ಬೆಂಗಳೂರು,ಜ.13-ಕೊರಾನಾ ಮತ್ತೆ ರಾಜ್ಯದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ರೂಪಾಂತರಿ ಒಮಿಕ್ರಾನ್ ತನ್ನ ಕಬಂದಬಾಹುವನ್ನು ವ್ಯಾಪಕವಾಗಿ ಹರಡಿಸುತ್ತಿದೆ. 3ನೇ ಅಲೆ ಈಗಾಗಲೇ ಆರಂಭವಾಗಿದ್ದು, ಎರಡನೇ ಅಲೆಗಿಂತಲೂ ಮೂರನೇ ಅಲೆ ದಿನೇ ದಿನೇ ವೇಗವಾಗಿ ಹರಡುತ್ತಿದೆ.
ಮೂರನೇ ಅಲೆ ಮಾರಣಾಂತಿಕವಾಗದೆ ಇರುವುದು ನಿಟ್ಟುಸಿರು ಬಿಡುವಂತ ವಿಚಾರವಾಗಿದೆ. ಆದರೆ, ಒಮಿಕ್ರಾನ್‍ನಿಂದ ಉಲ್ಬಣಿಸುತ್ತಿರುವ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಸರ್ಕಾರದ ಹಲವು ಸಚಿವರು ಸೇರಿ ಬಹುತೇಕ ಜನಪ್ರತಿನಿಗಳು ಒಬ್ಬೊಬ್ಬರಾಗಿ ಕೋವಿಡ್ನ ಸೋಂಕಿಗೊಳಗಾಗುತ್ತಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಕೊರೊನಾ ಸೋಂಕಿ ತಗುಲಿ ಇದೀಗ ಹೋಂ ಐಸೋಲೇಷನ್ನಲ್ಲಿ ಇದ್ದಾರೆ. ಲಘು ರೋಗ ಲಕ್ಷಣ ಇದ್ದು, ಮನೆಯಲ್ಲೇ ಇದ್ದು, ಆಡಳಿತ ನಡೆಸುತ್ತಿದ್ದಾರೆ. ಜ.10ರಂದು ಸಿಎಂ ಕೊರೊನಾ ಸೋಂಕಿಗೊಳಗಾದರು. ದಿನನಿತ್ಯ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳವ ಸಿಎಂಗೆ ಕೊರೊನಾ ಸೋಂಕು ತಗುಲಿದೆ.
# ಹಲವು ಸಚಿವರಿಗೆ ಕೋವಿಡ್ ಶಾಕ್:
ರಾಜ್ಯ ಸರ್ಕಾರದ ಹಲವು ಸಚಿವರಿಗೆ ಕೊರೊನಾ ತಗುಲಿ ಹೋಂ ಐಸೋಲೇಷನ್ನಲ್ಲಿ ಇದ್ದಾರೆ. ಬಹುತೇಕ ಎಲ್ಲರಿಗೂ ಲಘು ರೋಗಲಕ್ಷಣ ಕಂಡು ಬಂದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಕಂದಾಯ ಸಚಿವ ಆರ್.ಅಶೋಕ್‍ಗೆ ಕೊರೊನಾ ತಗುಲಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಸೋಂಕು ಪತ್ತೆಯಾಗುತ್ತಿದ್ದಂತೆ ಆರ್.ಅಶೋಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಹೋಂ ಐಸೋಲೇಷನ್ನಲ್ಲಿ ಇದ್ದಾರೆ.
ಉಳಿದಂತೆ ಕಾನೂನು ಸಚಿವ ಮಾಧುಸ್ವಾಮಿ ಮತ್ತೆ ಕೊರೊನಾ ಸೋಂಕಿಗೊಳಗಾಗಿದ್ದಾರೆ. ಮಾಧುಸ್ವಾಮಿಗೆ ಎರಡನೇ ಅಲೆಯಲ್ಲೂ ಕೊರೊನಾ ಬಂದಿತ್ತು. ಇದೀಗ ಮತ್ತೆ ಕೊರೊನಾ ಶಾಕ್ ನೀಡಿದೆ. ಇತ್ತ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‍ಗೂ ಎರಡನೇ ಬಾರಿ ಕೊರೊನಾ ಸೋಂಕು ತಗುಲಿದೆ. ಲಘು ರೋಗಲಕ್ಷಣದಿಂದ ಬಳಲುತ್ತಿರುವ ಸಚಿವ ಸೋಮಶೇಖರ್ ಕೂಡ ಹೋಂ ಐಸೋಲೇಷನ್ ನಲ್ಲಿದ್ದಾರೆ.
ಇನ್ನು ಶಿಕ್ಷಣ ಸಚಿವ ನಾಗೇಶ್ ಅವರಲ್ಲೂ ಸೋಂಕು ಪತ್ತೆಯಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುರ್ಮಾ ಕಟೀಲï, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಂಸದ ಗದ್ದಿಗೌಡರ್‍ಗೆ ಸೋಕು ಕಾಣಿಸಿಕೊಂಡಿದೆ. ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೂ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
# ಕೈ ನಾಯಕರಿಗೂ ಕೊರೊನಾಘಾತ:
ಇತ್ತ ಕೊರೊನಾ ವೈರಸ್ ಕಾಂಗ್ರೆಸ್ ನಾಯಕರನ್ನೂ ಬಿಟ್ಟಿಲ್ಲ. ಹಲವು ಶಾಸಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಪ್ರತಿಪಕ್ಷದ ಮುಖ್ಯಸಚೇತಕ ಡಾ.ಅಜಯ್ ಸಿಂಗ್ ಹಾಗೂ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂಗೂ ಕೊರೊನಾ ಪಾಸಿಟಿವ್ ಬಂದಿದೆ.
ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಲವರಲ್ಲಿ ಕೊರೊನಾ ಕಾಣಿಸಿಕೊಳ್ಳುವ ಭೀತಿ ಎದಿರಾಗಿದೆ. ಕೊರೊನಾ ಕಾಣಿಸಿಕೊಂಡವರಲ್ಲಿ ಎಲ್ಲರೂ ಹೋಂ ಐಸೋಲೇಷನ್ ನಲ್ಲಿದ್ದಾರೆ.
