ದೇಶಾದ್ಯಂತ 24 ಗಂಟೆಯಲ್ಲಿ 2,58,089 ಮಂದಿಗೆ ಕೊರೋನಾ, 385 ಸಾವು..!

Social Share

ನವದೆಹಲಿ,ಜ.17- ಅಂಕೆ ಮೀರುತ್ತಿದ್ದ ಕೊರೊನಾ ಕೊಂಚ ನಿಯಂತ್ರಣಕ್ಕೆ ಬಂದಂತಿದೆ. ನಿನ್ನೆಗಿಂತ ಸುಮಾರು 13 ಸಾವಿರದಷ್ಟು ಪ್ರಕರಣಗಳು ಕಡಿಮೆಯಾಗಿವೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 2,58,089 ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ನಿನ್ನೆ ಪ್ರಕರಣಗಳಿಗೆ ಹೋಲಿಸಿದರೆ 13 ಸಾವಿರದಷ್ಟು ಪ್ರಕರಣಗಳು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಒಂದು ದಿನದಲ್ಲಿ 1,51,740 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆಯು ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ದೇಶದಲ್ಲಿ ಒಟ್ಟಾರೆ 16,56,341 ಸಕ್ರಿಯ ಪ್ರಕರಣಗಳಿವೆ. ಈ ಸೋಂಕಿನಿಂದ ಕಳೆದ 24 ಗಂಟೆಯಲ್ಲಿ 385 ಮಂದಿ ಸಾವನ್ನಪ್ಪಿರುವುದು ಸೇರಿದಂತೆ ಈವರೆಗೆ ದೇಶದಲ್ಲಿ 486451 ಮಂದಿ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿನ ಜೊತೆ ರೂಪಾಂತರಿ ಓಮಿಕ್ರಾನ್ 8,209 ಪ್ರಕರಣಗಳು ಕೂಡ ಪತ್ತೆಯಾಗಿವೆ. ಈವರೆಗೆ 158.12 ಕೋಟಿಯಷ್ಟು ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಓಮಿಕ್ರಾನ್ ಸೋಂಕಿತರಾದ 8,209 ಜನರ ಪೈಕಿ 3,109 ಜನ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ, ದೆಹಲಿ ಮತ್ತು ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ.
ಮಹಾರಾಷ್ಟ್ರದಲ್ಲಿ 1738, ಕರ್ನಾಟಕ 548, ದೆಹಲಿ 548, ರಾಜಸ್ಥಾನ 1276 ಮತ್ತು ಪಶ್ಚಿಮ ಬಂಗಾಳ 1672 ಪ್ರಕರಣಗಳು ದಾಖಲಾಗಿವೆ.ಚುನಾವಣೆ ಘೋಷಣೆಯಾಗಿರುವ ಉತ್ತರಪ್ರದೇಶ, ಪಂಜಾಬ್, ಉತ್ತರಖಂಡ್, ಮಣಿಪುರ, ದೆಹಲಿ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಬೃಹತ್ ರ್ಯಾಲಿ, ಸಮಾವೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಹರಡುವಿಕೆಯನ್ನು ತಡೆಯಲು ಹಲವು ರಾಜ್ಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ವೀಕೆಂಡ್ ಕಫ್ರ್ಯೂ, ನೈಟ್ ಕಫ್ರ್ಯೂ, ಶಾಲಾಕಾಲೇಜುಗಳನ್ನು ಬಂದ್ ಮಾಡಿರುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಸಾಂಕ್ರಾಮಿಕ ಕೊರೊನಾ ಕಟ್ಟಿ ಹಾಕಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

Articles You Might Like

Share This Article