ನಿಯೋಜನೆಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 3ನೇ ಅಲೆ ವೇಳೆ ಗರಿಷ್ಠ ಎಂಟು ಲಕ್ಷ ಜನರನ್ನು ಹೋಮ್ ಐಸೋಲೇಶನ್‍ನ ಗೊಳಗಾಗುವ ಸಾಧ್ಯತೆಗಳಿದ್ದು, ಈ ಕುರಿತು ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಈ ವರ್ಷ, ಇದುವರೆಗೆ, 80,000 ಜನರನ್ನು ಟೆಲಿ-ಟ್ರೈಜಿಂಗ್ ಮೂಲಕ ಸಂಪರ್ಕಿಸಲಾಗಿದೆ. ಅಲ್ಲದೆ, 300ರಿಂದ 400 ರೋಗಿಗಳು ದೂರವಾಣಿ ಮೂಲಕ ಸಂಪರ್ಕಕ್ಕೆ ಸಿಗದ ಕಾರಣ ಅವರ ಮನೆಗಳಿಗೇ ಅಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. ಎರಡನೇ ಅಲೆ ಸಮಯದಲ್ಲಿ, ಹೋಮ್ ಕ್ವಾರಂಟೈನ್‍ನಲ್ಲಿರುವವರನ್ನು ಮೇಲ್ವಿಚಾರಣೆ ಮಾಡಲು 1.33 ಲಕ್ಷ ಕರೆಗಳನ್ನು ಮಾಡಲಾಗಿದೆ. ಅಲ್ಲದೆ, 36,053 ರೋಗಿಗಳಿಗೆ ಮಾನಸಿಕ ಆರೋಗ್ಯ ಸಮಾಲೋಚನೆ ನೀಡಲಾಗಿದೆ.
1.96 ಲಕ್ಷ ತುರ್ತು ಪರಿಸ್ಥಿತಿಗಳನ್ನು ಗುರುತಿಸಲಾಗಿದ್ದು, ಅಗತ್ಯವಿರುವವರಿಗೆ ಲಭ್ಯವಾಗುವಂತೆ ಮಾಡಲು ಆಸ್ಪತ್ರೆಗಳಲ್ಲಿ 8.08 ಲಕ್ಷ ಹಾಸಿಗೆಗಳು ಮುಕ್ತವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಟೆಲಿಕಾಲರ್‍ಗಳ ಹುದ್ದೆಗೆ, ಟ್ರೀಯಾಜಿಂಗ್ ಸೆಂಟರ್‍ಗಳಿಗೆ, ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಲು ಮತ್ತು ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಹಾಕಲು ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ.
ಮೊದಲ, ಮೂರನೇ, ಐದನೇ ಮತ್ತು ಏಳನೇ ದಿನದಂದು ಸೋಂಕು ಪರೀಕ್ಷೆ ಮಾಡಿದ ಎಲ್ಲರಿಗೂ ವಿವಿಧ ತಂಡಗಳು ಸೋಂಕಿತರ ರೋಗಲಕ್ಷಣಗಳು, ಅವರ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ವಿವಿಧ ಹಂತಗಳಲ್ಲಿ ಕರೆಗಳನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.
ಪ್ರಕರಣಗಳ ಸಂಖ್ಯೆ, ಕಂಟೈನ್‍ಮೆಂಟ್ ವಲಯಗಳು ಮತ್ತು ವಾರ್ಡ್‍ನ ಭೌಗೋಳಿಕ ಪ್ರದೇಶವನ್ನು ಅವಲಂಬಿಸಿ, ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ವಲಯ ಆಯುಕ್ತರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಮಾರ್ಗಸೂಚಿಗಳ ಪ್ರಕಾರ, ಹೋಮ್ ಐಸೋಲೇಶನ್ ಕಿಟ್‍ಗಳಲ್ಲಿನ ಔಷಧಿಗಳನ್ನೂ ಕೂಡ ಪರಿಷ್ಕರಿಸಲಾಗಿದೆ.
ಕಿಟ್‍ನಿಂದ ಎರಡು ಔಷಧಿಗಳನ್ನು ತೆಗೆದುಹಾಕಲಾಗಿದೆ ಮತ್ತು ಐದು ಮೂಲ ಔಷಧಿಗಳಾದ ಪ್ಯಾರೆಸಿಟಮಾಲ್, ಸೆಟ್ರಜಿನ್, ಪ್ಯಾಂಟೊಪ್ರಜೋಲ್, ವಿಟಮಿನ್ ಡಿ ಮತ್ತು ಸಿ, ಮಾತ್ರೆಗಳು ಮತ್ತು ಕೆಮ್ಮು ಸಿರಪ್‍ಗಳನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Articles You Might Like

Share This Article