ನವದೆಹಲಿ, ಜ.11- ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿನ್ನೆಗಿಂತ ತುಸು ಇಂದು ಕಡಿಮೆಯಾಗಿದ್ದು, 1.68 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 277 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೂಪಾಂತರಿ ಸೋಂಕು 4,461ಕ್ಕೆ ಆವರಿಸಿದೆ. ಕಳೆದ 208 ದಿನಗಳ ಬಳಿಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 8,21,446 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಒಟ್ಟು ಸೋಂಕಿನಲ್ಲಿ ಶೇ.2.29ರಷ್ಟು ಸಕ್ರಿಯ ಪ್ರಕರಣಗಳಿವೆ.
ಒಟ್ಟು ಚೇತರಿಕೆಯ ಪ್ರಮಾಣ ಶೇ.96.36ರಷ್ಟಿದೆ. ನಿನ್ನೆ ಒಂದೇ ದಿನ 97,827 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿನದ ಸಾವಿನ ಸಂಖ್ಯೆ 277ರನ್ನು ಒಳಗೊಂಡು ಒಟ್ಟು 4,84,213ರಷ್ಟಾಗಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಮಾಹಿತಿ ನೀಡಿದೆ.
ಓಮಿಕ್ರಾನ್ ಪ್ರಕರಣಗಳು 4,461ರಷ್ಟಾಗಿದ್ದು, 1711 ಮಂದಿ ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ 1,247, ರಾಜಸ್ಥಾನದಲ್ಲಿ 645, ದೆಹಲಿಯಲ್ಲಿಯಲ್ಲಿ 546, ಕರ್ನಾಟಕದಲ್ಲಿ 479 ಮತ್ತು ಕೇರಳದಲ್ಲಿ 350 ಮಂದಿಗೆ ರೂಪಾಂತರಿ ಸೋಂಕು ತಗುಲಿದೆ. ದಿನದ ಸೋಂಕಿನ ಪ್ರಮಾಣ 1,68,063ರಷ್ಟಾಗಿದ್ದು, ಒಟ್ಟು ಸೋಂಕಿನ ಸಂಖ್ಯೆ 3,58,75,790ಕ್ಕೆ ಏರಿಕೆಯಾಗಿದೆ. ನಿನ್ನೆ 69,959 ಮಂದಿ ಸೇರಿ 3,45,70,131 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ 33,470 ಮಂದಿಗೆ ಸೋಂಕು ತಗುಲಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 8 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 19,166 ಮಂದಿಗೆ ಸೋಂಕು ತಗುಲಿದೆ. ದೇಶದಲ್ಲಿ ನಿಧಾನಗತಿಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಏರಿಕೆಯಾಗುತ್ತಿದೆ.
ಈವರೆಗೆ ಶೇ. 5ರಿಂದ 10ರಷ್ಟು ಬೆಡ್‍ಗಳು ಭರ್ತಿಯಾಗಿವೆ. ಆದರೂ ಆರೋಗ್ಯ ಕ್ಷೇತ್ರ ಬಲವಾಗಿದ್ದು, ಪರಿಸ್ಥಿತಿ ಕ್ರಿಯಾತ್ಮಕವಾಗಿದೆ. ಆಸ್ಪತ್ರೆಯ ಹಾರೈಕೆ ವ್ಯವಸ್ಥೆ ಬದಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಕೋವಿಡ್ ಸೋಂಕಿತರ ಜೊತೆ ಸಂಪರ್ಕ ಇದ್ದಾಗ್ಯೂ, ಅಪಾಯಕಾರಿ ಲಕ್ಷಣಗಳಿಲ್ಲದ ಹೊರತು ಪರೀಕ್ಷೆ ಕಡ್ಡಾಯವಲ್ಲ. ಗಂಭೀರ ಕಾಯಿಲೆಗಳಿಂದ ಬಳಲುವವರು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ ಎಂದು ದೇಶದ ಅತ್ಯನ್ನತ ವೈದ್ಯಕೀಯ ಸಂಸ್ಥೆ ಸ್ಪಷ್ಟ ಪಡಿಸಿದೆ.
ಸೋಂಕು ಹೆಚ್ಚಳದ ನಡುವೆಯೂ ಕೇಂದ್ರ ಸರ್ಕಾರ ಲಸಿಕಾ ಅಭಿಯಾನವನ್ನು ತೀವ್ರಗೊಳಿಸಿದೆ, ಈವರೆಗೂ ದೇಶದಲ್ಲಿ 152.89 ಡೋಸ್‍ಗಳನ್ನು ನೀಡಲಾಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಮುಂಚೂಣಿ ಕಾರ್ಯಕರ್ತರು, ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ನಿನ್ನೆಯಿಂದ ಮುನ್ನೆಚ್ಚರಿಕೆಯ ಡೋಸ್ ಆಗಿ ಬೂಸ್ಟರ್ ಲಸಿಕೆ ನೀಡಲು ಆರಂಭಿಸಲಾಗಿದೆ.
