ಕಿಲ್ಲರ್ ಕೊರೋನಾ ವೈರಸ್‌ನಿಂದ ಸತ್ತವರ ಸಂಖ್ಯೆ 60ಕ್ಕೆ ಏರಿಕೆ..!

ಬೀಜಿಂಗ್, ಜ.26- ಏಷ್ಯಾಖಂಡ ಮಾತ್ರವಲ್ಲದೆ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಚೀನಾದ ಕೊರೋನಾ ವೈರಸ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಸತ್ತವರ ಸಂಖ್ಯೆ 60ಕ್ಕೆ ಏರಿದೆ. ಅಲ್ಲದೆ, ಇನ್ನೂ 2000ಕ್ಕೂ ಹೆಚ್ಚು ಮಂದಿಯಲ್ಲಿ ವೈರಾಣು ಪತ್ತೆಯಾಗಿದ್ದು, 250ಕ್ಕೂ ಅಧಿಕ ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ತುರ್ತು ಕ್ರಮಗಳನ್ನು ಘೋಷಣೆ ಮಾಡಿದೆ. ದೇಶದ 20 ನಗರಗಳಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಲಕ್ಷಾಂತರ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ವುಹಾನ್, ಹುವಾಂಗ್ ಗಾಂಗ್, ಈಝೌ, ಝಿಜಿಯಾಂಗ್ ಮತ್ತು ಕ್ವಿಯಾನ್ ಜಿಯಾಂಗ್ ಸೇರಿದಂತೆ ಒಟ್ಟು 20 ನಗರಗಳಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.
ಈ ಮಧ್ಯೆ ಚೀನಾ ಸರ್ಕಾರ ಫಾಸ್ಟ್‍ಟ್ರ್ಯಾಕ್ ಆಸ್ಪತ್ರೆಗಳ ನಿರ್ಮಾಣದಲ್ಲಿ ತೊಡಗಿದ್ದು, ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆ ಮುಂದುವರಿಸಿದೆ.  ಸೋಂಕು ವೇಗವಾಗಿ ಹಬ್ಬುತ್ತಿರುವುದು ಆರೋಗ್ಯ ಕಾರ್ಯಕರ್ತರಲ್ಲಿ ತೀವ್ರ ಆತಂಕ ಉಂಟುಮಾಡಿದೆ.