ಮಕ್ಕಳಿಗೂ ವಕ್ಕರಿಸುತ್ತಿರುವ ಕೊರೊನಾ..!

Social Share

ಬೆಂಗಳೂರು,ಜ.4-ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಆರಂಭಗೊಂಡಿರುವ ಬೆನ್ನಲ್ಲೆ 19 ವರ್ಷದೊಳಗಿನ ಹಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ನಿನ್ನೆಯಿಂದ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ, ಆದರೂ ನಿನ್ನೆ ಒಂದೇ ದಿನ ರಾಜ್ಯಾದ್ಯಂತ ನೂರಾರು ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಹಗರಿಬೊಮ್ಮನಹಳ್ಳಿಯ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಸೋಂಕಿತ ಮಕ್ಕಳಿಂದ ಇನ್ನಿತರ ಹಲವಾರು ವಿದ್ಯಾರ್ಥಿಗಳಿಗೂ ಸೋಂಕು ತಗುಲಿರುವ ಆತಂಕ ಎದುರಾಗಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲಿ 142 ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.
9 ವರ್ಷದೊಳಗಿನ 33 ಹಾಗೂ 10 ರಿಂದ 19 ವರ್ಷದೊಳಗಿನ 109 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಪತ್ತೆಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಒಂದೇ ದಿನ ನಗರದಲ್ಲಿ 1041 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ 142 ಮಂದಿ 19 ವರ್ಷದೊಳಗಿನವರು ಎಂಬುದು ವಿಶೇಷವಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು , ಆದಷ್ಟು ಶೀಘ್ರ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕುವತ್ತ ಗಮನ ಹರಿಸಬೇಕಿದೆ. ಮಕ್ಕಳು ಸೇರಿದಂತೆ ಸಾವಿರಾರು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಕೊರೊನಾ ಪಾಸಿಟಿವಿಟಿ ದರವೂ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಒಂದು ವಾರದ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ 0.57 ರಷ್ಟಿದ್ದ ಪಾಸಿಟಿವಿಟಿ ರೇಟ್ ಇಂದು ಶೇ.2.36ಕ್ಕೆ ಏರಿಕೆಯಾಗಿದೆ. ಅದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲೂ ಕಳೆದ ಒಂದು ವಾರದಿಂದ ಪಾಸಿಟಿವಿಟಿ ರೇಟ್ ಏರಿಕೆಯಾಗುತ್ತ ಹೋಗುತ್ತಿದೆ. ಇದೇ ರೀತಿ ಪಾಸಿಟಿವಿಟಿ ರೇಟ್ ಶೆ.5 ರ ಗಡಿ ದಾಟುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಪಾಸಿಟಿವಿಟಿ ದರ ಶೇ.5 ರ ಗಡಿ ದಾಟಿದರೆ ತಜ್ಞರ ಪ್ರಕಾರ ಲಾಕ್‍ಡೌನ್ ಹೇರಿಕೆ ಮಾಡಬೇಕಿದೆ. ಹೀಗಾಗಿ ಪಾಸಿಟಿವಿಟಿ ದರ ಹತೋಟಿಗೆ ಬರದಿದ್ದರೆ ಶೀಘ್ರದಲ್ಲೇ ಲಾಕ್‍ಡೌನ್ ಜಾರಿಯಾದರೂ ಅಚ್ಚರಿಪಡುವಂತಿಲ್ಲ.
ರಾಜಧಾನಿಯಲ್ಲಿ ಮಿತಿ ಮೀರಿದ ಪಾಸಿಟಿವಿಟಿ: ಡಿ.27ರಂದು 269 ಮಂದಿಗೆ ಕೊರೊನಾ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಪಾಸಿಟಿವಿಟಿ ದರ ಶೇ.0.57 ಇತ್ತು. 28 ರಂದು 400 ಮಂದಿಗೆ ಸೋಂಕು ತಗುಲಿದ ಪರಿಣಾಮ ಪಾಸಿಟಿವಿಟಿ ರೇಟ್ ಶೇ.0.88ಕ್ಕೆ ಏರಿಕೆಯಾಗಿತ್ತು. 29 ರಂದು 565 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಪಾಸಿಟಿವಿಟಿ ರೇಟ್ ಶೇ.1.19ಕ್ಕೆ ಹೆಚ್ಚಳವಾಗಿತ್ತು.
30 ರಂದು 656 ಮಂದಿಗೆ ಸೋಂಕು ತಗುಲಿದ್ದ ಪರಿಣಾಮ ಪಾಸಿಟಿವಿಟಿ ದರ ಶೇ.1.31ಕ್ಕೆ ಏರಿಕೆಯಾಗಿದ್ದರೆ, 31 810 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಶೇ.1.59ಕ್ಕೆ ಪಾಸಿಟಿವಿಟಿ ಏರಿಕೆಯಾಗಿತ್ತು. ಜನವರಿ ಒಂದರಂದು 923 ಮಂದಿಗೆ ಸೋಂಕು ತಗುಲಿತ್ತು. ಜನವರಿ 2 ರಂದು 1041 ಮಂದಿಗೆ ಸೋಂಕು ತಗುಲಿದ ಪರಿಣಾಮ ಪಾಸಟಿವಿಟಿ ದರ ಶೇ.2.36ಕ್ಕೆ ಹೆಚ್ಚಾಗಿದೆ ಮುಂದಿನ ದಿನಗಳಲ್ಲಿ ಸೋಂಕು ಇದೆ ರೀತಿ ಮುಂದುವರೆದು ಪಾಸಿಟಿವಿಟಿ ದರ ಹೆಚ್ಚಾದರೆ ಅನಿವಾರ್ಯವಾಗಿ ಲಾಕ್‍ಡೌನ್ ಮಾಡಬೇಕಾದ ಪರಿಸ್ಥಿತಿ ಬರಲಿದೆ.

Articles You Might Like

Share This Article