ದೇಶದಲ್ಲಿ ಕೊರೊನಾರ್ಭಟ : ಒಂದೇ ದಿನ 15,413 ಪಾಸಿಟಿವ್, 306 ಸಾವು..!

ನವದೆಹಲಿ/ಮುಂಬೈ, ಜೂ. 21-ಕಿಲ್ಲರ್ ಕೊರೊನಾ ವೈರಸ್ ದಾಳಿ ಭಾರತದಲ್ಲಿ ಉಗ್ರ ಸ್ವರೂಪದಲ್ಲಿಯೇ ಮುಂದುವರಿದಿದೆ. ದೇಶದಲ್ಲಿ 24 ಗಂಟೆಗಳಲ್ಲಿ ಭಾರೀ ಪ್ರಮಾಣದ ದಾಖಲೆ ಮಟ್ಟದಲ್ಲಿ ಅಂದರೆ 15,400ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದೆ.

ಇದೇ ಅವಧಿಯಲ್ಲಿ 306 ರೋಗಿಗಳು ಅಸುನೀಗಿದ್ದಾರೆ. ನಿನ್ನೆ ಪಾಸಿಟಿವ್ ಪ್ರಕರಣಗಳಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಕೊರೊನಾ ಹಾವಳಿ ನಂತರ ಸುಮಾರು 15,500 (ನಿನ್ನೆ ಮಧ್ಯರಾತ್ರಿವರೆಗೆ 15,413 ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಇದೇ ಮೊದಲು.

ಪರಿಸ್ಥಿತಿ ಇದೇ ರೀತಿ ವಿಷಮ ಸ್ಥಿತಿಯಲ್ಲಿ ಮುಂದುವರಿದೆ ದೇಶಕ್ಕೆ ಮತ್ತಷ್ಟು ದೊಡ್ಡ ಗಂಡಾಂತರ ಎಂಬ ಭಯ ಜನರನ್ನು ಕಾಡುತ್ತಿದೆ.  ದೇಶದಲ್ಲಿ ಸತತ 13 ದಿನಗಳಿಂದ ಮೃತರ ಸಂಖ್ಯೆ 300 ಮೀರಿರುವುದು ಹಾಗೂ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿರುವುದು ಆಘಾತಕಾರಿ ವಿದ್ಯಮಾನವಾಗಿದೆ.

ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 4.10 ಲಕ್ಷ ದಾಟಿದ್ದು, ಒಟ್ಟು 13,254 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಸತತ 18 ದಿನಗಳಿಂದ ಸೋಂಕಿತರ ಸಂಖ್ಯೆ 9,000+ನಿರಂತರ 10 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ. ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಜೂನ್ 1 ರಿಂದ 21ರವರೆಗೆ ಬಹುತೇಕ 2.20 ಲಕ್ಷ ದಾಖಲಾಗಿದೆ.

ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 14,000 ಮತ್ತು ಸೋಂಕು ಬಾಧಿತರ ಸಂಖ್ಯೆ 4.25 ಲಕ್ಷ ತಲುಪುವ ಆತಂಕವಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ಸೋಂಕು ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ದಿನೇ ದಿನೇ ಸಾಂಕ್ರಾಮಿಕ ರೋಗಿಗಳ ಸಂಖ್ಯೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ಅಪಾಯಕಾರಿ ವಿದ್ಯಮಾನವಾಗಿದೆ.  ಅನೇಕ ರಾಜ್ಯಗಳಲ್ಲಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾವುಗಳು ವರದಿಯಾಗಿದೆ.

ಜುಲೈನಲ್ಲಿ ಕೋವಿಡ್-19 ವೈರಸ್ ಹಾವಳಿ ಮತ್ತಷ್ಟು ತೀವ್ರವಾಗುವ ಮುನ್ಸೂಚನೆ ಎಂಬಂತೆ ಜೂನ್‍ನಲ್ಲಿ ಪಿಡುಗು ಉಗ್ರಸ್ವರೂಪದಲ್ಲೇ ಮುಂದುವರಿದಿದೆ. ಈ ನಡುವೆ ದೇಶದಲ್ಲಿ ರೋಗಿಗಳ ಚೇತರಿಕೆ ಪ್ರಮಾಣದಲ್ಲಿ ಶೇ. 55.48ರಷ್ಟು ವೃದ್ದಿ ಕಂಡುಬಂದಿರುವುದು ಸ್ವಲ್ಪ ಸಮಾಧಾನಕರ ಸಂಗತಿಯಾಗಿದೆ.