ಬೆಂಗಳೂರು,ಜ.31- ಲಸಿಕೆ ಹಾಕಿಸಿಕೊಳ್ಳದವರಿಗಿಂತ ಲಸಿಕೆ ಪಡೆದವರಿಗೆ ಕೊರೊನಾ ಸೋಂಕು ಕಾಡುತ್ತಿರುವುದು ಬಿಬಿಎಂಪಿ ವರದಿಯಲ್ಲಿ ಬಹಿರಂಗಗೊಂಡಿದೆ. ಅದರಲ್ಲೂ ಈಗಾಗಲೆ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರನ್ನೇ ಕೊರೊನಾ ಕಾಡುತ್ತಿರುವುದು ಸಾಬೀತಾಗಿದೆ.
ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ 505 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 505 ಮಂದಿಯಲ್ಲಿ 276 ಮಂದಿ ಎರಡು ಡೋಸ್ ಪಡೆದವರೆ ಇರುವುದು ಅಚ್ಚರಿಗೆ ಕಾರಣವಾಗಿದೆ. ಕೇವಲ 45 ಮಂದಿ ಸಿಂಗಲ್ ಡೋಸ್ ಹಾಕಿಸಿಕೊಂಡಿದ್ದರೂ ಸೋಂಕು ಕಾಣಿಸಿಕೊಂಡಿದ್ದರೆ, 184 ಮಂದಿ ಮಾತ್ರ ಇದುವರೆಗೂ ಲಸಿಕೆಯನ್ನೆ ಹಾಕಿಸಿಕೊಂಡಿಲ್ಲ.
ಲಸಿಕೆ ಹಾಕಿಸಿಕೊಂಡ ತಕ್ಷಣ ಕೊರೊನಾ ಸೋಂಕು ಬರಲ್ಲ ಅನ್ನೋದಕ್ಕೆ ಗ್ಯಾರಂಟಿ ಇಲ್ಲ. ಆದರೆ, ಸೋಂಕು ಉಲ್ಬಣಗೊಳ್ಳುವುದನ್ನು ತಪ್ಪಿಸುವಲ್ಲಿ ಲಸಿಕೆ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸೋಂಕು ಕಾಣಿಸಿಕೊಂಡು ಐಸಿಯು ಸೇರುತ್ತಿರುವ ಸೋಂಕಿತರು ಇತರೆ ರೋಗಲಕ್ಷಣಗಳಿಂದ ನರಳುತ್ತಿರುವವರೇ ಹೆಚ್ಚು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಕಳೆದ ವಾರ ಇದ್ದ ಕೊರೊನಾ ಸಾವಿನ ಪ್ರಮಾಣ 0.03 ರಿಂದ 0.06ಗೆ ಏರಿಕೆಯಾಗಿರುವುದು ಸ್ವಲ್ಪ ಆತಂಕ ಸೃಷ್ಟಿಸಿದೆ.
