ಭಾರತದಲ್ಲಿ 24 ಗಂಟೆಯಲ್ಲಿ ಬರೋಬ್ಬರಿ 1,17,100 ಮಂದಿಗೆ ಕೊರೋನಾ..!

Social Share

ನವದೆಹಲಿ, ಜ.7- ಭಾರತದಲ್ಲಿ 214 ದಿನಗಳ ಬಳಿಕ ದೈನಿಕ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ಗಡಿ ದಾಟಿದ್ದು, ಒಟ್ಟು ಸೋಂಕಿತರ ಪ್ರಮಾಣ 3,52,26,386ಕ್ಕೆ ಹೆಚ್ಚಾಗಿದೆ. ಈ ನಡುವೆ ರೂಪಾಂತರಿ ಓಮಿಕ್ರಾನ್ ಪ್ರಕರಣಗಳಲ್ಲಿ ಕರ್ನಾಟಕ ಮೂರನೆ ಸ್ಥಾನಕ್ಕೆ ತಲುಪಿರುವುದು ಆತಂಕ ಮೂಡಿಸಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳ ಪ್ರಕಾರ ನಿನ್ನೆ ಒಂದೇ ದಿನ ದೇಶದಲ್ಲಿ 1,17,100 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಜೂನ್ 7ರಂದು ದೇಶದ ದೈನಂದಿನ ಸೋಂಕಿನ ಪ್ರಮಾಣ 1,00,636ರಷ್ಟಿತ್ತು. ಬಳಿಕ ಅದು ಕಡಿಮೆಯಾಗಿ ಕ್ರಮೇಣ ಆರು ಸಾವಿರದಷ್ಟು ಕುಸಿದಿತ್ತು. ಕಳೆದ 10 ದಿನಗಳಿಂದ ಸೋಂಕು ಏರಿಕೆಯ ಗತಿಯಲ್ಲಿದ್ದು, ನಿನ್ನೆ 90 ಸಾವಿರಷ್ಟು ವರದಿಯಾಗಿದ್ದವು. ಇಂದು ಲಕ್ಷ ಗಡಿ ದಾಟಿವೆ.
ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ 36,265, ಪಶ್ಚಿಮ ಬಂಗಾಳದಲ್ಲಿ 15,421, ದೆಹಲಿಯಲ್ಲಿ 15,097, ತಮಿಳುನಾಡಿನಲ್ಲಿ 6,983, ಕರ್ನಾಟಕದಲ್ಲಿ 5,031 ಸೋಂಕಿನ ಪ್ರಕರಣಗಳು ವರದಿಯಾಗಿವೆ. ನಿನ್ನೆಯವರೆಗೂ ಏಳನೇ ಸ್ಥಾನದಲ್ಲಿದ್ದ ಕರ್ನಾಟಕ ಇಂದು ಸೋಂಕು ಹೆಚ್ಚಿರುವ ಐದು ರಾಜ್ಯಗಳ ಪೈಕಿ ಒಂದಾಗಿದೆ. ಓಮಿಕ್ರಾನ್ ಪ್ರಕರಣಗಳಲ್ಲಿ ಮೂರನೆಯ ಸ್ಥಾನದಲ್ಲಿದೆ.
ನಿನ್ನೆ 302 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಎಂದಿನಂತೆ ಕೇರಳದಲ್ಲಿ ಅತಿ ಹೆಚ್ಚು ಸಾವುಗಳಾಗಿವೆ, 221 ಮಂದಿ ಜೀವ ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 19 ಮಂದಿ ನಿನ್ನೆ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೂ ಒಟ್ಟು 4,83,178 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಂಡಿರುವವರ ಪ್ರಮಾಣವೂ ಹೆಚ್ಚಾಗಿದೆ. ಶೇ.97.57ರಷ್ಟು ಮಂದಿ ಅಂದರೆ ಒಟ್ಟು 3,43,71,845 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಿನ್ನೆ ಒಂದೇ ದಿನ 30,836 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ 3,71,363 ಸಕ್ರಿಯ ಪ್ರಕರಣಗಳಿವೆ, ಇದು ಶೇ.1.05ರಷ್ಟಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರೂಪಾಂತರಿ ಓಮಿಕ್ರಾನ್‍ಗಳ ಸಂಖ್ಯೆ 3007ಕ್ಕೆ ಹೆಚ್ಚಾಗಿದೆ. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮಿಕ್ರಾನ್ ಆವರಿಸಿದೆ. 1,199 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಅಥವಾ ವಲಸೆ ಹೋಗಿದ್ದಾರೆ ಎಂದು ಸರ್ಕಾರ ಗುರುತಿಸಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಓಮಿಕ್ರಾನ್ ಪ್ರಕರಣಗಳಿವೆ, 876 ಮಂದಿಗೆ ಸೋಂಕು ತಗುಲಿದೆ. ದೆಹಲಿಯಲ್ಲಿ 465 ಮಂದಿ, ಕರ್ನಾಟಕದಲ್ಲಿ 333 ಮಂದಿ, ರಾಜಸ್ಥಾನದಲ್ಲಿ 291 ಮಂದಿ, ಕೇರಳದಲ್ಲಿ 284, ಗುಜರಾತ್‍ನಲ್ಲಿ 204 ಮಂದಿಗೆ ಸೋಂಕು ತಗುಲಿದೆ.
ಒತ್ತಡಕ್ಕೆ ಒಳಗಾದ ವೈದ್ಯಕೀಯ ವ್ಯವಸ್ಥೆ:
ಸೋಂಕಿನ ಪ್ರಕರಣ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದಂತೆ ದೇಶದ ಆರೋಗ್ಯ ವ್ಯವಸ್ಥೆ ಒತ್ತಡಕ್ಕೆ ಸಿಲುಕಲಾರಂಭಿಸಿದೆ. ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಗಂಭೀರವಾಗಿ ಹೆಚ್ಚಳವಾಗಿದೆ. ಆದರೂ ಸದ್ಯಕ್ಕೆ ಯಾವುದೇ ಆತಂಕ ಇಲ್ಲ ಎಂದು ದೆಹಲಿ ಸರ್ಕಾರ ಸ್ಪಷ್ಟ ಪಡಿಸಿದೆ. ಮುಂಜಾಗೃತ ಕ್ರಮವಾಗಿ ವೈದ್ಯಕೀಯ ಸೌಲಭ್ಯವನ್ನು ಹೆಚ್ಚಿಸಲಾಗಿದೆ. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಬೆಡ್‍ಗಳು, ಐಸಿಯು ಘಟಕಗಳು, ವೆಂಟಿಲೆಟರ್‍ಗಳು ಲಭ್ಯ ಇವೆ. ಸರ್ಕಾರ ಸೋಂಕಿನ ಏರಿಕೆಯ ಮೇಲೆ ನಿಗಾವಹಿಸಿದೆ ಎಂದು ತಿಳಿಸಿದೆ.

Articles You Might Like

Share This Article