ಬೆಂಗಳೂರು,ಜ.4- ರಾಜ್ಯದಲ್ಲಿ ನಿನ್ನೆ ಒಂದೇ ದಿನ ಕೋವಿಡ್ ಸೋಂಕು ದಿಢೀರ್ ಏರಿಕೆಯಾಗಿರುವುದು ಮೂರನೇ ಅಲೆಯ ಸುಳಿವಲ್ಲವೇ? ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.0.4ರಷ್ಟಿದ್ದ ಪಾಸಿಟಿವಿಟಿ ದರ ಶೇ.1.6ಕ್ಕೆ ಏರಿಕೆಯಾಗಿದೆ. ಇದು ಮೂರನೇ ಅಲೆ ಅಲ್ಲವೇ? ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು.
ರಾಜ್ಯದಲ್ಲಿ ನಿನ್ನೆ 1290 ಪಾಸಿಟಿವ್ ಪ್ರಕರಣಗಳು ಬಂದಿದ್ದು ಇದರಲ್ಲಿ ಶೇ.90ರಷ್ಟು ಬೆಂಗಳೂರಿನಲ್ಲಿ ಸೇರಿವೆ. ನೆರೆ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಒಳಗೊಂಡಂತೆ ಸಾಮಾನ್ಯ ಜನರ ಮೇಲೆ ಒತ್ತಡ ಹೇರದಂತೆ ಈ ಸವಾಲನ್ನು ಎದುರಿಸಬೇಕಾಗಿದೆ.
ಲಾಕ್‍ಡೌನ್ ಜಾರಿಯಂತ ಕಠಿಣ ಪದ ಬಳಸುವುದು ಬೇಡ. ಈಗಷ್ಟೆ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಲಾಕ್‍ಡೌನ್ ಮರುಜಾರಿಯಾದರೆ ಅನೇಕ ನಷ್ಟಕ್ಕೆ ಗುರಿಯಾಗ ಬೇಕಾಗುತ್ತದೆ. ಸೋಂಕು ಹರಡುವಿಕೆ ತಡೆಯಲು ಬೆಂಗಳೂರಿನಲ್ಲಿ ವಿಶೇಷ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕ. ಮೊದಲೆರಡು ಅಲೆಗಳಂತೆ 3ನೇ ಅಲೆಗೂ ಕೂಡ ಬೆಂಗಳೂರೇ ಕೇಂದ್ರ ಸ್ಥಾನ. ನಿರೀಕ್ಷೆಗೂ ಮೀರಿದ ವೇಗದಲ್ಲಿ ಸೋಂಕು ಹರಡುತ್ತಿದೆ ಎಂದು ಹೇಳಿದರು.
ಇಂದು ಸಂಜೆ ಮುಖ್ಯಮಂತ್ರಿ ನೇತೃತ್ವದಲ್ಲಿ ಕೋವಿಡ್ ಟಾಸ್ಕ್ ಫೆÇೀರ್ಸ್, ಸಲಹಾ ಸಮಿತಿ, ತಾಂತ್ರಿಕ ತಜ್ಞರು ಒಳಗೊಂಡ ಹಿರಿಯ ಅಕಾರಿಗಳ ಸಭೆ ನಡೆಯಲಿದ್ದು, ಕೋವಿಡ್ ಹಾಗೂ ಓಮಿಕ್ರಾನ್ ಸೋಂಕು ತಡೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು.
ಜನಜಂಗುಳಿ ಹಾಗೂ ಸಮಾರಂಭಗಳಿಂದ ಉಂಟಾಗ ಬಹುದಾದ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಒಂದು ವೇಳೆ ಜನಜಂಗುಳಿ ಸೇರುವಿಕೆಗೆ ಸರ್ಕಾರ ನಿಷೇಧ ಹೇರಿದರೆ ಎಲ್ಲರೂ ಪಾಲನೆ ಮಾಡ ಬೇಕಾಗುತ್ತದೆ. ಕಾಂಗ್ರೆಸಿಗರು ಮೇಕೆದಾಟಿಗಾಗಿ ಪಾದಯಾತ್ರೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ಕೋವಿಡ್ ಹೆಚ್ಚುತ್ತಿರುವ ವೇಗ ನೋಡಿದರೆ ಹಲವು ಜಿಲ್ಲೆಗಳಿಂದ ಪಾದಯಾತ್ರೆಗೆ ಜನರು ಬರುತ್ತಿದ್ದಾರೆ. ಇದರಿಂದ ಸೋಂಕು ಹೆಚ್ಚಾದರೆ ಅದರ ಜವಾಬ್ದಾರಿಯನ್ನು ಅವರೇ ಹೊರಬೇಕು.
ಪಾದಯಾತ್ರೆ ನಿಲ್ಲಿಸಲು ನಾವು ನೆಪ ಹೇಳುತ್ತಿಲ್ಲ. ಈಗಾಗಲೇ ದೆಹಲಿ, ಮುಂಬೈನಲ್ಲಿ ಸೋಂಕು ಹೆಚ್ಚಾಗಿದೆ. ಅದಕ್ಕೆ ನಾವು ಕಾರಣವೇ? ಸ್ವಾಭಾವಿಕವಾಗಿ ಸೋಂಕು ಹೆಚ್ಚಾಗುತ್ತಿರುವುದನ್ನು ಗಮನಿಸಬೇಕು. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿರುವುದರಿಂದ ವಿದೇಶಿಗರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ. ಹೀಗಾಗಿ ಅವರ ಮೇಲೆ ನಿಗಾ ಇಟ್ಟು ಸೋಂಕು ಹರಡುವಿಕೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.
ವ್ಯಾಪಕವಾದ ಕ್ರಮಗಳನ್ನು ಸೋಂಕು ತಡೆಯಲು ಕೈಗೊಳ್ಳಲಿದ್ದು, ಸಂಜೆ ಸಭೆಯ ನಂತರ ಏನೇನು ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ತಿಳಿಸಲಾಗುವುದು ಎಂದರು. ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲೇ ಹೆಚ್ಚು ಸೋಂಕು ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಹೆಚ್ಚಿನ ನಿಗಾ ವಹಿಸುವುದಲ್ಲದೆ ಮೈಕ್ರೋ ಕಂಟೋನ್ಮೆಂಟ್ ಜೋನ್‍ಗಳನ್ನು ಹೆಚ್ಚು ಮಾಡಲಾಗುವುದು ಎಂದರು.
15 ದಿನಗಳಲ್ಲಿ ಮಕ್ಕಳಿಗೆ ಲಸಿಕೆ:
15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದನ್ನು ನಿನ್ನೆ ಪ್ರಾರಂಭಿಸಿದ್ದು, 10ರಿಂದ 15 ದಿನಗಳÀಲ್ಲಿ ಎಲ್ಲರಿಗೂ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲಿ 43 ಲಕ್ಷ ಮಕ್ಕಳಿದ್ದು, ಅವರೆಲ್ಲರಿಗೂ ಕೇಂದ್ರದÀ ಮಾರ್ಗ ಸೂಚಿಯಂತೆ ಮೊದಲ ಡೋಸ್ ಲಸಿಕೆ ನೀಡಲಾಗುವುದು ಎಂದರು.
2ನೇ ಡೋಸ್ ಲಸಿಕೆ ನೀಡಿಕೆ ಬಗ್ಗೆ ಕೇಂದ್ರದಿಂದ ಮಾರ್ಗಸೂಚಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ನಿನ್ನೆ 6.38ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇತ್ತು. ಆದರೆ 4,22,152 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಶೇ.66ರಷ್ಟು ಸಾಧನೆ ಮಾಡಿದ್ದು, ದೇಶದಲ್ಲಿ 4ನೇ ಸ್ಥಾನ ರಾಜ್ಯವಿದೆ ಎಂದು ಹೇಳಿದರು.
