ನವದೆಹಲಿ, ಜ.24- ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತಗ್ಗಿವೆ. ಕಳೆದ 24 ಗಂಟೆಯಲ್ಲಿ 27,469ರಷ್ಟು ಕಡಿಮೆ ಸೋಂಕು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ನಿನ್ನೆ 3,06,064 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಮಹಾಮಾರಿಗೆ 439 ಜನ ಬಲಿಯಾಗಿದ್ದಾರೆ.
ಸೋಂಕಿನಿಂದ 2,43,495 ಜನ ಗುಣಮುಖರಾಗಿದ್ದಾರೆ. ದೇಶದಲ್ಲಿ ಈಗ ಒಂದು ದಿನಕ್ಕೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವವರ ಪೈಕಿ ಶೇ.20.75 ಜನರಲ್ಲಿ ಕೋವಿಡ್ ಪತ್ತೆಯಾಗುತ್ತಿದೆ. ಪ್ರಸ್ತುತ ದೇಶದಲ್ಲಿ 22,49,335 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಒಂದೇ ದಿನ 2,43,495 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸೇರಿದಂತೆ ಒಟ್ಟಾರೆ ಸೋಂಕಿನಿಂದ 3,68,04,145 ಮಂದಿ ಗುಣಮುಖರಾಗಿದ್ದಾರೆ.
ಗುಣಮುಖರಾಗುವವರ ಪ್ರಮಾಣ ಶೇ.93.07ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈವರೆಗೆ 162,26,07,516 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ದೇಶದ ವಿವಿಧೆಡೆ ಕೊರೊನಾ ಪ್ರಕರಣಗಳು ತಗ್ಗುತ್ತಿದ್ದರೂ ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಹಲವು ರಾಜ್ಯಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕೊರೊನಾ ಮೂರನೆ ಅಲೆ ವ್ಯಾಪಕವಾಗಿ ಹರಡುತ್ತಿದೆಯಾದರೂ ಅಪಾಯಕಾರಿಯಾಗಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಸ್ಪಷ್ಟ ಸೂಚನೆ ರವಾನಿಸಿದ್ದಾರೆ.
