ಫ್ರಾನ್ಸ್, ಆಸ್ಟ್ರೇಲಿಯಾಗೂ ಹಬ್ಬಿದ ಡೆಡ್ಲಿ ಕೊರೋನಾ ವೈರಸ್, 43ಕ್ಕೂ ಹೆಚ್ಚು ಬಲಿ..!

ಬೀಜಿಂಗ್, ಜ.25- ಏಷ್ಯಾಖಂಡ ಮಾತ್ರವಲ್ಲದೆ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಚೀನಾದ ಕೊರೋನಾ ವೈರಸ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಸತ್ತವರ ಸಂಖ್ಯೆ 43ಕ್ಕೆ ಏರಿದೆ. ಅಲ್ಲದೆ, ಇನ್ನೂ 1400 ಮಂದಿಯಲ್ಲಿ ವೈರಾಣು ಪತ್ತೆಯಾಗಿದೆ. ಇವರಲ್ಲಿ 237 ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಡೆಡ್ಲಿ ಕೊರೋನಾ ಸೋಂಕಿನ ಎರಡು ಪ್ರಕರಣಗಳು ಫ್ರಾನ್ಸ್‍ನಲ್ಲಿ ಪತ್ತೆಯಾಗಿದ್ದು, ಈ ಮೂಲಕ ವೈರಸ್ ಪಿಡುಗು ಐರೋಪ್ಯ ಖಂಡವನ್ನು ತಲುಪಿದೆ. ಆಸ್ಟ್ರೇಲಿಯಾದಲ್ಲೂ ಈ ಸೋಂಕು ಕಂಡುಬಂದಿದೆ. ಅಲ್ಲದೆ, ನೇಪಾಳ, ಹಾಂಕಾಂಗ್, ಮಕಾವೊ, ಜಪಾನ್, ದಕ್ಷಿಣ ಕೊರಿಯಾ, ಥೈವಾನ್, ಥೈಲೆಂಡ್, ವಿಯೆಟ್ನಾಂ ಮೊದಲಾದ ದೇಶಗಳಲ್ಲೂ ಹೊಸ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಭಾರತದಲ್ಲಿ ಏಳು ಶಂಕಿತ ಪ್ರಕರಣಗಳು ಪತ್ತೆಯಾಗಿರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ತುರ್ತು ಕ್ರಮಗಳನ್ನು ಘೋಷಣೆ ಮಾಡಿದೆ. 1400 ಮಂದಿಯಲ್ಲಿ ವೈರಾಣು ಕಂಡು ಬಂದಿದ್ದು, ಇದರಲ್ಲಿ 237 ಜನರ ಸ್ಥಿತಿ ಚಿಂತಾಜನಕವಾಗಿದೆ. ದೇಶದ 16 ನಗರಗಳಲ್ಲಿ ಬಂದ್ ರೀತಿಯ ವಾತಾವರಣ ಘೋಷಣೆ ಮಾಡಿದೆ.

ವುಹಾನ್, ಹುವಾಂಗ್ ಗಾಂಗ್, ಈಝೌ, ಝಿಜಿಯಾಂಗ್ ಮತ್ತು ಕ್ವಿಯಾನ್ ಜಿಯಾಂಗ್ ಸೇರಿದಂತೆ ಒಟ್ಟು 16 ನಗರಗಳಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.
ಈ ಮೂಲಕ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಮುಂಜಾಗ್ರತೆ ವಹಿಸಿದೆ. ಪರಿಣಾಮ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ವುಹಾನ್ ರಸ್ತೆಗಳು ಇದೀಗ ನಿರ್ಜನವಾಗಿವೆ.

ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ರೋಗಿಗಳ ಚಿಕಿತ್ಸೆಗೆ ನೆರವಾಗಲು ಕ್ಷಿಪ್ರ ನಿರ್ಮಾಣದ ತಾತ್ಕಾಲಿಕ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಮಾರಕ ವೈರಾಣು ರೋಗದ ವಿರುದ್ಧ ಹೋರಾಟ ಮುಂದುವರಿಸಲಾಗಿದೆ.