ಅಧಿವೇಶನಕ್ಕೆ ಬಂದ ಶಾಸಕರಿಗೆ ಕೊರೋನಾ ಭಯ, ಈಗಾಗಲೇ ಹಲವರಿಗೆ ಪಾಸಿಟಿವ್..!

ಬೆಂಗಳೂರು, ಸೆ.28- ವಿಧಾನಸಭೆ ಅವೇಶನ ಮುಗಿದ ಬಳಿಕ ಹಲವಾರು ಮಂದಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಸೋಂಕಿನ ಭೀತಿ ಎದುರಿಸುತ್ತಿದ್ದಾರೆ.

ಈವರೆಗೆ ಶಾಸಕರಾದ ದಿನೇಶ್ ಗುಂಡುರಾವ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವಾರು ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಪರೀಕ್ಷೆಗೆ ಒಳಗಾದ ಬಹಳಷ್ಟು ಮಂದಿ ತಮಗೆ ಸೋಂಕಿರುವ ಬಗ್ಗ ಹೇಳಿಕೊಳ್ಳದೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಶನಿವಾರ ಮಧ್ಯ ರಾತ್ರಿ 11 ಗಂಟೆವೆರೆಗೂ ವಿಧಾನಮಂಡಲ ಮತ್ತು ವಿಧಾನಸಭೆ ಅವೇಶನ ನಡೆದಿತ್ತು. ದಿನೇಶ್ ಗುಂಡುರಾವ್, ಎಚ್.ಕೆ.ಪಾಟೀಲ್ ಭಾಗವಹಿಸಿದ್ದರು, ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಅದರ ಹಿಂದಿನ ದಿನ ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದರು.

ದಿನೇಶ್ ಗುಂಡುರಾವ್ ತಮಿಳುನಾಡು ಕಾಂಗ್ರೆಸ್‍ನ ಉಸ್ತುವಾರಿ ನಾಯಕರಾಗಿ ನೇಮಕವಾಗಿದ್ದು, ಗುರುವಾರ ತಮಿಳುನಾಡಿಗೆ ಹೋಗಿ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಬಂದಿದ್ದರು. ವಿಮಾನದಲ್ಲಿ ಹೋಗಿ ಬಂದ ಕಾರಣಕ್ಕೆ ಪರೀಕ್ಷೆಗೆ ಒಳಗಾಗಿದ್ದರು.

ವರದಿ ಬರುವುದು ತಡವಾಗಿದ್ದರಿಂದ ಆತ್ಮವಿಶ್ವಾಸದಿಂದ ಅವೇಶನದಲ್ಲಿ ಭಾಗವಹಿಸಿದ್ದರು. ಮಾಜಿ ಸಚಿವ ಎಚ್.ಕೆ.ಪಾಟೀಲ್ ಎಲ್ಲಿಗೂ ಹೋಗಿರಲಿಲ್ಲ. ಆದರೂ ಕೊರೊನಾ ಸೋಂಕು ತಗುಲಿದೆ.

ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಸ್ವಯಂ ಕ್ವಾರಂಟೈನ್ ಆಗಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ. ನನ್ನ ಸಂಪರ್ಕದಲ್ಲಿದ್ದವರು ಪರೀಕ್ಷೆಗೆ ಒಳಗಾಗುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

Sri Raghav

Admin